ಸಾಮಾಜಿಕ ನ್ಯಾಯದಡಿಯಲ್ಲಿ ಕೆಲಸ ನಿರ್ವಹಿಸಿ

ಪಿಡಿಒಗಳಿಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಸದಸ್ಯ ಕಾರ್ಯದರ್ಶಿಯೂ ಆದ ನ್ಯಾಯಾಧೀಶ  ಸಾಬಪ್ಪ ಕರೆ

ದಾವಣಗೆರೆ, ಅ.20 – ಬಡತನ ನಿರ್ಮೂಲನೆ ಯೋಜನೆ 2015ರ ಸರ್ಕಾರದ ಯೋಜನೆಗಳನ್ನು ತಲುಪಿಸಲು ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಸಾಮಾಜಿಕ ನ್ಯಾಯದಡಿಯಲ್ಲಿ ಪ್ರತಿಯೊಬ್ಬ ಬಡ ಜನತೆಗೂ ಸೌಲಭ್ಯಗಳು  ಸಿಗುವಂತೆ ಕೆಲಸ ನಿರ್ವಹಿಸಬೇಕು ಎಂದು ರಾಜ್ಯಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ನ್ಯಾಯಾಧೀಶ ಸಾಬಪ್ಪ ಅವರು ಪಿಡಿಒಗಳಿಗೆ ಕರೆ ನೀಡಿದ್ದಾರೆ.

ನಗರದ ಹಳೆ ಕೋರ್ಟ್ ಸಂಭಾಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗು ಇತರೆ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ   ಪಿಡಿಒಗಳಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಇಂದು  ಬೀದಿಯಲ್ಲಿ ಅನೇಕ ಮಕ್ಕಳು ಭಿಕ್ಷೆ ಬೇಡುತ್ತಾ  ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಬೇಕು. ಕೆಲವು ಬಡಜನರಿಗೆ  ವೈದ್ಯಕೀಯ ವೆಚ್ಚ ಭರಿಸಲಾಗುತ್ತಿಲ್ಲ. ಬಾಲ್ಯವಿವಾಹ, ದೇವದಾಸಿ ಪದ್ಧತಿ, ಬಡವರಿಗೆ ವಸತಿ  ವ್ಯವಸ್ಥೆ ಕಲ್ಪಿಸುವುದು ನಮ್ಮ ಎಲ್ಲಾ ಇಲಾಖೆಗಳ ಆದ್ಯ ಕರ್ತವ್ಯವಾಗಿದೆ ಎಂದರು.

ಗ್ರಾಮ ಮಟ್ಟದಲ್ಲಿ ರಾಜಕೀಯ ಒತ್ತಡಗಳಿಂದ ಕೆಲವು ಫಲಾನುಭವಿ ಯೋಜನೆಗಳು ಬಡಜನತೆಗೆ ಸರಿಯಾಗಿ ಸಿಗುತ್ತಿಲ್ಲ, ಅದರಿಂದ ವಂಚಿತರಾಗಿದ್ದಾರೆ. ಗ್ರಾಮ ಮಟ್ಟದಲ್ಲಿ ಪಿಡಿಓಗಳು ಸರಿಯಾಗಿ   ಅಧ್ಯಯನ ಮಾಡಿ  ಸೌಲಭ್ಯ ವಂಚಿತ ಬಡಜನತೆಗೆ ಯೋಜನೆಗಳನ್ನು ತಲುಪಿಸಿ ಎಂದು ಸೂಚಿಸಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಅರುಣಕುಮಾರ್ ಎಲ್. ಹೆಚ್. ಮಾತನಾಡಿ,   ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಒಂದು ನ್ಯಾಯಲಯವಿದ್ದಂತೆ. ಈ ಪ್ರಾಧಿಕಾರದಲ್ಲಿ ವಕೀಲರ ಅವಶ್ಯಕತೆ ಇಲ್ಲ. ನೊಂದವರು ಅರ್ಜಿ ನೀಡಿ ಯಾವುದೇ ಶುಲ್ಕವಿಲ್ಲದೇ ಇಲ್ಲಿಯೂ ಕೂಡ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ಕೂಡ ಒಂದು ನ್ಯಾಯಾಲಯದ ವ್ಯವಸ್ಥೆ ಮಾಡಲು ಸುಪ್ರೀಂಕೋರ್ಟ್ ತೀರ್ಮಾನಿಸಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪ್ರಸ್ತುತ ಬಾಲ್ಯ ವಿವಾಹಗಳು ತುಂಬಾ ನಡೆಯುತ್ತಿವೆ. ಇದರಿಂದ ಮಕ್ಕಳ ಮೇಲೆ  ಅನೇಕ ದುಷ್ಪರಿಣಾಮ ಗಳಾಗುತ್ತಿದ್ದು, ಅದರ ಬಗ್ಗೆ ಜನರಿಗೆ ಜಾಗ್ರತೆಯನ್ನು ಮತ್ತು ಇದರ ಜೊತೆಗೆ  ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು, ಕೆಲವು ಹಳ್ಳಿಗಳಲ್ಲಿ ಇಂದಿಗೂ ಕೂಡಾ ದೇವದಾಸಿ ಪದ್ಧತಿ, ಕೆಲವು ಅನಿಷ್ಟ ಪದ್ಧತಿಗಳು ಇವೆ. ಇವುಗಳನ್ನು ತೊಡೆದುಹಾಕಲು ನಾವೆಲ್ಲರೂ ಶ್ರಮ ಪಡಬೇಕು  ಎಂದರು.

error: Content is protected !!