ಕೆಲಸ ಬಹಿಷ್ಕರಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ದಾವಣಗೆರೆ, ಜು.10- ವಿವಿಧ ಬೇಡಿಕೆಗಳ ಈಡೇ ರಿಕೆಗೆ ಆಗ್ರಹಿಸಿ ನಗರದಲ್ಲಿಂದು ಆಶಾ ಕಾರ್ಯಕರ್ತೆ ಯರು ತಮ್ಮ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. 

ನಗರದ ಜಯದೇವ ವೃತ್ತದಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜಮಾಯಿಸಿದ್ದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನಾ ಧರಣಿ ನಡೆಸಿ, ನಂತರ ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕೊರೊನಾ ತಡೆಯ ಹೋರಾಟದ ಯಶಸ್ಸಿಗೆ ಆಶಾ ಕಾರ್ಯಕರ್ತೆಯರು ಆಧಾರ ಸ್ಥಂಭ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ, ಅಂತರ ರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಮತ್ತು ಇತರರನ್ನು ಸ್ಕ್ರೀನಿಂಗ್ ಮಾಡಿ, ಸೋಂಕು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಪಾಯಕಾರಿ ಕೆಲಸಗಳಲ್ಲಿ ಎದೆಗುಂದದೆ ಕಾರ್ಯ ನಿರ್ವಹಿಸಿರುತ್ತಾರೆ. ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆಯರು ವೇತನವಿಲ್ಲದೆ, ರಕ್ಷಣೆಯಿಲ್ಲದೆ, ಸಾಫ್ಟ್‍ವೇರ್ ಅವ್ಯವಸ್ಥೆಯಿಂದಾಗಿ ಬಳಲಿದ್ದಾರೆ ಎಂದು ಪ್ರತಿಭಟನಾಕಾರರು ಅಳಲಿಟ್ಟರು.

 ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಬಗ್ಗೆ ಈ ವರ್ಷದ ಜನವರಿ ತಿಂಗಳಿಂದ ಇಲ್ಲಿಯವರೆಗೆ ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದಾರೆ.ಇಷ್ಟದಾರೂ ನಮ್ಮಗಳ ಸಮಸ್ಯೆ ಬಗ್ಗೆ ಸರ್ಕಾರ ಕನಿಷ್ಟ ಪಕ್ಷ ಸಭೆಯನ್ನು ಕರೆಯುವ ಪ್ರಸ್ತಾಪವನ್ನೂ ಮುಂದಿಟ್ಟಿಲ್ಲ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ಅಸಮಾಧಾನ ವ್ಯಕ್ತಪಡಿಸಿದರು. 

ರಾಜ್ಯದ ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿದೆ. ಅಷ್ಟೇ ಅಲ್ಲದೇ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೂ ಮನವಿ ಕೊಟ್ಟು ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಕೇಳಲಾಗಿದೆ. ಇದ್ಯಾವುದಕ್ಕೂ ಸರ್ಕಾರ ಜಗ್ಗುತ್ತಿಲ್ಲ. ಬೇರೆ ಯಾವುದೇ ಪರ್ಯಾಯವಿಲ್ಲದೇ ಆಶಾ ಕಾರ್ಯಕರ್ತೆಯರು ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುವ ಸ್ಥಿತಿ ಬಂದಿದೆ ಎಂದು ಹೇಳಿದರು. 

ಆಶಾ ಕಾರ್ಯಕರ್ತೆಯರ ಸೇವೆಗೆ ನೈಜ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೂಡಲೇ ಮಾಸಿಕ 12 ಸಾವಿರ ರೂ. ಗೌರವ ಧನ ನಿಗದಿಪಡಿಸಬೇಕು, ಕೊರೋನಾ ವಿರುದ್ದ ಹೋರಾಡಲು ಅಗತ್ಯ ಪ್ರಮಾಣದ ಸುರಕ್ಷತಾ ಕಿಟ್ ಒದಗಿಸಬೇಕು ಮತ್ತು ಕೋವಿಡ್‍ಗೆ ತುತ್ತಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಮತ್ತು ಸಂಪೂರ್ಣ ಚಿಕಿತ್ಸೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಅನಿತಾ ಆನಗೋಡು, ಕೆ. ಭಾರತಿ, ಮಂಜುನಾಥ ಕುಕ್ಕುವಾಡ, ಸ್ಮಿತಾ, ಸೌಮ್ಯ, ನೀಲಮ್ಮ, ಅನಿತಾ, ದುರ್ಗಮ್ಮ, ಶಕುಂತಲಾ, ನಿರ್ಮಲ, ಆಶಾ, ರುಕ್ಕಮ್ಮ ಪುಷ್ಪಾ, ನೇತ್ರಾವತಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!