ಬಸವ ಬೆಳಗು ಕಾರ್ಯಕ್ರಮದಲ್ಲಿ ವಿಶ್ವಾರಾಧ್ಯ ಸತ್ಯಂಪೇಟೆ ಬೇಸರ
ದಾವಣಗೆರೆ, ಅ.13- ದೇಶ-ವಿದೇಶಗಳಲ್ಲೆಲ್ಲಾ ಬಸವಣ್ಣನವರು ತಲುಪಿದರು. ಆದರೆ ಕನ್ನಡಿಗರ ಮನೆ, ಮನಗಳಿಗೆ ತಲುಪಲಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ವಿಶ್ವಾರಾಧ್ಯ ಸತ್ಯಂಪೇಟೆ ಬೇಸರ ವ್ಯಕ್ತಪಡಿಸಿದರು.
ಅವರು, ಇಂದು ಸಂಜೆ ನಗರದ ಕುವೆಂಪು ಕನ್ನಡ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಬಸವ ಬೆಳಗು ಕಾರ್ಯಕ್ರಮದಲ್ಲಿ ಯುಗದ ಉತ್ಸಾಹ ಬಸವಣ್ಣ ವಿಷಯವಾಗಿ ಉಪನ್ಯಾಸ ನೀಡಿದರು.
ಅಮೇರಿಕಾ, ಇಂಡೋನೇಷಿಯಾ, ದುಬೈ, ಬ್ರಿಟನ್ ದೇಶಗಳಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿತವಾದವು. ಅಲ್ಲದೇ ಅಲ್ಲಿನ ಜನರು ಬಸವಣ್ಣನವರ ವಚನಗಳು, ತತ್ವಾ ದರ್ಶಗಳನ್ನು ಅರಿತು ನಡೆಯುವುದರಿಂದ ಬಸವಣ್ಣ ತಲುಪುವಂತಾಯಿತು. ಆದರೆ ನಮ್ಮ ದೇಶದಲ್ಲಿ ಬಸವಣ್ಣನವರ ವಚನದ ಒಂದು ಸಾಲನ್ನು ಅನುಸರಿಸುವ, ಅನುಕರಿಸುವ ವ್ಯವಧಾನ ಇಲ್ಲವಾಗಿದೆ. ಅವರ ತತ್ವಾದರ್ಶಗಳ ಮಹತ್ವದ ಅರಿವಿಲ್ಲ ವಾಗಿದೆ. ಹಾಗಾಗಿ ಇಂದಿಗೂ ಅವರು ತಲು ಪಲಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರ ತತ್ವದಂತೆ
ಕಾಯಕ ನಿಷ್ಠೆಯನ್ನು ಸಮರ್ಥವಾಗಿ ಮಾಡದ ಕಾರಣ ಪ್ರಸ್ತುತ ಬಸವಣ್ಣನವರು ಎಲ್ಲರಲ್ಲೂ ತಲುಪಲು ಸಾಧ್ಯವಾಗಿಲ್ಲ. ದೀನ-ದಲಿತರು, ಕೆಳಗೆ ಬಿದ್ದವರನ್ನು ಮೇಲೆತ್ತಿದ ಮಹಾನ್ ಚೇತನ ಬಸವಣ್ಣ. ಮೇಲ್ವರ್ಗ, ತಳ ವರ್ಗ ಎಂಬುದು ಮನಸ್ಥಿತಿಯಲ್ಲಿ ಹುದುಗಿದ ಭೇದ-ಭಾವ. ಆದರೆ, 12ನೇ ಶತಮಾನದಲ್ಲಿಯೇ ಜಾತಿ ರಹಿತವಾದ ಸಮಾನತೆ ಸಮಾಜಕ್ಕೆ ಬುನಾದಿ ಹಾಕಿ ಭೇದ-ಭಾವಕ್ಕೆ ಅಂತ್ಯ ಹಾಡುವ ಕೆಲಸ ಮಾಡಿದರು. ಇಡೀ ಜಗತ್ತೇ ಬಸವಣ್ಣನವರನ್ನು ಒಪ್ಪಿಕೊಂಡು, ಅಪ್ಪಿಕೊಂಡಿದೆ. ನಾವೆಲ್ಲರೂ ಬಸವಣ್ಣನವರ ತತ್ವಾದರ್ಶಗಳನ್ನು ಒಪ್ಪಿಕೊಂಡು ಅಪ್ಪಿಕೊಳ್ಳಬೇಕಿದೆ ಎಂದು ಆಶಿಸಿದರು.
ಬಸವಣ್ಣನವರ ಸರಳ ವ್ಯಕ್ತಿತ್ವವನ್ನು ಇಂದಿಗೂ ಕಾಣಲು ಸಾಧ್ಯವಿಲ್ಲ. ವಚನ ಸಾಹಿತ್ಯ ವಿಶ್ವದ ಬೇರೆ ಯಾವ ಭಾಷೆಯಲ್ಲೂ ಸಿಗಲ್ಲ. ಬಸವಣ್ಣನವರ ಪ್ರತಿಯೊಂದು ವಚನಗಳು ಅರ್ಥಪೂರ್ಣ ಮತ್ತು ಉಜ್ವಲ ಭವಿಷ್ಯಕ್ಕೆ ದಾರಿ ದೀಪಗಳಾಗಿವೆ. ವಚನಗಳನ್ನು ಹೃದಯದಿಂದ ಆಸ್ವಾದಿಸಿದರೆ ಬೆಲ್ಲ ಸವಿದಂತೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ, ಬಸವಣ್ಣನವರ ವಚನಗಳು ಬದುಕಿಗೆ ಒಂದೇ ತೆರನಾದ ಸಂದೇಶ ಸಾರಲಿವೆ. ನ್ಯಾಯವಾದಿಗಳೂ ಆಗಿದ್ದ ಅಂಬೇಡ್ಕರ್ ಅವರು ವಚನಗಳ ಸಾರವನ್ನು ಸಂಪೂರ್ಣವಾಗಿ ಅವಲೋಕಿಸಿಯೇ ಆ ಆಧಾರದ ಮೇಲೂ ಸಂವಿಧಾನ ರಚಿಸಿದ್ದಾರೆ. ಬಸವಣ್ಣನವರು ಕೇವಲ 12ನೇ ಶತಮಾನಕ್ಕಷ್ಟೇ ಸೀಮಿತರಲ್ಲ. ಪ್ರಸ್ತುತ 21ನೇ ಶತಮಾನಕ್ಕೂ ಪ್ರಸ್ತುತರಾಗುತ್ತಾರೆ. ಅವರು ಯುಗ ಯುಗಗಳಿಗೂ ಉತ್ಸಾಹದ ಬೆಳಕು ಎಂದು ತಿಳಿಸಿದರು.
ಲಿಂಗಾಯಿತರಿಗೆ ತಮ್ಮ ಸಮುದಾಯದ ಮೂಲ ಮತ್ತು ಇತಿಹಾಸ ಗೊತ್ತಿಲ್ಲವಾಗಿದ್ದು, ಇವೆರಡರ ಕೊರತೆ ಇದೆ. ಇವುಗಳನ್ನು ತಿಳಿಸುವ ಕೆಲಸವಾಗುತ್ತಿಲ್ಲ. ಜವಾಬ್ದಾರಿ ಹೊತ್ತವರು ಹಿಂದೆ ಸರಿದಿದ್ದಾರೆ. ಇತಿಹಾಸ ಗ್ರಹಿಸದವರು ಇತಿಹಾಸ ಸೃಷ್ಠಿಸಲಾರರು ಎಂದರು.
ಬಸವಣ್ಣನವರ ವಚನಗಳ ಅವಲೋಕನವೇ ವ್ರತ. ಲಿಂಗ ಪೂಜೆ ತಪ್ಪು-ಒಪ್ಪುಗಳ ಸರಿಪಡಿಸುವ ಪ್ರತಿಜೆ. ಲಿಂಗ ಪೂಜೆ ಮಾಡುವಾಗ ಅದರಲ್ಲಿ ನಮ್ಮ ಮುಖವನ್ನು ಕಾಣುವ ಜೊತೆಗೆ ಅಂತರಂಗವನ್ನು ನೋಡಬೇಕು. ಕಾಯಕ ಮತ್ತು ಕಾಯಕ ನಿಷ್ಠೆ, ಮನಶುದ್ಧಿ ಇರಬೇಕೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ, ಬಸವಣ್ಣನವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಅಸ್ಪೃಶ್ಯರನ್ನು ಕಡೆಗಣಿಸಿದ ಜಾಗದಲ್ಲೇ ಗೌರವ ಸಿಗುವಂತೆ ಮಾಡಿದರು. ಪ್ರಸ್ತುತ ಬಸವಣ್ಣನವರ ತತ್ವಾದರ್ಶಗಳ ಆಚರಣೆಯಲ್ಲಿ ವಿಳಂಬ ಕಾಣುವಂತಾಗಿದೆ. ಉತ್ತಮ ಕಾಯಕ, ಕಷ್ಟದಲ್ಲಿರುವವರಿಗೆ ಹೃದಯದಿಂದ ಸಹಾಯ ಮಾಡುವ ಸಮಾಜ ಮುಖಿ ಕಾರ್ಯಗಳೇ ಬಸವ ಬೆಳಕು. ಆ ಮುಖೇನ ಅವರ ಅನುಯಾಯಿಗಳಾಗಲು ಸಾಧ್ಯವೆಂದರು.
ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಣ್ಣ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರುಳಸಿದ್ದಯ್ಯ ಬಸವನಾಳು, ಸಿದ್ದರಾಮಪ್ಪ, ವೀಣಾ ಮಂಜುನಾಥ್, ಶಶಿಧರ ಬಸಾಪುರ ಸೇರಿದಂತೆ ಇತರರು ಇದ್ದರು.