ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಹರಪನಹಳ್ಳಿ, ಅ.20- ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕು ಯಾದವ (ಗೊಲ್ಲ) ಸಂಘಟನೆ ಪ್ರತಿಭಟನೆ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.

ಗೌರವಾಧ್ಯಕ್ಷ ಐ.ಬಸವರಾಜ ಮಾತನಾಡಿ, ಸರ್ಕಾರದಿಂದ ಸೆ.29ರಂದು ಕಾಡುಗೊಲ್ಲ ಅಭಿ ವೃದ್ಧಿ ನಿಗಮ ಸ್ಥಾಪಿಸಲು ಆದೇಶ ಹೊರಡಿಸಿದ್ದು, ಆದರೆ ಬಹು ದಿನಗಳಿಂದ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ರಾಜ್ಯ ಗೊಲ್ಲ ಜನಾಂಗದವರ ಬೇಡಿಕೆಯಾಗಿದ್ದು, ಇತರೆ ಜನಾಂಗದಲ್ಲಿರುವಂತೆ ನಮ್ಮ ಜನಾಂಗದಲ್ಲಿಯೂ ಸಹ ಹಲವು ಉಪಜಾತಿಗಳಿವೆ. ಆದರೆ ನಮ್ಮ ಉಪಜಾತಿಗಳಲ್ಲಿ ಒಂದೇ ಉಪಜಾತಿಗೆ ಸೀಮಿತವಾಗುವಂತೆ ಕಾಡು ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿದ್ದು, ಇದರಿಂದ ಉಳಿದ ಗೊಲ್ಲ ಜನಾಂಗದ ಹಲವು ಉಪಜಾತಿಗಳಿಗೆ ಅನ್ಯಾಯವಾಗುತ್ತದೆ ಎಂದರು.

ಅಧ್ಯಕ್ಷ ಎಂ.ಶಿವಮೂರ್ತಪ್ಪ ಮಾತನಾಡಿ, ಗೊಲ್ಲ ಜನಾಂಗದಲ್ಲಿ ಉಪಜಾತಿಗಳು ಕಾಡು ಗೊಲ್ಲರಿಗಿಂತ ಜೀವನ ಅಲೆಮಾರಿಯಂತಾಗಿದೆ ಹಾಗೂ ಶೋಚನೀಯ ಸ್ಥಿತಿ ಇದ್ದು, ಉಳಿದ ಗೊಲ್ಲ ಜನಾಂಗದ ಉಪ ಪಂಗಡಗಳಲ್ಲಿ ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಪಶು ಸಂಗೋಪನೆ, ಹಾವಾಡಿಗರಾಗಿ, ಗಂಗೆತ್ತು ಆಡಿಸಿ ಹಾಗೂ ಪೌರ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದೇವೆ. ಅಲ್ಲದೇ ಜೀವನ ಉಪಯೋಗಕ್ಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಮಾರಿ ಜೀವನ ನಡೆಸುತ್ತಾ ಬಂದಿದ್ದೇವೆ. ಆದ ಕಾರಣ ಜಾತಿಯನ್ನು ಒಡೆಯದೆ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ರದ್ದುಪಡಿಸಿ, ಎಲ್ಲಾ ಗೊಲ್ಲ ಉಪಜಾತಿಗಳನ್ನು ಒಟ್ಟಾಗಿ ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಹೆಚ್.ಬಸವರಾಜ, ಕೋಟೆಪ್ಪ, ಮತ್ತೂರು ಬಸವರಾಜ, ಪ್ರಭಾವತಿ ಕೃಷ್ಣಪ್ಪ, ಹನುಮಂತಪ್ಪ, ಹೆಚ್.ಕೃಷ್ಣಪ್ಪ, ವಿಜಯಕುಮಾರ ಎನ್, ಟಿ.ನಿಂಗಪ್ಪ, ದೇವೇಂದ್ರಪ್ಪ ಎಲ್, ಕೆ.ಪ್ರವೀಣ, ವೈ.ದಿವಾಕರ, ನಾಗರಾಜ ಯಾದವ, ಸುರೇಶ್ ಸೇರಿದಂತೆ ಇತರರು ಇದ್ದರು.

error: Content is protected !!