ಹರಿಹರ, ಅ.19- ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಹಾಗೂ ಮೆಕ್ಕೆಜೋಳ ಮತ್ತು ಭತ್ತದ ಖರೀದಿ ಕೇಂದ್ರವನ್ನು ಮಲೇಬೆನ್ನೂರು ಗ್ರಾಮದಲ್ಲಿ ತೆರೆಯುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ತಾಲ್ಲೂಕಿನ ಕೊಕ್ಕನೂರು, ಮಲೇಬೆನ್ನೂರು, ಕೊಮಾರನಹಳ್ಳಿ, ಹಾಲಿವಾಣ, ಕೊಪ್ಪ ಜಿ.ಟಿ. ಕಟ್ಟಿ ಗ್ರಾಮದ ರೈತರು ಶಿವಮೊಗ್ಗ ರಸ್ತೆಯ ಮಾಜೇನಹಳ್ಳಿ ಗ್ರಾಮದೇವತೆ ದೇವಸ್ಥಾನ ದಿಂದ ಮೆರವಣಿಗೆ ಯೊಂದಿಗೆ ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ ಸಂಚರಿಸಿ ನಂತರದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಅರ್ಪಿಸಿದರು.
ಈ ವೇಳೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಅಧಿಕಾರಿಗಳು ಮತ್ತು ರಾಜಕೀಯ ಪಕ್ಷದವರು ಅನಾಮಧೇಯ ಹಣವನ್ನು ಗಳಿಸಿದರೆ ಅವರ ಮಕ್ಕಳು ದುಷ್ಟರಾಗಿ ಹುಟ್ಟುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಅನಾಮಧೇಯ ಹಣವನ್ನು ರೈತರಿಂದ ವಸೂಲಿ ಮಾಡುವ ಪ್ರವೃತ್ತಿಯನ್ನು ಕೈ ಬಿಡಬೇಕು ಎಂದು ಹೇಳಿದರು.
ಹರಿಹರ ತಾಲ್ಲೂಕಿನ ಅನೇಕ ರೈತರು ಗೋಮಾಳ ಹಾಗೂ ಅರಣ್ಯದಲ್ಲಿ ಸುಮಾರು 40 ವರ್ಷಗಳಿಂದ ಬೇಸಾಯ ಮಾಡಿಕೊಂಡು ಬಂದಿದ್ದು ಈ ಬಗ್ಗೆ ಅನೇಕ ಬಾರಿ ಬಗರ್ ಹುಕ್ಕುಂ ಅರ್ಜಿಗಳನ್ನು ಹಾಕಿರುತ್ತಾರೆ. ಸರ್ಕಾರವು ರೈತರಿಗೆ 53 ಮತ್ತು 57 ಫಾರಂ ನಲ್ಲಿ ಅರ್ಜಿ ಹಾಕಿದವರಿಗೆ ಖಾತೆ ಮಾಡಿ ಪಹಣಿ ಕೊಡಲು ಆದೇಶ ಮಾಡಿರುತ್ತದೆ. ಆದರೂ ಸಹ ಕಚೇರಿಯಿಂದ ಯಾವುದೇ ರೀತಿಯ ಬಗರ್ ಹುಕ್ಕುಂ ಸದಸ್ಯರ ಕಮಿಟಿ ರಚನೆಯಾಗಿರುವುದಿಲ್ಲ. ಅಲ್ಲದೇ, ಸಭೆ ನಡವಳಿಕೆ ನಡೆಸಿರುವುದಿಲ್ಲ. ಹಾಗಾಗಿ ಬಗರ್ ಹುಕ್ಕುಂ ಹಕ್ಕು ಪತ್ರಗಳು ಆದಷ್ಟು ಬೇಗನೇ ನೀಡುವಂತಾಗಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಹರಿಹರ ತಾಲ್ಲೂಕು ಅಧ್ಯಕ್ಷ ಪಿ.ಮಂಜುನಾಥ್ ಕೋಗಳ್ಳಿ ಮಾತನಾಡಿ, ಮಲೇಬೆನ್ನೂರು ಪಟ್ಟಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದ ರೈತರಿಗೆ ತಾವು ಬೆಳೆದ ಮೆಕ್ಕೆಜೋಳ ಮತ್ತು ಭತ್ತವನ್ನು ಮಾರಾಟ ಮಾಡಲು ದಾವಣಗೆರೆ ಮತ್ತು ಹರಿಹರ ನಗರಕ್ಕೆ ತೆಗೆದುಕೊಂಡು ಹೋಗಬೇಕಾದ ಪ್ರಸಂಗಗಳು ಇರುವುದರಿಂದ ಇಲ್ಲಿನ ಗ್ರಾಮೀಣ ಪ್ರದೇಶದ ರೈತರಿಗೆ ಬಹಳ ತೊಂದರೆ ಆಗುತ್ತದೆ ಅದನ್ನು ತಪ್ಪಿಸಲು ಮಲೇಬೆನ್ನೂರು ಗ್ರಾಮದಲ್ಲಿ ಖರೀದಿ ಕೇಂದ್ರತೆರೆಯುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಕಬ್ಬಳ ಪ್ರಸಾದ್, ಎಸ್. ಮಂಜುನಾಥ್ ಕೊಕ್ಕನೂರು, ಆನಂದಪ್ಪ, ರಾಮಪ್ಪ, ರಾಜಪ್ಪ, ಗುಡದಹಳ್ಳಿ ಅಡಿವೆಪ್ಪ, ಕೆಂಚಪ್ಪ, ಮಂಜಣ್ಣ ಹನುಮಂತಪ್ಪ, ಅಂಜಿನಪ್ಪ, ನಾಗರಾಜ್ ಮಾಲತೇಶ್ ಇತರರು ಹಾಜರಿದ್ದರು