ಕೋಡಂಗಿಗಳು…..ನಾವು !

ಸೃಷ್ಠಿಯ ಸಮಷ್ಠಿಯಂಗಳದಿ
ತರತಮದ ಗೆರೆ ದಾಟಿ
ಗಿಡ-ಮರಗಳಿಂದದುರಿ ಉರುಳುವ
ತರಗಲೆಗಳು……ನಾವು!?

ಗಾಳಿ ಬಂದತ್ತ ಆಯ್ದು, ನಿಡುಸುಯ್ದು,
ಅಲೆಯಲ್ಲಿ ತೇಲಿ ಸಾಗುವ
ಹಾಯಿ ದೋಣಿಗಳು…..ನಾವು.?

ಗಾಳ, ಬಲೆಯ ಧಿಕ್ಕರಿಸಿ
ಸಾವು-ನೋವಿನ ಅರಿವು ಮೀರಿ
ನೀರಿಗೆದುರಾಗಿ ಈಜುವ ಮೀನುಗಳು……ನಾವು.!

ಕಂಡಷ್ಟೂ ಉಂಡು ಉಳಿಸಿ
ಗಳಿಸಿ ಬೆಳೆಸಲೆತ್ನಿಸಿ, ಸೊತು-ಗೆದ್ದು
ಬಿರುಗಾಳಿಗೆ ಬಿದ್ದರೂ ಗೂಡು-
ಮರಳಿ ಮಧುವಿಗಾಗಿ ಸುಕೋಮಲ
ಹೂ ಬನಕೆಡತಾಕುವ ಜೇನುಗಳು…..ನಾವು?

ಗುಡುಗು-ಸಿಡಿಲು-ಮಿಂಚಿನ ಹೆಂಚಿನಡಿ
ನೆಲದ ನೆಲೆ ಪತರ ಗುಟ್ಟುತ್ತಿದ್ದರೂ
ವಂಚನೆಗಳ ಗುತ್ತಿಗೆ ಹಿಡಿದು
ತಿಂಗಳ, ಮಂಗಳನಂಗಳದಿ
ಬೆವರಿಲ್ಲದೇ ತಣ್ಣಗೆ  ಬೇರಿಳಿಸಲೆತ್ನಿಸುತಲೇ…

ನೀರಿಗಾಗಿ ಪರದಾಡುತಲೇ….
ಅಜ್ಞಾನದ ದಿಂಬಿಗೊರಗಿ
ವಿಜ್ಞಾನದ ಕನಸಲಿ ಕರಗಿ
ತಂತ್ರಜ್ಞಾನದ ಬಾಲ ಹಿಡಿದು
ಜಾರಿ ಬಿದ್ದವರು…… ನಾವು!?

ನೀತಿ-ನಿಯಮಗಳನು ಮಾರಿ
ಪ್ರೀತಿಯನು ಗಾಳಿಗೆ ತೂರಿ
ಭೀತಿಯ ನೆರಳನು ಹಿಗ್ಗಿಸಿ ಹಿಗ್ಗಿಸಿ
ಖಿನ್ನತೆಯ ಕಡಲಿಗೆ ನೂಕಿ-ಆಳ ಅಳೆಯುವ
ವಿಚಿತ್ರ-ವಿಭಿನ್ನ ಕೋಡಂಗಿಗಳು…ನಾವು!?


ಮಹಾಂತೇಶ್.ಬಿ.ನಿಟ್ಟೂರ್
[email protected]

 

error: Content is protected !!