20 ಲಕ್ಷ ವೆಚ್ಚದಲ್ಲಿ ಬೌಗೇನ್ ವಿಲ್ಲಿಯ ಸೌಂದರ್ಯದ ಸಸಿಗಳನ್ನು ನೆಡಲಾಗುತ್ತಿದೆ. ಸ್ಮಾರ್ಟ್ಸಿಟಿ ಯೋಜನೆಯಡಿ ನಗರದ ವಿವಿಧೆಡೆ ವಿಭಿನ್ನ ಗಿಡಗಳನ್ನು ಹಾಕುವ ಕೆಲಸವಾಗುತ್ತಿದೆ. ಇಷ್ಟೇ ಅಲ್ಲದೇ ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂತತಿಗಳನ್ನು ಉಳಿಸುವ ಮತ್ತು ಅವುಗಳಿಗೆ ಆಹಾರ ಸಿಗುವಂತಾಗುವ ಉದ್ದೇಶದಿಂದ 20 ಲಕ್ಷ ವೆಚ್ಚದಲ್ಲಿ ಹಣ್ಣಿನ ಸಸಿಗಳನ್ನು ನೆಡುವ ಕಾರ್ಯವೂ ನಡೆಯಲಿದೆ.
– ಅಜಯ್ ಕುಮಾರ್, ಮೇಯರ್
ಹೆಚ್ಚುತ್ತಿರುವ ಸಿಮೆಂಟ್ ರಸ್ತೆಗಳ ನಡುವೆ ದಾವಣಗೆರೆ ನಗರ ಹಸಿರು ನಗರವಾಗುವ ನಿರೀಕ್ಷೆಗಳೂ ಗರಿಗೆದರಿವೆ.
ಹೌದು, ಮಹಾನಗರ ಪಾಲಿಕೆ ವತಿಯಿಂದ ಪಿಬಿ ರಸ್ತೆಯ ಡಿಸಿಎಂ ಟೌನ್ ಶಿಪ್ ನಿಂದ ಜಿಎಂಐಟಿ ಕಾಲೇಜಿನವರೆಗೂ ರಸ್ತೆ ವಿಭಜಕದ ಅಂಗಳದಲ್ಲಿ ಬೌಗೇನ್ ವಿಲ್ಲಿಯ ಎಂಬ ಹೆಸರಿನ ಸೌಂದರ್ಯದ ಸಸಿಗಳನ್ನು ಹಾಕುವ ಕಾರ್ಯಕ್ಕೆ ಇತ್ತೀಚಿಗಷ್ಟೆ ಪಾಲಿಕೆ ಮೇಯರ್ ಅಜಯ್ ಕುಮಾರ್ ಚಾಲನೆ ನೀಡಿದ್ದರು.
ಪುಣೆಯಿಂದ ಸುಮಾರು 19,750 ಸಸಿ ಗಳನ್ನು ತರಿಸಲಾಗಿದ್ದು, ಬಿಳಿ, ಕೇಸರಿ, ಗುಲಾಬಿ ಈ ಮೂರು ಬಣ್ಣದಲ್ಲಿ ಪೇಪರ್ ಫ್ಲವರ್ ನಂತಹ ಹೂವು ಅರಳಲಿವೆ. ಈ ಸಸಿಗಳನ್ನು ನೆಟ್ಟು ಒಂದು ಹಂತದವರೆಗೂ ಪೋಷಿಸುವ ಹೊಣೆಯನ್ನು ಎನ್ ಜಿಓ ಸಂಸ್ಥೆಯಾದ ನೇಸರ ಅಡ್ವೆಂಜರ್ಸ್ ಗೆ ವಹಿಸಲಾಗಿದೆ.
ಈ ಹಿಂದೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ನಗರ ಸೌಂದರ್ಯ ಹೆಚ್ಚಿಸುವ ಸಲುವಾಗಿ ವಿದೇಶದಿಂದ ತರಿಸಲಾಗಿದ್ದ ದುಬಾರಿ ವೆಚ್ಚದ ಬೋನ್ಸಾಯ್ ಸಸಿಗಳನ್ನು ನೆಡಲಾಗಿತ್ತು. ಇದೀಗ ತರಿಸಲಾಗಿರುವ ಬೌಗೇನ್ ವಿಲ್ಲಿಯ ಸಸಿಗಳನ್ನು ಸಹ ಆ ಸಸಿಗಳ ಜೊತೆ ಜೊತೆಯಲ್ಲೇ ನೆಡಲಾಗುತ್ತಿದೆ ಎಂಬ ಮಾಹಿತಿ ಇದೆ.
16 ಲಕ್ಷದ 14 ಸಾವಿರಕ್ಕೆ ಟೆಂಡರ್ ಆಗಿದ್ದು, ಮೂರು ತಿಂಗಳ ಕಾಲಾವಧಿ ನೀಡಲಾಗಿದೆ. ಸಸಿಗಳನ್ನು 2 ಅಡಿವರೆಗೆ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಇವುಗಳ ಬೆಳವಣಿಗೆಗೆ 3ರಿಂದ 4 ತಿಂಗಳು ಸಮಯ ಬೇಕು ಹಾಗೂ ಕಟ್ಟಿಂಗ್ ಗೆ 5 ತಿಂಗಳು ಬೇಕು. ಈ ಸಸಿಗಳನ್ನು ಡಿವೈಡರ್ ಮೇಲೆ ಬಹಳ ಎತ್ತರಕ್ಕೆ ಬೆಳೆಸುವುದಕ್ಕಿಂತ ಅದನ್ನು ಒಂದು ಆಕಾರದಲ್ಲಿ ವಿನ್ಯಾಸಗೊಳಿಸಿದರೆ ಚೆಂದ ಕಾಣುವುದು ಎಂದು ನೇಸರ ಅಡ್ವೆಂಚರ್ಸ್ ನ ಕಾರ್ಯದರ್ಶಿ ಮಣಿಕಂಠ ಗೌಡ `ಜನತಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ಹಸಿರೀಕರಣಕ್ಕಾಗಿ 6550 ವಿಭಿನ್ನ ಸಸಿಗಳು: ಸ್ಮಾರ್ಟ್ಸಿಟಿ ಯೋಜನೆಯಡಿ ನಗರದ ವಿವಿಧೆಡೆಗಳಲ್ಲಿ 6550 ವಿಭಿನ್ನ ಗಿಡಗಳನ್ನು ಹಾಕುವ ಕೆಲಸವಾಗುತ್ತಿದೆ. ಹಸಿರು, ಅರಣ್ಯೀಕರಣ ಮತ್ತು ಪರಿಸರ ಹಿತದೃಷ್ಟಿಯಿಂದ 3.77 ಕೋಟಿ ರೂ. ವೆಚ್ಚದಲ್ಲಿ ಸಸಿ ನೆಡುವ ಕಾಮಗಾರಿ ನಡೆಯುತ್ತಿದೆ. ನಗರವನ್ನು ಹಸಿರೀಕರಣ ಮಾಡಲು ಎಂಟರಿಂದ ಹತ್ತು ಜಾತಿಯ ವಿಭಿನ್ನ ಗಿಡಗಳನ್ನು ಹಾಕಲಾಗುತ್ತಿದೆ. ಸುಮಾರು ಎರಡು ವರ್ಷಗಳಿಂದ ಸಂಶೋಧನೆ ನಡೆಸಿ ಅಂತಿಮವಾಗಿ ಪರಿಸರ ಕಾಳಜಿ, ಸೌಂದರ್ಯ ಮತ್ತು ಸುವಾಸನೆ ಹರಡುವಂತಹ ಗಿಡಗಳನ್ನು ಹಾಕಲಾಗುತ್ತಿದೆ. ಈ ಗಿಡಗಳ ಬೇರು ಆಗಲಿ ಆಗುವುದಿಲ್ಲ, ಫುಟ್ಪಾತ್, ರಸ್ತೆ ಮೇಲೆ ಉಬ್ಬು ಏಳುವುದಿಲ್ಲ. ಈ ಗಿಡಗಳು ಎಂಟರಿಂದ ಒಂಭತ್ತು ತಿಂಗಳು ಹಸಿರು ನೀಡುತ್ತವೆ. ಉಳಿದ ತಿಂಗಳು ಹೂವು ಬಿಟ್ಟು ಸೌಂದರ್ಯ ವೃದ್ಧಿಸುತ್ತವೆ ಎನ್ನಲಾಗಿದೆ.
ಕೋನಾಟಾರ್ಫಸ್ ಹೆಸರಿನ ಗಿಡವನ್ನು ದಾವಣಗೆರೆಯಲ್ಲಿ ಪರಿಚಯಿಸುತ್ತಿದ್ದು, ಇವು ಧೂಳು ಮತ್ತು ದುರ್ವಾಸನೆ ತಡೆದು, ಸುವಾಸನೆ ಬೀರುವ ವಿಶೇಷತೆ ಹೊಂದಿವೆ. ದೆಹಲಿಯಲ್ಲಿ ಈ ಗಿಡ ನೆಡಲಾಗಿದ್ದು, ಅಲ್ಲಿ ಉತ್ತಮ ಪರಿಸರ ನಿರ್ಮಿಸಲು ಸಹಕಾರಿಯಾಗಿದೆ. ದೆಹಲಿ ನಂತರ ದಾವಣಗೆರೆಯಲ್ಲಿ ಈ ಗಿಡ ನೆಡಲಾಗುತ್ತಿದ್ದು, ನಗ ರದ ಸೌಂದರ್ಯ ಮತ್ತಷ್ಟು ಹೆಚ್ಚಿಸಲಿವೆಯಂತೆ.
ಚಿಟ್ಟೆ-ಪಕ್ಷಿಗಳ ಉದ್ಯಾನವನದ ಚಿಂತನೆ
ನೇಸರ ಅಡ್ವೆಂಜರ್ಸ್ ವತಿಯಿಂದ ಚಿಟ್ಟೆ ಹಾಗೂ ಪಕ್ಷಿಗಳ ಸಂತತಿ ಉಳಿಸಿ ಬೆಳೆಸುವ ದೃಷ್ಟಿಯಿಂದ ನಗರದ ಡಿಸಿಎಂ ಟೌನ್ ಶಿಪ್ ನಲ್ಲಿ ಬಹಳ ದಿನಗಳಿಂದ ಪಾಳು ಬಿದ್ದಿರುವ ತೆಂಡೂಲ್ಕರ್ ಉದ್ಯಾನವನದಲ್ಲಿ ಪಾತರಗಿತ್ತಿ (ಚಿಟ್ಟೆ) ಉದ್ಯಾನ ಹಾಗೂ ಕುಂದುವಾಡ ಕೆರೆ ಬಳಿ ಪಕ್ಷಿಗಳ ಉದ್ಯಾನ ನಿರ್ಮಿಸುವ ಚಿಂತನೆ ಇದ್ದು, ಕನಿಷ್ಠ ಪಕ್ಷ 10 ಲಕ್ಷ ವೆಚ್ಚವಾಗಲಿದೆ ಎನ್ನುತ್ತಾರೆ ನೇಸರ ಅಡ್ವೆಂಚರ್ಸ್ ನ ಕಾರ್ಯದರ್ಶಿ ಮಣಿಕಂಠ ಗೌಡ.
ಈ ಉದ್ಯಾನವನ್ನು ಕೇವಲ ಚಿಟ್ಟೆ ಹಾಗೂ ಪಕ್ಷಿಗಳಿಗೆ ಮೀಸಲಿರಿಸಿದರೆ ನಮ್ಮ ದೇಶಿ ಅಲ್ಲದೇ ವಲಸೆ ಬರುವ ವಿದೇಶಿ ಪಕ್ಷಿಗಳ ಸಂತತಿಯನ್ನೂ ರಕ್ಷಿಸಬಹುದಾಗಿದೆ. ಅಲ್ಲದೇ ಫೋಟೋಗ್ರಫಿಗೆ ಅನುಮತಿ ನೀಡಿ ಆದಾಯವನ್ನೂ ಗಳಿಸಬಹುದಾಗಿದೆ. ಜನಾಕಾರ್ಷಣೆ ಕೇಂದ್ರವಾಗಲಿದೆ. ಮಳೆಗಾಲದ ಅವಧಿಯಲ್ಲೇ ಇದಕ್ಕೆ ಸಮ್ಮತಿ ಸಿಕ್ಕರೆ ಸೂಕ್ತ. ಈ ಬಗ್ಗೆ ನಗರ ಪಾಲಿಕೆಯ ಗಮನ ಸೆಳೆಯಲಾಗಿದ್ದು, ಅನುಮತಿ ಸಿಗುವ ಭರವಸೆ ಇದೆ. ಇನ್ನು ಜನಾರೋಗ್ಯದ ದೃಷ್ಟಿಯಿಂದ ಡಿಸಿಎಂ ಟೌನ್ ಶಿಪ್ ಬಳಿಯ ಉದ್ಯಾನವನವೊಂದರಲ್ಲಿ ಚಿಪ್ಸ್ ಕಲ್ಲು, ಜಲ್ಲಿ ಕಲ್ಲು, ಮರಳು ಬಳಸಿ ವಾಕಿಂಗ್ ಪಾತ್ ಮಾಡುವ ಉದ್ದೇಶವೂ ಇದ್ದು, ಇಲ್ಲಿ ವಾಕಿಂಗ್ ಮಾಡಿದರೆ ಆರೋಗ್ಯಕ್ಕೂ ಒಳಿತು ಎಂದವರು ಅಭಿಪ್ರಾಯಿಸಿದ್ದಾರೆ.
– ಜಿ.ಎಸ್. ವಸಂತ್ ಕುಮಾರ್