ನಿರ್ಲಕ್ಷ್ಯ ವಹಿಸದೇ ಕೆಲಸ ಮಾಡಿ ಇಲ್ಲವೇ ವರ್ಗಾವಣೆಯಾಗಿ

ಜಗಳೂರು ತಾಲ್ಲೂಕಿನ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ ಎಸ್.ವಿ. ರಾಮಚಂದ್ರ 

ಜಗಳೂರು, ಜು. 15- ಅಧಿಕಾರಿಗಳು ಕೊರೊನಾ ವೈರಸ್ ನಿಯಂತ್ರಿಸಲು ನಿರ್ಲಕ್ಷ್ಯ ಮಾಡದೇ ಕೆಲಸ ಮಾಡಬೇಕು. ಇಲ್ಲವೇ  ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು  ಎಂದು ಶಾಸಕ ಎಸ್.ವಿ. ರಾಮಚಂದ್ರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು  ಪಂಚಾಯಿತಿ  ಸಭಾಂಗಣದಲ್ಲಿ  ಕೋವಿಡ್ ಹಿನ್ನೆಲೆಯಲ್ಲಿ  ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದೇ  ದಿನ 19 ಪ್ರಕರಣಗಳು ಕಂಡು ಬಂದಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.  

ಕೆಲವು ಅಧಿಕಾರಿಗಳು ಸರ್ಮಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು  ಕೇಳಿ ಬಂದಿದ್ದು,  ಮುಂದಿನ ದಿನಗಳಲ್ಲಿ ನಿಮ್ಮ ವರ್ತನೆಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ಇಷ್ಟವಿಲ್ಲದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ
ಪಿಡಿಓಗಳು  ಕೇಂದ್ರ ಸ್ಥಾನದಲ್ಲಿ ಇದ್ದು ಕಾರ್ಯ ನಿರ್ವಹಿಸಬೇಕು. ಬೆಂಗಳೂರಿನಿಂದ ಹಾಗೂ ಇತರೆ ಜಿಲ್ಲೆಗಳಿಂದ ಬಂದಂತವರ ಬಗ್ಗೆ ಮಾಹಿತಿ ಕಲೆ ಹಾಕಬೇಕು ಮತ್ತು ಹೋಂ ಕ್ವಾರಂಟೈನ್ ಮಾಡಿಸಬೇಕು. ಜೊತೆಗೆ ಗ್ರಾಮೀಣ ಜನರಿಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಬೇಕು ಎಂದರು.

ಪ್ರಕರಣಗಳು ಹೆಚ್ಚಳವಾಗುತ್ತಿರುವುದ ರಿಂದ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ  ತರಕಾರಿ, ಕಿರಾಣಿ ಸೇರಿದಂತೆ ಇತರ ಸಾಮಗ್ರಿಗಳನ್ನು ಖರೀದಿಸಲು  ಅವಕಾಶ ನೀಡಿ, 12 ಗಂಟೆಯ ನಂತರ ಬಂದ್ ಮಾಡಿ ಎಂದು ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್, ತಾಲ್ಲೂಕು  ಪಂಚಾಯಿತಿ ಸದಸ್ಯ ಸಿದ್ದೇಶ್,  ಇ.ಓ. ಮಲ್ಲಾನಾಯ್ಕ, ತಹಶೀಲ್ದಾರ್ ನಾಗವೇಣಿ, ಸಿಪಿಐ ದುರುಗಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಬಣಕಾರ್  ಸೇರಿದಂತೆ ಮತ್ತಿತರರು ಹಾಜರಿದ್ದರು.

 

error: Content is protected !!