ಬೆಂಗಳೂರು, ಜು. 11 – ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರುತ್ತಿರುವಂತೆಯೇ ರಾಜ್ಯ ಸರ್ಕಾರ ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಜುಲೈ 14ರಿಂದ 22ರವರೆಗೆ ಸಂಪೂರ್ಣ ಲಾಕ್ಡೌನ್ ಹೇರಿಕೆ ಮಾಡಿದೆ. ಈ ಕುರಿತ ವಿವರವಾದ ಮಾರ್ಗಸೂಚಿಗಳನ್ನು ಸೋಮವಾರ ಪ್ರಕಟಿಸಲಾಗುವುದು.
ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಣಿತರ ಸಲಹೆಯ ಮೇರೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಜುಲೈ 14ರ ಮಂಗಳವಾರ ರಾತ್ರಿ 8ರಿಂದ ಜುಲೈ 22ರ ಬೆಳಿಗ್ಗೆ 5ರವರೆಗೆ ಸಂಪೂರ್ಣ ಲಾಕ್ಡೌನ್ ಹೇರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ದಿನಸಿ, ತರಕಾರಿ, ಹಣ್ಣು, ಹಾಲು, ಔಷಧಿ ಇತ್ಯಾದಿಗಳು ಅನಿರ್ಬಂಧಿತವಾಗಿ ಲಭ್ಯವಿರಲಿವೆ. ಎಂಬಿಬಿಎಸ್ ಹಾಗೂ ವೈದ್ಯಕೀಯ ಪಿ.ಜಿ. ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ.
ರಾಜಧಾನಿ ಬೆಂಗಳೂರಿನ ಎಂಟು ವಲಯಗಳ ಉಸ್ತುವಾರಿ ಸಚಿವರು ಹಾಗೂ ಪರಿಣಿತರ ಜೊತೆ ಚರ್ಚಿಸಿದ ನಂತರ ಯಡಿಯೂರಪ್ಪ ಲಾಕ್ಡೌನ್ ಹೇರುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಜಧಾನಿಯಲ್ಲಿ ಕೊರೊನಾ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಎಂಟು ವಲಯಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಲಾಗಿತ್ತು. ಸ್ಥಳೀಯ ಕಾರ್ಪೊರೇಟರ್ಗಳು ಹಾಗೂ ಇತರರ ಜೊತೆಗೂಡಿ ಇವರು ಕೊರೊನಾ ನಿಯಂತ್ರಿಸಬೇಕೆಂದು ತಿಳಿಸಲಾಗಿತ್ತು.
ಈ ಬಗ್ಗೆ ಹೇಳಿಕೆ ನೀಡಿರುವ ಯಡಿಯೂರಪ್ಪ, ದಿನಬಳಕೆ ವಸ್ತುಗಳನ್ನು ಖರೀದಿಸಲು ಹೋದಾಗ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಇತರೆ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಅಧಿಕಾರಿಗಳು, ಮಾಧ್ಯಮಗಳು ಹಾಗೂ ಕೊರೊನಾ ನಿಯಂತ್ರಣಕ್ಕೆ ಕಾರ್ಯ ನಿರ್ವಹಿಸುವ ಇತರರಿಗೆ ಯಡಿಯೂರಪ್ಪ ಅಭಿನಂದಿಸಿದ್ದಾರೆ.
ಅನ್ಲಾಕ್ 2.0 ಆರಂಭವಾದ ನಂತರ ಸರ್ಕಾರ ಈಗಾಗಲೇ ಜುಲೈ 5ರಿಂದ ಆಗಸ್ಟ್ 12ರ ನಡುವಿನ ಭಾನುವಾರಗಳಲ್ಲಿ ಈಗಾಗಲೇ ಲಾಕ್ಡೌನ್ ಹೇರಿಕೆ ಮಾಡಿತ್ತು.
ಜುಲೈ 11ರ ಸಂಜೆ ರಾಜ್ಯದಲ್ಲಿ 36 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳಿವೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 16,862 ಕೊರೊನಾ ಪ್ರಕರಣಗಳಿವೆ. ಬೆಂಗಳೂರು ಗ್ರಾಮಾಂತರದಲ್ಲಿ 345 ಪ್ರಕರಣಗಳಿವೆ.