ದಾವಣಗೆರೆ ಅ.19- ಧಾರ್ಮಿಕ ಆಚರಣೆಗಳಾದ ಹಬ್ಬಗಳನ್ನು ಮನೆಗಳಲ್ಲಿಯೇ ಶ್ರದ್ಧಾ – ಭಕ್ತಿಯಿಂದ ಆಚರಿಸೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಇಂದು ಏರ್ಪಡಿಸಲಾಗಿದ್ದ ದಸರಾ, ದೀಪಾವಳಿ ಮತ್ತು ಈದ್ ಮಿಲಾದ್ ಆಚರಣೆ ಕುರಿತ ನಾಗರಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್ ಮಾರ್ಗಸೂಚಿಗಳನ್ವಯ ಹಬ್ಬಗಳನ್ನು ಆಚರಿಸಬೇಕಿರುವುದರಿಂದ ಯಾವುದೇ ಕಾರಣಕ್ಕೂ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ, ಗುಂಪು ಸೇರಲು ಅವಕಾಶವಿಲ್ಲ ಎಂದು ಹೇಳಿದರು.
ಕೋವಿಡ್ ಮಾರ್ಗಸೂಚಿಯನ್ವಯ ಹಗಲು, ರಾತ್ರಿ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭ ಮಾಡದಂತೆ ನಿಷೇಧಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಇದಕ್ಕೆ ಅವಕಾಶ ನೀಡಿದರೆ ನಮ್ಮ ಮೇಲೆ ಕ್ರಮ ಜರುಗಿಸಲಾಗುತ್ತದೆ. ಆದ್ದರಿಂದ ಜಿಲ್ಲಾಡಳಿತಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ವಿವಿಧ ಸಮಾಜಗಳ ಮುಖಂಡರಿಗೆ ಮನವಿ ಮಾಡಿದರು.
ಸೋಂಕಿತರ ಸಂಖ್ಯೆ ಇಳಿಕೆ: ವಾಸ್ತವ ಸ್ಥಿತಿಯೇ ಬೇರೆ
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಬರುತ್ತಿವೆ. ಇದು ಇನ್ನು ಮುಂದೆ ಸೋಂಕು ಕಡಿಮೆ ಆಗಲಿದೆ ಎಂದು ಹಲವರು ತಿಳಿದು ಕೊಂಡಿದ್ದಾರೆ. ಆದರೆ, ವಾಸ್ತವ ಸ್ಥಿತಿಯೇ ಬೇರೆ. ನಿತ್ಯ 3 ಸಾವಿರ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ, ನಿನ್ನೆ 900 ಮಾತ್ರ ಮಾಡಿದ್ದಾರೆ. ಹಾಗಾಗಿ ಕಡಿಮೆ ಪ್ರಕರಣಗಳು ವರದಿಯಾಗಿವೆಯೇ ಹೊರತು ಸೋಂಕು ಕಡಿಮೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಕಡಿಮೆ ಪ್ರಕರಣಗಳು ದೃಢಪಟ್ಟಾಕ್ಷಣ ಕೊರೊನಾ ಕಡಿಮೆಯಾಗುತ್ತಿದೆ ಎಂದು ಮೈ ಮರೆಯದೇ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಪರೀಕ್ಷೆಗಾಗಿ 31 ಮೊಬೈಲ್ ತಂಡಗಳನ್ನು ಹಾಗೂ 23 ಸ್ಥಿರ ತಂಡಗಳನ್ನು ಗಂಟಲು ದ್ರವ ಸಂಗ್ರಹಕ್ಕೆ ನಿಯೋಜನೆ ಮಾಡಲಾಗಿದೆ. ಆದರೂ ಜನ ಪರೀಕ್ಷೆ ಮಾಡಿಸಲು ಮುಂದೆ ಬರುತ್ತಿಲ್ಲ. ಕೆಲವರು ನಮಗೆ ಏನೂ ಆಗಿಲ್ಲ ಎಂದು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಮುಚ್ಚಿಟ್ಟರೆ ಅದು ನಮ್ಮನ್ನು ಬಿಡುವುದಿಲ್ಲ. ತನ್ನೊಂದಿಗೆ ಕರೆದೊಯ್ಯುತ್ತದೆ. ಆದ್ದರಿಂದ ಪರೀಕ್ಷಾ ತಂಡಗಳಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಂಘ-ಸಂಸ್ಥೆಗಳಲ್ಲಿ ಟೆಸ್ಟ್ ಕಡ್ಡಾಯವಾಗಲಿ: ಡಿಸಿ
ಕೊರೊನಾ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ಸರ್ಟಿಫಿಕೇಟ್ ಹೊಂದಿದವರಿಗೆ ಮಾತ್ರ ಸಂಘ-ಸಂಸ್ಥೆಗಳಲ್ಲಿ, ದೇವಸ್ಥಾನಗಳಲ್ಲಿ ಒಳಗೆ ಪ್ರವೇಶ ಎನ್ನುವುದನ್ನು ಸರ್ಕಾರ ಕಡ್ಡಾಯ ಮಾಡಿದರೆ ಅಥವಾ ಪರೀಕ್ಷೆ ನಂತರ ಈ ತರಹದ ಸೌಲಭ್ಯ ನೀಡುತ್ತೇವೆ, ಇಲ್ಲದಿದ್ದರೆ ಇಲ್ಲ ಎನ್ನುವ ನಿಯಮ ಮಾಡಿದರೆ ಸ್ವಾಭಾವಿಕವಾಗಿ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಆದರೆ ಈ ರೀತಿ ಸರ್ಕಾರಿ ಆದೇಶ ಹೊರಡಿಸಲು ಸಾಧ್ಯವಾಗದೇ ಇದ್ದರೂ, ಎಲ್ಲಾ ಸಂಘ-ಸಂಸ್ಥೆಗಳಲ್ಲಿ ಈ ಪ್ರಯೋಗ ಮಾಡಿದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಅಕೋಬರ್ 31 ರೊಳಗೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆಯಲು ಅನುಮತಿ ನೀಡಲಾಗುವುದು. ಇದಕ್ಕೆ ನವೆಂಬರ್ 10 ರಿಂದ 17 ರ ತನಕ ಪರವಾನಿಗೆ ನೀಡಲಾಗುವುದು. ಅರ್ಜಿಗಳನ್ನು ಆಧರಿಸಿ ಅದರ ಆಧಾರದ ಮೇಲೆ ಜಾಗ ನೀಡಲಾಗುವುದು ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್ ಮಾತನಾಡಿ, ದೇವಸ್ಥಾನ, ಪ್ರಾರ್ಥನಾ ಮಂದಿರಗಳಿಗೆ ತೆರಳುವ ಭಕ್ತರು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು, ತಾಜ್ ಮಹಲ್ ಸೇರಿದಂತೆ, ಇತರೆ ಐತಿಹಾಸಿಕ ಸ್ಮಾರಕಗಳನ್ನು ನೋಡಲು ಹೋಗುವವರ ಕಾಲಿಗೆ ಬಟ್ಟೆಯ ಚೀಲ ನೀಡುವಂತೆ ನಮ್ಮಲ್ಲೂ ವ್ಯವಸ್ಥೆ ಆಗಬೇಕು ಎಂದರು.
ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಸರಳ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈದ್ ಮಿಲಾದ್ ಕಮಿಟಿ ಕಾರ್ಯದರ್ಶಿ ಯಾಸೀನ್ ಪೀರ್ ತಾಜ್, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯವೇ ಹಬ್ಬ ಆಚರಿಸಲು ಸಮಾಜದ ಬಾಂಧವರು ಮುಂದಾಗಿದ್ದು, ಈ ಸಂಬಂಧ ಸಮಿತಿಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಪಾಲಿಕೆ ಸದಸ್ಯರಾದ ಶಿವಪ್ರಕಾಶ್, ಚಮನ್ ಸಾಬ್, ಶಿರಾಜ್ ಅಹಮದ್, ಹಿಂದೂಪರ ಸಂಘಟನೆಯ ಸತೀಶ್ ಪೂಜಾರ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯನ್ನು ಎಲ್ಲರೂ ಒಪ್ಪಿಕೊಂಡು ಮನೆಗಳಲ್ಲಿಯೇ ಸರಳವಾಗಿ ಹಬ್ಬಗಳನ್ನು ಆಚರಿಸಲಾಗುವುದು ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ರಾಜೀವ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.