ತಿಪ್ಪೆಯೋ ? ಹೂವೋ ? ನೋಡುವ ದೃಷ್ಟಿಕೋನ ಮುಖ್ಯ

ಲಾಡ್ಜಿಂಗ್ ಉದ್ದಿಮೆದಾರರು, ಹೋಟೆಲ್ ಉದ್ದಿಮೆದಾರರ ಸಂಘದಿಂದ ಸನ್ಮಾನ ಸ್ವೀಕರಿಸಿದ ಡಿಸಿ ಬೀಳಗಿ

ದಾವಣಗೆರೆ, ಜು. 11- ಸಮಾಜ ಸರಿ ಇಲ್ಲ  ಎಂದು ಹಲವರು ದೂರುತ್ತಾರೆ. ಊರ ಮುಂದಿನ ತಿಪ್ಪೆ ನೋಡಿ ಮೂಗು ಮುಚ್ಚಿ ಕೊಳ್ಳುವ ಜನರೂ ಇದ್ದಾರೆ. ತಿಪ್ಪೆ ಮೇಲೆ ಬೆಳೆದ ಸುಂದರ ಹೂ ನೋಡಿ ಆನಂದ ಪಡುವವರೂ ಇದ್ದಾರೆ. ನಾವು ನೋಡುವ ದೃಷ್ಟಿಕೋನದ ಮೇಲೆ ಸಮಾಜ ಒಳ್ಳೆಯದೋ ಕೆಟ್ಟದ್ದೋ ಎಂಬುದು ಅವಲಂಬಿತವಾಗಿರುತ್ತದೆ ಎಂದು  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ದಾವಣಗೆರೆ ಲಾಡ್ಜಿಂಗ್ ಉದ್ದಿಮೆದಾರರು ಹಾಗೂ ಹೋಟೆಲ್ ಉದ್ದಿಮೆದಾರರ ಸಂಘದ ವತಿಯಿಂದ ಪಿ.ಬಿ. ರಸ್ತೆಯಲ್ಲಿನ ಹೊಸ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ,  ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜ ನನ್ನನ್ನು ಗುರುತಿಸಿ ಒಂದು ಹಂತಕ್ಕೆ ತಂದು ನಿಲ್ಲಿಸಿದೆ. ಎಲ್ಲಿಯವರೆಗೆ ನಾವು ಸಮಾಜಕ್ಕೆ ಉಪಯೋಗಕ್ಕೆ ಬರುವ ವಸ್ತುವಾ ಗಿರುತ್ತೇವೆಯೋ ಅಲ್ಲಿಯವರೆಗೆ ಸಮಾಜಕ್ಕೆ ನಾವು ಬೇಕಾಗುತ್ತೇವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನಮ್ಮ ಇರುವಿಕೆಯ ಅಗತ್ಯ ಇರಬೇಕು. ಆ  ರೀತಿ ಬದುಕಬೇಕು. ಇಂದು ನನ್ನನ್ನು ಜನರು ಗುರುತಿಸಿದ್ದು, ಜವಾಬ್ದಾರಿಯೂ ಹೆಚ್ಚಾಗಿದೆ. ನೀವು ಮಾಡಿದ ಸನ್ಮಾನ ಕೇವಲ ನನಗಲ್ಲ, ನನ್ನೊಟ್ಟಿಗೆ ದುಡಿದ ಕೆಳ ಹಂತದ ನೌಕರನಿಂದ ಹಿಡಿದು ಎಲ್ಲಾ ಅಧಿಕಾರಿಗಳಿಗೂ ಸಲ್ಲುವಂತದ್ದು ಎಂದರು.

ಜಿಲ್ಲೆಗೆ ಬಂದಾಗಿನಿಂದ ಇಲ್ಲಿಯವರೆಗೆ ನಾನು ಪ್ರತಿ ದಿನ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ವಿಶೇಷ ಅಂದ್ರೆ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ನನ್ನೊಟ್ಟಿಗೆ ಇಡೀ ಜಿಲ್ಲಾ ತಂಡವೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ನಾನು ಕರ್ತವ್ಯ ಎಂದು ತಿಳಿದು ಕೆಲಸ ಮಾಡದೆ, ಹುರುಪು-ಹುಮ್ಮಸ್ಸಿನಿಂದ ಕೆಲಸ ಮಾಡಿದ್ದೇನೆ. ನಾನು ಮಾಡುವ ಕೆಲಸದಲ್ಲಿ ಖುಷಿ ಪಟ್ಟಿದ್ದೇನೆ. ನಡೆದು ಬಂದ ದಾರಿ, ನನ್ನ ಜೀವನ ರೀತಿಗಳು ನನಗೆ ಶ್ರೀರಕ್ಷೆಯಾಗಿವೆ ಎಂದು ಹೇಳಿದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿ, 5ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಅಂಗಡಿಗಳಲ್ಲಿ, ಜಾತ್ರೆಯಲ್ಲಿ ಕೆಲಸ ಮಾಡಿ, ನಂತರ ಪಾರ್ಟ್ ಟೈಂ ಕೆಲಸ ಮಾಡಿ ಒಂದು ಹಂತಕ್ಕೆ ಬಂದಿದ್ದೇನೆ ಎಂದು ಜಿಲ್ಲಾಧಿಕಾರಿ ನೆನಪಿಸಿಕೊಂಡರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಮ್ಮ ಕೆಲಸಗಳಿಗೆ ಜಿಲ್ಲಾಧಿಕಾರಿಗಳು ಪ್ರೇರಣೆ. ಅವರ ಉತ್ತಮ ನಾಯಕತ್ವದಲ್ಲಿ ಕೆಲಸ ಮಾಡುವ ಭಾಗ್ಯ ನಮ್ಮದಾಗಿದೆ ಎಂದರು. ಕೊರೊನಾ ಸಂದರ್ಭದಲ್ಲಿ ಹೋಟೆಲ್ ಹಾಗೂ ಲಾಡ್ಜ್ ಮಾಲೀಕರ ಸಹಕಾರ ಅನನ್ಯ. ಅದು ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.

 ಹೋಟೆಲ್ ಉದ್ದಿಮೆದಾರರ ಸಂಘದ ಗೌರವ ಅಧ್ಯಕ್ಷರೂ ಆಗಿರುವ, ಅಪೂರ್ವ ಗ್ರೂಪ್ ಆಫ್ ಹೋಟೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಅಣಬೇರು ರಾಜಣ್ಣ  ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಜಿಲ್ಲಾಧಿಕಾರಿಗಳು ದೈವ ಭಕ್ತರು. ಅವರು ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ವಿಯಾಗುತ್ತಾರೆ ಎಂದರು.

ಎಂತ ಕಠಿಣ ಮನಸ್ಸುಗಳನ್ನೂ ಬದಲಾ ಯಿಸುವ ಶಕ್ತಿ ಅವರಲ್ಲಿದೆ. ಈ ಕಾರಣಕ್ಕಾಗಿಯೇ ಕ್ವಾರಂಟೈನ್‌ಗಾಗಿ ಒಪ್ಪಲು ಸಿದ್ಧರಿಲ್ಲದ ಹೋಟೆಲ್, ಲಾಡ್ಜ್ ಮಾಲೀಕರು, ಜಿಲ್ಲಾಧಿ ಕಾರಿಗಳು ಹೇಳಿದ ಸರ್ಕಾರದ ಮಾರ್ಗಸೂಚಿ ಗಳು, ಭರವಸೆಯ ಮಾತುಗಳನ್ನು ಕೇಳಿ ಅವರ ಕೈಗೆ ಬೀಗ ಕೊಟ್ಟು ಬರಬೇಕಾಯಿತು ಎಂದರು.

ಹೋಟೆಲ್ ಉದ್ದಿಮೆದಾರರ ಸಂಘದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಲಕ್ಷ ರೂ. ನೀಡಿದ್ದೇವೆ. ಬಡವರಿಗೆ 3 ಲಕ್ಷ ರೂ.ಗಳ ಕಿಟ್ ನೀಡಿದ್ದೇವೆ. ಕೊರೊನಾದಿಂದ ಹೋಟೆಲ್ ಉದ್ಯಮಕ್ಕೆ ಪೆಟ್ಟು ಬಿದ್ದಿದೆ. ಹೆದರಿಕೆಯಿಂದ ಜನರು ಊಟ, ತಿಂಡಿಗೂ ಬರುತ್ತಿಲ್ಲ. ಲಾಡ್ಜ್‌ಗಳನ್ನು ಬಳಸುತ್ತಿಲ್ಲ. ಆದರೂ ಕಾರ್ಮಿಕರ ಜೀವನಕ್ಕೆ ತೊಂದರೆ ಯಾಗದಂತೆ ನೋಡಿಕೊಂಡಿದ್ದೇವೆ ಎಂದರು.

ಹೋಟೆಲ್ ಉದ್ದಿಮೆದಾರರ ಸಂಘದ ಮೋತಿ ಪಿ.ಪರಮೇಶ್ವರ್ ಮಾತನಾಡಿದರು.  ಕಾರ್ಯದರ್ಶಿ ಬಿ.ಕೆ. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.  ಲಾಡ್ಜಿಂಗ್ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ನಾರಾಯಣಸ್ವಾಮಿ ವಂದಿಸಿದರು.

error: Content is protected !!