ದಾವಣಗೆರೆ, ಅ.14- ರೈತರಿಗೆ ಹನಿ ನೀರಾವರಿ ಸಹಾಯಧನ ನೀಡುವಂತೆ ಆಗ್ರಹಿಸಿ ನಗರದಲ್ಲಿ ಇಂದು ಜಿಲ್ಲಾ ಹನಿ-ತುಂತುರು ನೀರಾವರಿ ವಿತರಕರ ಸಂಘದ ನೇತೃತ್ವದಲ್ಲಿ ಜಿಲ್ಲಾ ಸಮಸ್ತ ರೈತ ಬಾಂಧವರು, ನೀರಾವರಿ ವಿತರಕರು ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಅವರಿಗೆ ಅರ್ಪಿಸುವ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಜಿಲ್ಲಾ ಹನಿ ನೀರಾವರಿ ವಿತರಕರು ಪ್ರತಿ ವರ್ಷದಂತೆ ರೈತರಿಗೆ ಈಗಾಗಲೇ ಹನಿ ನೀರಾವರಿ ಉಪಕರಣಗಳನ್ನು ನೀಡಿದ್ದು, ಸರ್ಕಾರವು ದಿಢೀರನೆ ಹನಿ ನೀರಾವರಿ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿದೆ. ವರ್ಷದ ಮಧ್ಯಂತರ ಅವಧಿಯಲ್ಲಿ ಮಾರ್ಗಸೂಚಿಯನ್ನು ಸೆ.29, 2020 ರಂದು ಯಾವುದೇ ಮುನ್ಸೂಚನೆ ಇಲ್ಲದೆ ಬದಲಾವಣೆ ಮಾಡಿರುವುದು ಮುಖ್ಯವಾಗಿ ರೈತರಿಗೆ ಹಾಗೂ ವಿತರಕರಿಗೆ ತೊಂದರೆ ಯಾಗುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು 6-7 ತಿಂಗಳಿಂದ ಕೊರೊನಾ ಮಹಾಮಾರಿ ದೇಶದಲ್ಲಿ ವ್ಯಾಪಿಸಿದ್ದು, ಇಂತಹ ಪರಿಸ್ಥಿತಿಯಲ್ಲಿಯೂ 2020-2021 ನೇ ಸಾಲಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರೈತರ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಉಪಕರಣಗಳನ್ನು ಅಳವಡಿಸಿದ್ದೇವೆ. ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಸರ್ಕಾರ ಉಪಕರಣಗಳನ್ನು ಖರೀದಿಸಲು ವಿನಾಯಿತಿ ನೀಡಿತ್ತು. ಈ ಸಂಬಂಧ ಕೃಷಿ ಮತ್ತು ತೋಟಗಾರಿಕೆ ಸಚಿವರುಗಳು ಇಬ್ಬರೂ ಸಹ ಮೌಖಿಕವಾಗಿ ಸುದ್ದಿ ವಾಹಿನಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಈಗಾಗಲೇ ಪ್ರಕಟವಾಗಿರುವ ಸರ್ಕಾರದ ಮಾರ್ಗಸೂಚಿಯಲ್ಲಿ ರೈತರು ಹನಿ ನೀರಾವರಿ ಸಹಾಯ ಧನ ಪಡೆಯಲು ವಿತರಕರ ಬಿಲ್ ಬಿಟ್ಟು ಕೇವಲ ಕಂಪನಿ ಬಿಲ್ಲುಗಳನ್ನು ಮಾತ್ರ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಹನಿ ನೀರಾವರಿ ಉಪಕರಣಗಳನ್ನು ಅಳವಡಿಸಿಕೊಂಡಿದ್ದು, ಸರ್ಕಾರದಿಂದ ಬರುವ ಸಹಾಯ ಧನದ ನಿರೀಕ್ಷೆಯಲ್ಲಿದ್ದಾರೆ. ಈ ನಿರೀಕ್ಷೆ ಹುಸಿಯಾದರೆ ರೈತರಿಗೆ ತುಂಬಾ ತೊಂದರೆ ಆಗುವುದರ ಜೊತೆಗೆ ನಷ್ಟವೂ ಆಗುತ್ತದೆ ಎಂದು ಅಳಲಿಟ್ಟರು.
ಪ್ರತಿಭಟನೆಯಲ್ಲಿ ಘಟಕದ ಜಿಲ್ಲಾಧ್ಯಕ್ಷ ಯೋಗೇಶ್, ತಾಲ್ಲೂಕು ಅಧ್ಯಕ್ಷ ಎಚ್.ಎಸ್. ಚೇತನ್ ಕುಮಾರ್, ಎಲೆಬೇತೂರು ರಾಜು, ಉಮೇಶ್ ಹಾಲುವರ್ತಿ, ಕಾರ್ತಿಕ್, ಚನ್ನಬಸಪ್ಪ, ಯೋಗೀಶ್, ಶಿವರಾಜ್, ದಯಾನಂದ, ಸುನೀಲ್, ಮಾರುತಿ, ಮಧು, ಓಂಕಾರಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.