ಹೀಗೆ ನಾನು ಮತ್ತು ಗೆಳತಿ ಮಾತನಾಡುವ ಸಂದರ್ಭದಲ್ಲಿ ನಮ್ಮ ಮಕ್ಕಳ ಬಗ್ಗೆ ಪ್ರಸ್ತಾಪವಾಯಿತು. ಗೆಳತಿ ವೃತ್ತಿಯಲ್ಲಿ ವೈದ್ಯರಾಗಿರುವರು. ನನಗೇನಾದರೂ ಯಾರಾದರೂ, ” ನೀನು ಏನು ಕೇಳಿದರೂ ಕೊಡುತ್ತೇನೆ.. ಕೇಳಿಕೋ.. “ಎಂದರೆ ಮತ್ತೊಮ್ಮೆ ನಾನು ನನ್ನ ಮಗಳು ಪುಟ್ಟ ಕಂದನಾಗಿ, ನಾನು ಮೊದಲಿನಿಂದ ತಾಯಿಯ ಕರ್ತವ್ಯವನ್ನು ನಿಭಾಯಿಸಿಕೊಂಡು ಬರುವ ಜೀವನವನ್ನು ಕೊಡುವಂತೆ ಕೇಳಿಕೊಳ್ಳುವೆ ಎಂದರು. ನಾನು ಅಚ್ಚರಿಯಿಂದ ಏಕೆ? ಎಂದು ಕೇಳಿದೆ. ಅವರು ಹೀಗೆ ಹೇಳಿದರು ಆಗೆಲ್ಲ ಕೆಲಸದ ಒತ್ತಡದಲ್ಲಿ ಮಗುವಿನ ಕಡೆಗೆ ಹೆಚ್ಚು ಗಮನ ಕೊಡಲಾಗಲಿಲ್ಲ. ಮಗು ಏನಾದರೂ ಹಠ ಮಾಡಿದರೆ ಕೋಪದಿಂದ ಬಯ್ಯುತ್ತಿದ್ದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೆಚ್ಚಿನ ಸೇವೆಯನ್ನು ಕೊಡುವ ಸಲುವಾಗಿ ಮಗುವಿನ ಕುಟುಂಬದ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಲಿಲ್ಲ. ಈಗಲೂ ಅವಳನ್ನು sorry ಕೇಳುತ್ತಾ ಚಿನ್ನು ನಿನಗೆ ನನ್ನ ಮೇಲೆ ಕೋಪ ಇಲ್ಲವೇ ಎಂದು ಕೇಳುವೆ… ಅಂದರು.
ಇದೇ ಚರ್ಚೆ ನಡೆಯುವ ಒಂದು ವಾರದ ಹಿಂದೆ ಒಬ್ಬ ಗೆಳತಿ ಮಾತನಾಡುತ್ತಾ ಹೀಗೆಂದರು. ಅವರು ಸಭ್ಯ ಗೃಹಿಣಿ. ಮಮತಾ “ಸದಾ ಮಕ್ಕಳ ಸೇವೆ ಮಾಡಿ ಮಾಡಿ ತಪ್ಪು ಮಾಡಿದೆ ಅನಿಸುತ್ತಿದೆ. ಈಗ ತಮ್ಮ ಚಿಕ್ಕ ಪುಟ್ಟ ಕೆಲಸಗಳನ್ನೂ ಮಾಡಿಕೊಳ್ಳುವುದಿಲ್ಲ. ನನಗೂ ಆರೋಗ್ಯ ಮೊದಲಿನಂತಿಲ್ಲ. ಆದರೂ ಅಷ್ಟು ದೊಡ್ಡ ಮಕ್ಕಳ ಶೂ ಪಾಲಿಶ್‌ನಿಂದ ಹಿಡಿದು ತಿಂಡಿ ತಿನ್ನಿಸುವ ಕೆಲಸವೂ ನನ್ನದೆಯೇ… ನನಗನಿಸುತ್ತೆ ನಾನು ಇವರನ್ನು ಇಷ್ಟೊಂದು ಅತಿಯಾಗಿ ಮುದ್ದಾಗಿ ಬೆಳೆಸಬಾರದಿತ್ತು ಎಂದು. ಇವರಿಗಾಗಿ ನಾನು ಸರ್ಕಾರಿ ಕೆಲಸ ಬಿಟ್ಟೆ. ನಾನು ತುಂಬಾ ಕಷ್ಟಪಟ್ಟು, ಇಷ್ಟಪಟ್ಟು ಸಂಪಾದಿಸಿದ ಉಪನ್ಯಾಸಕ ವೃತ್ತಿಯನ್ನು ಮಕ್ಕಳ ಪೋಷಣೆಯ ಸಲುವಾಗಿ ಬಿಟ್ಟದ್ದು ತಪ್ಪಾಯಿತು ಎಂದರು.
ನಮ್ಮ ಮುಂದೆ ಎರಡು ಸತ್ಯಗಳಿವೆ…
ಒಂದೆಡೆ ರೋಗಿಗಳ ಹಿತ ಚಿಂತನೆ ಮತ್ತು ವೃತ್ತಿ ಧರ್ಮ ನಿಭಾಯಿಸುವ ಕಾರಣದಿಂದಾಗಿ ಕುಟುಂಬಕ್ಕೆ ಸಮಯ ಕೊಡಲು ಆಗದಿರುವುದು. ಮತ್ತೊಂದೆಡೆ ಕುಟುಂಬಕ್ಕೆ ಅತೀ ಸಮಯ ನೀಡಿದ ಪರಿಣಾಮ ಮಕ್ಕಳು ಸೋಮಾರಿಗಳಾದದ್ದು. ಹೀಗೆ ನಮಗೆ ಒಂದಲ್ಲಾ ಒಂದು ಕಾರಣಕ್ಕೆ ಘಟಿಸಿದ ಬದುಕಿನ ನೆನಪು ಸಂಭ್ರಮ ತರುವುದಿಲ್ಲ. ಆದರೆ ಅಂದಿನ ಆ ಸಮಯಕ್ಕೆ ಯಾವುದು ನಮ್ಮ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆಯೋ ಅಂದಿನ ಆ ಸ್ಥಿತಿಗೆ ಯಾವುದು ಪ್ರಾಮುಖ್ಯವೋ ಅಥವಾ ತೃಪ್ತಿಯನ್ನು ತಂದಿರುತ್ತದೆಯೋ ಅದನ್ನೇ ಮಾಡಿರುತ್ತೇವೆ. ಆದರೆ ಅದರ ನೆನಪು ನಮ್ಮಲ್ಲಿ ಸಾರ್ಥಕ ಭಾವವನ್ನು ತೆರೆದಿರುವುದು ವಿಷಾದನೀಯ. ಒಮ್ಮೆ ಹೀಗೆ ಪಶ್ಚಾತ್ತಾಪ ಪಡಲು ಪ್ರಾರಂಭಿಸಿದರೆ ಕಳೆದ ಬದುಕೆಲ್ಲ ವ್ಯರ್ಥ ಎನಿಸಲು ಪ್ರಾರಂಭವಾಗುತ್ತದೆ. ಖಂಡಿತ ಹಾಗಾಗಲು ಬಿಡಬಾರದು.
ಮರಿಗಳಿಗೆ ಗುಟುಕು ನೀಡಿ ರೆಕ್ಕೆ ಬಲಿತ ಕೂಡಲೇ ಹಾರಲು ಬಿಡುವ ಹಕ್ಕಿ ಎಂದಾದರೂ ತಾನು ಮರಿಗಳ ಜೊತೆಗೆ ಆಯುಷ್ಯ ಕಳೆಯಲಿಲ್ಲ ಎಂದು ಪರಿತಪಿಸೀತೆ? ಇಲ್ಲವೇ ಇಲ್ಲ.. ನೀಲಾಕಾಶದಲ್ಲಿ ದಣಿಯುವವರೆಗೂ ಹಾರಿ, ಬಾಯಾರಿದಲ್ಲಿ ನೀರ ಹೀರಿ ತನ್ನ ದೌರ್ಬಲ್ಯವನ್ನು ಮೀರಿ.. ಮನುಷ್ಯನ ಬದುಕಿಗೆ ಸವಾಲೆಸೆಯುತ್ತವೆ.. ತಾಕತ್ತಿದ್ದರೆ ಬದುಕಿ ತೋರಿಸಿ ನಮ್ಮಂತೆ ಎಂದು.
ಹರಿದ ನೀರು ಹಿಂತಿರುಗಿ ತಾನಿದ್ದ ಜಾಗ ಸೇರಲಾರದು. ಆದರೆ ಅದರ ಕಾರಣದಿಂದ ಹಸಿರಾದ ನೆಲ ನೋಡಿ ಸಂತಸ ಪಡಬೇಕು. ಅದು ಬೆಳೆಯೋ..? ಅಥವಾ ಕಳೆಯೋ..? ಆ ನೀರಿಂದ ಬಂದ ಬೆಳೆ ಜೀವಗಳನ್ನು ಬದುಕಿಸಿದರೆ, ಕಳೆ ನೆಲಕ್ಕೆ ಗೊಬ್ಬರವಾದೀತು.
ಮರಿಗಳಿಗೆ ಗುಟುಕು ನೀಡಿ ರೆಕ್ಕೆ ಬಲಿತ ಕೂಡಲೇ ಹಾರಲು ಬಿಡುವ ಹಕ್ಕಿ ಎಂದಾದರೂ ತಾನು ಮರಿಗಳ ಜೊತೆಗೆ ಆಯುಷ್ಯ ಕಳೆಯಲಿಲ್ಲ ಎಂದು ಪರಿತಪಿಸೀತೆ? ಇಲ್ಲವೇ ಇಲ್ಲ.. ನೀಲಾಕಾಶದಲ್ಲಿ ದಣಿಯುವವರೆಗೂ ಹಾರಿ, ಬಾಯಾರಿದಲ್ಲಿ ನೀರ ಹೀರಿ ತನ್ನ ದೌರ್ಬಲ್ಯವನ್ನು ಮೀರಿ.. ಮನುಷ್ಯನ ಬದುಕಿಗೆ ಸವಾಲೆಸೆಯುತ್ತವೆ.. ತಾಕತ್ತಿದ್ದರೆ ಬದುಕಿ ತೋರಿಸಿ ನಮ್ಮಂತೆ ಎಂದು.
ಗಿಡವೊಂದು ಅರಳಿದ ಹೂವನ್ನು ತನ್ನಲ್ಲೇ ಇರಿಸಿಕೊಂಡೀತೇ… ಎಂದಾದರೂ? ತನ್ನ ಬದುಕು ಬೇರು, ಹೂವಲ್ಲ.. ಎಂದು ತಿಳಿದಿಲ್ಲವೇ..? ಅರಳಿದ ಹೂ ತನ್ನದಾದರೂ ಉದುರಿ ಹೋದದ್ದಕ್ಕೆ ಪರಿತಪಿಸೀತೆ ಎಂದಾದರೂ.. ಇಲ್ಲವೇ ಇಲ್ಲ. ಮನುಷ್ಯನೊಬ್ಬನನ್ನು ಹೊರತುಪಡಿಸಿ, ಉಳಿದ ಜೀವಿಗಳು ಘಟಿಸಿದ ಘಟನೆಗಳ ಬಗ್ಗೆ ತಲೆಕೆಡಿಸಿಕೊಂಡು ಕೂರಲಾರವು. ಹಾಗೆಂದು ಮಾಡಿದ ತಪ್ಪುಗಳನ್ನು ಮರುಕಳಿಸಬೇಕು ಎಂದಲ್ಲ. ತಪ್ಪಿನ ತಿದ್ದಿಕೆ ಆಗಬೇಕಷ್ಟೇ. ಒಂದು ಹನಿ ಹುಳಿ ಇಡೀ ಹಾಲಿನ ಅಸ್ತಿತ್ವವನ್ನೇ ಕೆಡಿಸುವಂತೆ, ಒಂದು ತಪ್ಪಿನ ನೆನಪು ಕಳೆದ ಬದುಕನ್ನೆಲ್ಲ ಕಹಿಯನ್ನಾಗಿಸಬಾರದು. ಆ ಚಿಕ್ಕ ತಪ್ಪಿನ ಹೊರತಾಗಿ ಉಳಿದೆಲ್ಲ ಕ್ಷಣಗಳ ಬಗ್ಗೆ ಸಂಭ್ರಮ ಇರಬೇಕು. ಒಂದು ಕಡೆಯ ಗೈರು ಹಾಜರಿಯು, ಮತ್ತೊಂದೆಡೆ ನೀಡಿದ ಬೆಳಕನ್ನು ನೆನೆಯಬೇಕು ಮತ್ತು ಆ ಬೆಳಕನ್ನು ಸಂಭ್ರಮಿಸಬೇಕು. ತನ್ನಿಂದ ಎಲ್ಲೆಲ್ಲಾ ಹಸಿರು ಹುಟ್ಟಿತೋ.. ಅದರ ಬಗ್ಗೆ ಹೆಮ್ಮೆ ಪಡಬೇಕು. ಸಂಭ್ರಮಿಸಲು ಬೇಕಿರುವುದು ನಮ್ಮೊಳಗಿನ ಒಂದು ಆಲೋಚನೆಯ ಬದಲಾವಣೆ ಅಷ್ಟೇ.
ಹಕ್ಕಿಗಳಂತೆ, ಗಿಡಗಳಂತೆ, ಹುಳಗಳಂತೆ ನಾವಾಗಬೇಕು.. ಹರಿವ ನದಿ, ಮೊಳೆವ ಗಿಡ, ಬೀಳುವ ಹುಳು ಹುಪ್ಪಟೆಗಳು, ಉಲಿವ ಗಿಳಿ, ನಲಿವ ನವಿಲು ಎಂದಿಗೂ ಘಟಿಸಿದ ಬದುಕಿಗೆ ಪಶ್ಚಾತ್ತಾಪ ಪಡುವುದೇ ಇಲ್ಲ. ಏಕೆಂದರೆ ಅವುಗಳದ್ದು ನಿರುಪದ್ರವಿ ಬದುಕು. ಇಲ್ಲಿ ಮಾಡಿದ ಎಲ್ಲಾ ಕೆಲಸಕ್ಕೂ ಘಟಿಸಿದ ಎಲ್ಲಾ ಬದುಕಿನ ಬಗ್ಗೆಯೂ ಪಶ್ಚತ್ತಾಪ ಇರುವುದು ನಮಗೆ ಮಾತ್ರ…. ಹೌದಲ್ಲವೇ..?
ಮಮತಾ ಪ್ರಭು
ಹಾಸನ.
[email protected]