ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಶುಭಾರಂಭ

6 ಕೇಂದ್ರಗಳಲ್ಲಿ ಮೌಲ್ಯಮಾಪನ, ಶೇ.80ರಷ್ಟು ಶಿಕ್ಷಕರು ಹಾಜರು

ದಾವಣಗೆರೆ, ಜು. 13- ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಜಿಲ್ಲೆಯಲ್ಲಿ ಸುಗಮವಾಗಿ ಆರಂಭವಾಗಿದೆ. 

ಆರಂಭದ ದಿನವಾದ ಸೋಮವಾರ ನಗರದ ಆರು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆದಿದ್ದು, ಶೇ.80ರಷ್ಟು ಶಿಕ್ಷಕರು ಮೌಲ್ಯಮಾಪನಕ್ಕೆ ಬಂದಿದ್ದಾರೆ. ಯಾವುದೇ ಅಡ್ಡಿ ಆತಂಕವಿಲ್ಲದೆ ಮೌಲ್ಯಮಾಪನ ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಪತ್ರಿಕೆಗೆ ತಿಳಿಸಿದ್ದಾರೆ.

ಸೀತಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಕನ್ನಡ ವಿಷಯ, ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಹಿಂದಿ, ಪಿ.ಬಿ. ರಸ್ತೆಯ ಡಿಆರ್ಆರ್ ಶಾಲೆಯಲ್ಲಿ ಗಣಿತ, ಸೇಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಇಂಗ್ಲಿಷ್, ಸಿದ್ಧಗಂಗಾ ಶಾಲೆಯಲ್ಲಿ ವಿಜ್ಞಾನ ಹಾಗೂ ವಿದ್ಯಾನಗರದ ಮಾಗನೂರು ಬಸಪ್ಪ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯಗಳ ಮೌಲ್ಯಮಾಪನ ನಡೆಯಿತು.

ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದ ಮೌಲ್ಯಮಾಪಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಕೊಂಡು ಮೌಲ್ಯಮಾಪನ ನಡೆಸಿದರು. ನಗರ ಹೊರತುಪಡಿಸಿ ಬೇರೆ ಸ್ಥಳಗಳಿಂದ ಬರುವ ಮೌಲ್ಯಮಾಪಕರಿಗೆ ಇಲಾಖೆಯಿಂದ ವಾಹನ ಸೌಕರ್ಯ ಒದಗಿಸಲಾಗಿತ್ತು.

ಪ್ರತಿ ಕೊಠಡಿಯಲ್ಲಿ ಆರು ಜನ ಮೌಲ್ಯಮಾಪಕರುಳ್ಳ ಎರಡು ತಂಡ ಮೌಲ್ಯಮಾಪನ ನಡೆಸಿತು. ಒಂದು ತಂಡಕ್ಕೆ ಒಬ್ಬರಂತೆ ಇಬ್ಬರು ಉಪ ಮುಖ್ಯ ಮೌಲ್ಯ ಮಾಪಕರು ಸೇರಿ ಕೊಠಡಿಯಲ್ಲಿ 14 ಜನಕ್ಕೆ ಅವಕಾಶವಿತ್ತು. ಪ್ರತಿ ಮೌಲ್ಯಮಾಪಕರು 20 ಪತ್ರಿಕೆಗಳನ್ನು ಪರಿಶೀಲಿಸಿ, ನಂತರ ಕೋಡ್ ಸಂಖ್ಯೆ ಹಾಗೂ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಎಂಟ್ರಿ ಮಾಡಿದರು. 

ಮೌಲ್ಯಮಾಪನಕ್ಕೆ ಬಂದಿದ್ದ ಶಿಕ್ಷಕರಿಗೆ ಇಲಾಖೆ ಮಾಸ್ಕ್ ವ್ಯವಸ್ಥೆ ಮಾಡಿರಲಿಲ್ಲವಾದರೂ, ಶಿಕ್ಷಕರೇ ಸ್ವತಃ ಮಾಸ್ಕ್ ಧರಿಸಿ ಬಂದಿದ್ದರು. ಆದರೆ ಕೊಠಡಿಯ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲ ಶಿಕ್ಷಕರು ಮನೆಯಿಂದಲೇ ತಂದಿದ್ದ ಆಹಾರ ಸೇವಿಸಿದರೆ ಮತ್ತೆ ಕೆಲವರು ಸಮೀಪದ ಹೋಟೆಲ್‌ಗಳಲ್ಲಿ ಮಧ್ಯಾಹ್ನದ ಊಟ ಸೇವಿಸಿ, ಮೌಲ್ಯಮಾಪನ ಕಾರ್ಯ ಮುಗಿಸಿದರು. ಪರೀಕ್ಷಾ ಕೇಂದ್ರಕ್ಕೆ ಡಿಡಿಪಿಐ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!