ದಾವಣಗೆರೆ, ಅ.19- ಸರ್ಕಾರವೇ ಘೋಷಿಸಿದ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ರೈತರ ಉತ್ಪನ್ನಗಳು ಖರೀದಿಯಾಗದಂತಹ ವ್ಯವಸ್ಥೆ ಅನುಷ್ಠಾನಕ್ಕೆ ಸರ್ಕಾರ ಗಮನಹರಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರೂ ಆದ ಮಾಜಿ ಸಚಿವ ಬಾಬುಗೌಡ ಪಾಟೀಲ್ ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ನಗರದ ರೋಟರಿ ಬಾಲ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸಂಘಟನೆಯ ರಾಜ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಬೆಳೆಗಳನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಖರೀದಿಸದಂತೆ ವ್ಯವಸ್ಥೆಯಾಗಬೇಕು. ಅಲ್ಲದೇ ಮಾರುಕಟ್ಟೆಯಲ್ಲಿ ದರ ಹೆಚ್ಚಾಗುವವರೆಗೂ ಉತ್ಪನ್ನ ಖರೀದಿಸುವ ವ್ಯವಸ್ಥೆಯಾಗಬೇಕು. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಹಣಕಾಸು ನೆರವು ಒದಗಿಸಬೇಕು. ಸರ್ಕಾರವು ರೈತರ ಬೆಳೆ ಕಟಾವಿಗೆ ಬರುವ 15 ದಿನ ಮೊದಲೇ ಖರೀದಿ ಕೇಂದ್ರ ತೆರೆಯಬೇಕು. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಬೇಕೆಂದರು.
ಗುಣಮಟ್ಟ ಪ್ರಶ್ನಿಸಿ ಕೆಲ ಬಾರಿ ಬಹು ರಾಷ್ಟ್ರೀಯ ಕಂಪನಿಗಳು ರೈತರ ಉತ್ಪನ್ನ ಗಳನ್ನು ಖರೀದಿಸುವುದಿಲ್ಲ. ಇದರಿಂದ ರೈತರು ನಷ್ಟ ಅನುಭವಿಸಬೇಕಾ ಗುತ್ತದೆ. ಆದ್ದರಿಂದ ಬೆಂಬಲ ಬೆಲೆಯಡಿ ರೈತರ ಎಲ್ಲಾ ಉತ್ಪನ್ನಗಳು ಖರೀದಿಯಾಗಬೇಕು. ಬಹುರಾಷ್ಟ್ರೀಯ ಕಂಪನಿಗಳು ಒಪ್ಪಂದ ಮಾಡಿಕೊಂಡಂತೆ ರೈತರ ಉತ್ಪನ್ನಗಳನ್ನು ಗುಣಮಟ್ಟದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಖರೀದಿಸಬೇಕು. ಈ ಬಗ್ಗೆ ಸರ್ಕಾರಗಳು ಕಂಪನಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಅಲ್ಲದೇ ಪ್ರತಿ ಜಿಲ್ಲೆಯಲ್ಲೂ ನ್ಯಾಯಾಲಯ ಸ್ಥಾಪಿಸುವಂತೆ ಆಗ್ರಹಿಸಿದರು.
ಅತಿವೃಷ್ಟಿ, ಪ್ರವಾಹದಂತಹ ಸಂದರ್ಭದಲ್ಲಿ ಪ್ರತಿ ಎಕರೆಗೆ 10 ಸಾವಿರ ಮತ್ತು ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ ಅಂತಹ ಪ್ರಮುಖ ತರಕಾರಿ ಬೆಳೆಗಳಿಗೆ 20 ಸಾವಿರ ಒಟ್ಟಾರೆ 30 ಸಾವಿರ ಪರಿಹಾರ ಧನವನ್ನು ಸರ್ಕಾರ ಕೊಡಬೇಕು. ಮದ್ಯ ಮಾರಾಟದಿಂದ ಸರ್ಕಾರಕ್ಕೆ 23 ಸಾವಿರ ಕೋಟಿ ರೂ. ಆದಾಯ ಬರುತ್ತದೆ. ಅದರಲ್ಲಿ ರೈತರ ಹಿತಕ್ಕಾಗಿ ಸುಮಾರು 10 ಸಾವಿರ ಕೋಟಿ ಪರಿಹಾರ ಧನಕ್ಕೆ ಮೀಸಲಿಟ್ಟರೆ ಸರ್ಕಾರಕ್ಕೆ ಹೊರೆಯಾಗುವುದಿಲ್ಲ.
– ಬಾಬುಗೌಡ ಪಾಟೀಲ್, ಮಾಜಿ ಸಚಿವರು
ಎಪಿಎಂಸಿ, ವಿದ್ಯುತ್ ಹಾಗೂ ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿಯನ್ನು ಸಮಗ್ರ ಚರ್ಚೆಗೊಳಪಡಿಸುವ ಅಗತ್ಯವಿದೆ. ಕಾಯ್ದೆ ಬಗ್ಗೆ ಗೊತ್ತಿಲ್ಲದೇ ಪೂರ್ವಾಗ್ರಹಪೀಡಿತರಾಗಿ ವಿರೋಧಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಕಾಯ್ದೆ ತಿದ್ದುಪಡಿಗಳಿಗೆ ರಾಷ್ಟ್ರಪತಿಗಳು ಈಗಾಗಲೇ ಅಂಕಿತ ಹಾಕಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ಕಾಯ್ದೆಗೆ ವ್ಯತಿರಿಕ್ತವಾಗಿ ಬೇರೊಂದು ಕಾಯ್ದೆ ತರುವುದು ದೇಶದ ಸಮಗ್ರತೆ, ಅಖಂಡತೆ, ಐಕ್ಯತೆ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ರೈತರ ಹಿತ ಕಾಯುವ ನಿಟ್ಟಿನಲ್ಲಿ ಕೆಲ ನಿಯಮ ಸೇರಿಸುವಂತೆ ಸ್ಥಳೀಯ ಸರ್ಕಾರಗಳಿಗೆ ಒತ್ತಾಯಿಸಬೇಕೆಂದು ಸಲಹೆ ನೀಡಿದರು.
ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ನಿರ್ಮಲಕಾಂತ್ ಪಾಟೀಲ್ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ತಲೆದೋರಿದ್ದು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಬೆಳೆ ಹಾನಿ, ಆಸ್ತಿ ಹಾನಿ ಸಂಭವಿಸಿದೆ. ಸರ್ಕಾರ ಎಕರೆಗೆ ಕನಿಷ್ಟ 50 ಸಾವಿರ ರೂ. ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ ಸೂಕ್ತ ಪುನರ್ವಸತಿ ಒದಗಿಸಬೇಕು. ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಸಂಭವಿಸಿದ ಸಂದರ್ಭದಲ್ಲಿ ಸರ್ಕಾರ ಸೂರು ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿತ್ತು. ಆದರೆ, ಸರ್ಕಾರ ಇದುವರೆಗೂ ಪೂರ್ಣವಾಗಿ ಹಣ ಮಂಜೂರು ಮಾಡಿಲ್ಲ. ಅದನ್ನು ಕೂಡಲೇ ಮಾಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗುದ್ದು ರಂಗಸ್ವಾಮಿ, ರಾಜ್ಯ ಕಾರ್ಯಾಧ್ಯಕ್ಷ ಸಿದ್ದರಾಮಪ್ಪ, ನಿರ್ಮಲಾಕಾಂತ್ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧೀರ್ ಮಂಡ್ಯ, ಶ್ಯಾಮಸುಂದರ್ ಕೀರ್ತಿ, ರಾಜ್ಯ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ್, ಉಳ್ಳಪ್ಪ ಒಡೆಯರ್, ಹೆಚ್. ನಾಗರಾಜಪ್ಪ, ರಾಚರೆಡ್ಡಿ, ಅರವಿಂದ ಕುಲಕರ್ಣಿ ಸೇರಿದಂತೆ ಇತರರು ಇದ್ದರು.