ಜಾತಿಗಳನ್ನು ಎಸ್ಟಿ ಪಟ್ಟಿಗೆ ಸೇರಿಸಲು ರಾಜಕೀಯ ಪ್ರೇರಿತ ಹೋರಾಟ

ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಿಸುವುದಾಗಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಈಗ ನಾಗಮೋಹನದಾಸ್‌ ವರದಿ ಸಲ್ಲಿಕೆಯಾದರೂ ಕ್ರಮ ತೆಗೆದುಕೊಳ್ಳದೇ ಮಾತಿಗೆ ತಪ್ಪಿದ್ದಾರೆ.

– ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅಸಮಾಧಾನ

ದಾವಣಗೆರೆ, ಅ. 18 – ತಮ್ಮ ಜಾತಿಗಳನ್ನೂ ಎಸ್‌ಸಿ – ಎಸ್‌.ಟಿ.ಗೆ. ಸೇರ್ಪಡೆ ಮಾಡಬೇಕು ಎಂದು ರಾಜಕೀಯ ಪ್ರೇರಿತ ಹೋರಾಟಗಳು ನಡೆಯುತ್ತಿವೆ. ನಮ್ಮ ಸಮುದಾಯದ ಮೇಲೆ ಷಡ್ಯಂತ್ರಗಳು ನಡೆಯುತ್ತಿವೆ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ನಗರದ ವಾಲ್ಮೀಕಿ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ಇಂದು ಕರೆಯಲಾಗಿದ್ದ ಮೀಸಲಾತಿ ಹೆಚ್ಚಳದ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ತಮ್ಮ ಸಮುದಾಯವನ್ನು ಎಸ್.ಟಿ.ಗೆ ಸೇರಿಸಿ ಎಂದು ಕೆಲವರು ರಾಜಕೀಯ ಪ್ರೇರಿತ ಹೋರಾಟ ನಡೆಸುತ್ತಿದ್ದಾರೆ. ಎಸ್‌ಟಿಗೆ ಸೇರಿಸಿ – ಎಸ್‌ಸಿಗೆ ಸೇರಿಸಿ ಎಂದು ಇಲ್ಲೇನೋ ಹಾರಾಡಬಹುದು. ಆದರೆ, ಕೇಂದ್ರದಲ್ಲಿ ಅಷ್ಟು ಸುಲಭವಲ್ಲ.  ತಿಪ್ಪರಲಾಗ ಹಾಕಿದರೂ ಕೇಂದ್ರದಲ್ಲಿ ಆಗುವುದಿಲ್ಲ ಎಂದು ಶ್ರೀಗಳು ತಿಳಿಸಿದರು.

ಬೇರೆ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ಸಾಕಷ್ಟು ಹಣ ಬಿಡುಗಡೆಯಾಗಿದೆ. ಅಧ್ಯಯನ ನಡೆದಿದೆ. ಆದರೆ, ಅವರಿಗೂ ಎಸ್.ಟಿ.ಗೆ ಸೇರ್ಪಡೆ ಮಾಡಲು ಆಗಿಲ್ಲ. ಏಕೆಂದರೆ, ಎಸ್‌.ಟಿ.ಗೆ ಸೇರಲು ಬುಡಕಟ್ಟು ಸ್ವರೂಪ ಹೊಂದಿರಬೇಕು. ಸಮುದಾಯದ ಆಸ್ತಿ, ಶಿಕ್ಷಣ, ಆರ್ಥಿಕವಾಗಿ ಪ್ರಬಲವಾಗಿರುವ ಬಗ್ಗೆ ಅಧ್ಯಯನ ನಡೆ ಸಿದ ನಂತರ ಪರಿಶಿಷ್ಟ ಜಾತಿ ಇಲ್ಲವೇ ಪಂಗಡಕ್ಕೆ ಸೇರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದವರು ವಿವರಿಸಿದರು.

ತಳವಾರ ಹಾಗೂ ಪರಿವಾರ ಎಂಬ ಪದಗಳು ನಾಯಕ ಸಮುದಾಯದ ಪರ್ಯಾಯ ಪದಗಳಾಗಿವೆ. ಕೇಂದ್ರ ಸರ್ಕಾರ ಈ ಹೆಸರಿನ ಸಮುದಾಯದವರನ್ನೂ ಎಸ್.ಟಿ.ಗೆ ಸೇರ್ಪಡೆ ಮಾಡಿ ಕೇಂದ್ರ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಇದನ್ನೂ ದುರ್ಬಳಕೆ ಮಾಡಿಕೊಳ್ಳಲು ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ನಾಯಕರಲ್ಲದವರು ತಳವಾರಿಕೆ ಮಾಡಿಕೊಂಡಿದ್ದೇವೆ ಎಂದು ಎಸ್.ಟಿ.ಗೆ ಸೇರಲು ಅರ್ಜಿ ಸಲ್ಲಿಸುತ್ತಿದ್ದಾರೆ. ಇದು ಸರಿಯಲ್ಲ. 2010ರಲ್ಲಿ ನಾಯಕ ಜನಾಂಗದ ತಳವಾರ ಹಾಗೂ ಪರಿವಾರ ಹೆಸರು ಹೊಂದಿರುವ ಸಮುದಾಯಗಳ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆದು, ಈಗ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದವರು ತಿಳಿಸಿದರು.

ಮೀಸಲಾತಿ ಘೋಷಣೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಉದ್ಯಾನವನದ ಬಳಿ ಇದೇ ದಿನಾಂಕ 21ರಿಂದ 10 ದಿನಗಳ ಕಾಲ ಅಹೋರಾತ್ರಿ ಏಕಾಂಗಿ ಧರಣಿ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದ ಶ್ರೀಗಳು, ಭಕ್ತರು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲೇ ದಿನಾಂಕ 21ರಿಂದ ನಿರಂತರ ಶಾಂತಿಯುತ ಪ್ರತಿಭಟನೆ ನಡೆಸಿ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಸಮಾಜದ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಮೀಸಲಾತಿ ಹೆಚ್ಚಳಕ್ಕಾಗಿ ಶ್ರೀಗಳು ಉಪವಾಸಕ್ಕೆ ಕೂರಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಸಮುದಾಯಕ್ಕೆ ಗೌರವ ತರುವ ಸಂಗತಿ ಅಲ್ಲ. ಸಮಾಜದಿಂದ ಆಯ್ಕೆಯಾಗಿರುವ ಶಾಸಕರು, ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಉಪವಾಸ ಕೂರಲಿ ಎಂದು ಹೇಳಿದರು.

ಸಮಾಜದ ಮುಖಂಡರಾದ ಗುಮ್ಮನೂರು ಮಲ್ಲಿಕಾರ್ಜುನ್, ನಾಗರಾಜ್, ಹರಪನಹಳ್ಳಿಯ ಉಚ್ಚಂಗೆಪ್ಪ ಕೋರಿಶೆಟ್ಟಿ, ಹೊನ್ನಾಳಿಯ ಚಂದ್ರಪ್ಪ, ಚನ್ನಗಿರಿಯ ಲೋಹಿತಾಶ್ವ ಮತ್ತಿತರರು ಮಾತನಾಡಿದರು.

ಸಭೆಯಲ್ಲಿ ಸಮಾಜದ ಮುಖಂಡರುಗಳಾದ ಆಂಜನೇಯ ಗುರೂಜಿ,  ಹುಚ್ಚವ್ವನಹಳ್ಳಿ ಮಂಜುನಾಥ್, ಹದಡಿ ಹಾಲಪ್ಪ, ಬಿ.ವೀರಣ್ಣ, ಶ್ರೀನಿವಾಸ್, ವಿನಾಯಕ ಮತ್ತಿತರರು ಉಪಸ್ಥಿತರಿದ್ದರು.

error: Content is protected !!