ಹೆಣ್ಣೆಂದರೆ ಬರೀ ದೇಹವಲ್ಲ, ಮುಗಿಲೆತ್ತರದ ಮನಸ್ಸು…

ಹತ್ರಾಸ್‍ನಲ್ಲಿ ನಡೆದ ರೇಪ್ ಪ್ರಕರಣ ಹೃದಯ ಭಾರವಾಗಿಸಿತು. ಬರಗೂರು ರಾಮಚಂದ್ರಪ್ಪನವರ ಮಾತು  `ಹೆಣ್ಣೆಂದರೆ ಬರೀ ದೇಹವಲ್ಲ, ಮುಗಿಲೆತ್ತರದ ಮನಸ್ಸು’ ಎಂಬುದು ಮನನೀಯ ಮತ್ತು ಆಚರಣೀಯ. ಹೆಣ್ಣನ್ನು ಬರೀ ಭೋಗದ ವಸ್ತುವೆಂದು ನೋಡುವ ಗಂಡಸರ ದೃಷ್ಟಿಕೋನ ಖಂಡನೀಯ. ಜೀವನದಲ್ಲಿ ಸ್ತ್ರೀ ವಿವಿಧ ಪಾತ್ರಗಳಲ್ಲಿ ಪಡುವ ಪರಿಶ್ರಮಕ್ಕೆ ನಾವೆಲ್ಲರು ಖಂಡಿತ ಕೃತಜ್ಞರಾಗಿರಬೇಕು. ಸ್ತ್ರೀಯರು ಹೃದಯದಂತೆ, ಪ್ರಕೃತಿಯಂತೆ, ಜೇನಿನಂತೆ ಇಡೀ ದಿನ ಒಂದಲ್ಲಾ ಒಂದು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮನೆ, ಸಂಸಾರ, ಸಮಾಜಕ್ಕೆ ಅಪಾರ ಕೊಡುಗೆ ಕೊಡುತ್ತಿರುವುದು ಸುಳ್ಳಲ್ಲ. 

ಜಿ.ಎಸ್. ಶಿವರುದ್ರಪ್ಪನವರ ಕವಿತೆಯಲ್ಲಿ ‘ಸ್ತ್ರೀ ಅಂದರೆ ಅಷ್ಟೆ ಸಾಕೆ ?’ ಹೊತ್ತು ಹೊತ್ತಿಗೆ ಅನ್ನ ಉಣಿಸಿದಾಕೆ, ಮನೆ ಮನೆಯ ದೀಪ ಮುಡಿಸಿದಾಕೆ. ತಂದೆ, ಮಗನ ತಬ್ಬಿದಾಕೆ ಎಂದು ಭಾವುಕರಾಗಿ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ಇದು ಅನುಕರಣೀಯ. ನಾವೆಲ್ಲರೂ ಸ್ತ್ರೀಯರಿಗೆ ಸಲ್ಲಿಸಬೇಕಾದ ಕೃತಜ್ಞತೆ ಇದು. ಸ್ತ್ರೀ ಭೂ ತಾಯಿಯಂತೆ ಸೃಷ್ಟಿಸುವವಳು, ಪೋಷಿಸುವವಳು. ಆಕೆಯನ್ನು ನಾವು ದುರ್ಭಾವನೆಯಿಂದ ನೋಡುವುದು ಮಾತೃದ್ರೋಹ.

ಶಾಲೆಗಳಲ್ಲಿ ನೀತಿಯುತ ಲೈಂಗಿಕತೆ ಬಗ್ಗೆ ಅರಿವು ಮೂಡಿಸಬೇಕು. ಮನೆಯಲ್ಲಿಯೂ ನೈತಿಕ ಶಿಕ್ಷಣವನ್ನು ತಂದೆ-ತಾಯಂದಿರು ಮಾದರಿ ನಡೆ-ನುಡಿಗಳಿಂದ ಕಲಿಸಬೇಕು. ಅಂತರ್ಜಾಲದಲ್ಲಿ ಅಸಹಜ ಸಂಬಂಧಗಳಾದ ತಂದೆ-ಮಗಳು, ಅಣ್ಣ-ತಂಗಿ ಇತ್ಯಾದಿ ಲೈಂಗಿಕ ಸಂಬಂಧಗಳನ್ನು ತೋರಿಸುವುದು ಖಂಡಿತಾ ಅನೈತಿಕತೆಯ ಅಡ್ಡದಾರಿಗೆ ಎಳೆಯುವ ಕಿಡಿಗೇಡಿ ಕಾರ್ಯ. 

ಸಂವಿಧಾನ ಶಿಲ್ಪಿ ಅಂಬೇಡ್ಕರ್‍ರವರು `ನೊಂದವರ, ಹೆಣ್ಣು ಮಕ್ಕಳ, ಅಸ್ಪೃಶ್ಯರ ಸಾಮಾಜಿಕ ನ್ಯಾಯ, ಸಮಾನತೆ, ಸ್ವಾತಂತ್ರ್ಯಕ್ಕಾಗಿ ಸದಾ ಶ್ರಮಿಸುತ್ತೇನೆಂದು’ ಹೇಳಿ, ಅದರಂತೆ ನಡೆದದ್ದು ಸ್ವಾಗತಾರ್ಹ. ನಾವೆಲ್ಲರೂ ಸಹ ನಮ್ಮೆಲ್ಲ ಇತಿಮಿತಿಗಳಲ್ಲಿ ಸಹಜೀವಿಯಾದ ಸ್ತ್ರೀಗೆ ಸೂಕ್ತ ಸ್ಥಾನಮಾನ, ಪ್ರೀತಿ, ಗೌರವ ಕೊಡಲೇಬೇಕು. ರೇಪ್‍ನಂತಹ ದುಷ್ಕೃತ್ಯಕ್ಕೆ ಇತ್ತೀಚೆಗೆ ಕೋ-ಎಜುಕೇಶನ್‍ಗಳಿಲ್ಲದಿರುವುದು, ಕೂಡು ಕುಟುಂಬಗಳಿಲ್ಲದಿರುವುದು ಸಹ ಒಂದು ಪ್ರಮುಖ ಕಾರಣ. ಅಕ್ಕ-ತಂಗಿಯರ ಜೊತೆ ಬೆಳೆದರೆ ಎಲ್ಲಾ ಹೆಣ್ಣು ಮಕ್ಕಳನ್ನು ಕಾಮದ ದೃಷ್ಟಿಯಲ್ಲಿ ನೋಡುವುದಿಲ್ಲ. ಅಲ್ಲದೆ ಇತ್ತೀಚಿನ ಮುಕ್ತ ಮಿಡಿಯಾಗಳಲ್ಲಿ ಅತೀ ಉತ್ಪ್ರೇಕ್ಷೆಗಳನ್ನು ತೋರಿಸುವುದು, ಗಂಡಸರಲ್ಲಿ ದುಶ್ಚಟಗಳು ಹೆಚ್ಚಾಗುತ್ತಿರುವುದು ಇಂತಹ ಅಮಾನವೀಯ ಕೃತ್ಯಕ್ಕೆ ಪ್ರಮುಖ ಕಾರಣವಾಗಿವೆ. ಇಂತಹ ಸಮಾಜಘಾತುಕ ಘಟನೆಗಳಿಂದಾಗಿ ತಂದೆ, ತಾಯಂದಿರು ಹೆಣ್ಣು ಮಗುವನ್ನೇ ಬೇಡವೆಂದು ಹೆಣ್ಣು ಭ್ರೂಣ ಹತ್ಯೆ ಮಾಡುವ ಕೃತ್ಯ ಹೆಚ್ಚಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ, ಈಗಾಗಲೇ ಕಡಿಮೆಯಾಗುತ್ತಿರುವ ಹೆಣ್ಣುಗಳ ಸಂಖ್ಯೆ ಇನ್ನಷ್ಟು ಕುಸಿತಗೊಂಡು ಸೃಷ್ಟಿಗೆ ಹೊಡೆತ ಬೀಳುವ ಸಂಭವ ಹೆಚ್ಚು.  

ಎಲ್ಲರೂ ಎಚ್ಚೆತ್ತು ಸ್ತ್ರೀ ಕುಲವನ್ನು ನಾಶವಾಗದಂತೆ ನೋಡಿಕೊಳ್ಳೋಣ, ಅವರನ್ನು ತಮ್ಮಂತೆಯೇ ಗೌರವಿಸಿ. ಉತ್ತಮ ಸಮಾಜ ನಿರ್ಮಾಣ ಮಾಡೋಣ.


ಶಿವನಕೆರೆ ಬಸವಲಿಂಗಪ್ಪ
ಕರುಣಾ ಜೀವ ಕಲ್ಯಾಣ ಟ್ರಸ್ಟ್
ದಾವಣಗೆರೆ.
[email protected]

error: Content is protected !!