ಸದ್ಯಕ್ಕಿಲ್ಲ ಸಿನಿ ಪ್ರೇಕ್ಷಕನಿಗೆ ಸಂತಸ

ಚಿತ್ರಮಂದಿರಗಳು ಸ್ವಚ್ಚಗೊಂಡರೂ, ಪ್ರದರ್ಶನ ಡೌಟು

ದಾವಣಗೆರೆ, ಅ. 13 – ಕೇಂದ್ರ ಸರ್ಕಾರ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳನ್ನು ಆರಂಭಿ ಸಲು ಗ್ರೀನ್ ಸಿಗ್ನಲ್ ನೀಡಿದೆ. ಆದರೂ ಜಿಲ್ಲೆಯ ಸಿನಿಮಾ ಪ್ರೇಕ್ಷಕರ ನಿರಾಸೆ ಮುಂದುವರೆಯುವ ಸಾಧ್ಯತೆ ಇದೆ.

ನಗರದ ಬಹುತೇಕ ಚಿತ್ರಮಂದಿರಗಳು ಸ್ವಚ್ಛಗೊಂಡು ಚಿತ್ರ ಪ್ರದರ್ಶನಕ್ಕೆ ಸಿದ್ಧವಾಗಿವೆ. ಕಳೆದ ಏಳು ತಿಂಗಳಿನಿಂದ ಪಾಳು ಬಿದ್ದ ಮನೆಯಂತಾಗಿದ್ದ ಚಿತ್ರಮಂದಿರಗಳಲ್ಲಿ ತುಸು ಜೀವ ಕಳೆ ಬಂದಂತಾಗಿದೆ.  ಆದರೆ ಇದೇ 15 ರಿಂದ ಚಿತ್ರ ಪ್ರದರ್ಶನ ಆರಂಭಿಸುವ ಬಗ್ಗೆ ನಿರ್ಧರಿಸಿಲ್ಲ. ಕೆಲ ಚಿತ್ರ ಮಂದಿರಗಳ ಮಾಲೀಕರು ಕಾದು ನೋಡಿ, ನಂತರ ಪ್ರದರ್ಶನ ಆರಂಭಿಸುವ ನಿರ್ಧಾರದಲ್ಲಿದ್ದಾರೆ.

ಇದಕ್ಕೆ ಕೆಲವು ಕಾರಣಗಳಿವೆ.  ಹೊಸ ಚಿತ್ರಗಳು ಬಿಡುಗಡೆಯಾಗುವುದು ಅನುಮಾನ ಇರುವುದು ಪ್ರಮುಖ ಕಾರಣವಾದರೆ, ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳ ಪಾಲನೆ ಮಾಲೀಕರಿಗೆ ಹೊರೆಯಾಗುತ್ತಿರುವುದು ಮತ್ತೊಂದು ಕಾರಣ.

ಹೊಸ ಕನ್ನಡ ಚಿತ್ರಗಳಾಗಲೀ, ಪರಭಾಷಾ ಚಿತ್ರಗಳಾಗಲೀ ಬಿಡುಗಡೆಯಾಗುವ ಬಗ್ಗೆ ಮಾಲೀಕರಿಗೆ ಅನುಮಾನಗಳಿವೆ. ಹಳೆಯ ಚಿತ್ರಗಳನ್ನು ಪ್ರದರ್ಶಿಸಿದರೆ ಪ್ರೇಕ್ಷಕರ ಕೊರತೆ ಕಾಡುತ್ತದೆ. ಬೆರಳೆಣಿಕೆಯಷ್ಟು ಪ್ರೇಕ್ಷಕರಿಗಾಗಿ ಚಿತ್ರ ಪ್ರದರ್ಶಿಸಿದರೆ ಖರ್ಚು ಹೆಚ್ಚಾಗುತ್ತದೆ.

ಇನ್ನು ಸರ್ಕಾರ ಶೇ.50ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಬೇಕು. ಪ್ರತಿ ಎರಡು ಸೀಟುಗಳ ನಡುವೆ ಒಂದು ಸೀಟು ಖಾಲಿ ಬಿಟ್ಟು ಪ್ರೇಕ್ಷಕರು ಕುಳಿತುಕೊಳ್ಳಲು ಅನುವು ಮಾಡಿಕೊಡಬೇಕು. ಪ್ರೇಕ್ಷಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡುವಂತೆ ನೋಡಿಕೊಳ್ಳಬೇಕು. ಟಿಕೆಟ್ ನೀಡುವಾಗ ಡಿಜಿಟಲ್ ಪೇಮೆಂಟ್ ಮಾಡಬೇಕು ಎಂಬಿತ್ಯಾದಿ ಸೂಚನೆಗಳನ್ನು ನೀಡಿದೆ.  ಇವುಗಳನ್ನು ಪಾಲಿಸುವುದು ಸದ್ಯದ ಸ್ಥಿತಿಯಲ್ಲಿ ಮಾಲೀಕರಿಗೆ ಕಷ್ಟವಾಗಿದೆ.

ಒಂದು ಪಕ್ಷ ಹೊಸ ಚಿತ್ರ ಬಿಡುಗಡೆಯಾದರೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಖುಷಿ ಪಡುವಂತೆಯೂ ಇಲ್ಲ. ಶೇ.50ರಷ್ಟು ಸೀಟು ಬಳಕೆಯಾಗುವುದರಿಂದ ನಷ್ಟದ ಸಾಧ್ಯತೆಯೇ ಹೆಚ್ಚು.   ಈ ಎಲ್ಲಾ ಕಾರಣಗಳಿಂದಾಗಿ ನಗರದ ಚಿತ್ರಮಂದಿರಗಳು ಇನ್ನೂ ಆರಂಭವಾಗುವುದು ಅನುಮಾನ.

ಸುಣ್ಣ-ಬಣ್ಣ ಅಂತೂ ಇಲ್ಲ, ಆದ್ರೆ ಆಗಾಗ್ಗೆ ಕ್ಲೀನ್ ಮಾಡ್ತಾನೇ ಅದೀವಿ, ಪ್ರೇಕ್ಷಕರಿಲ್ಲದಿದ್ದರೂ ಆಗಾಗ್ಗೆ ಪ್ರಾಜೆಕ್ಟರ್ ಆನ್ – ಆಫ್ ಮಾಡ್ತಿದೀವಿ. ಇಲ್ಲದಿದ್ದರೆ ಯಂತ್ರಗಳು ಹಾಳಾಗ್ತವೆ ಎನ್ನುತ್ತಾರೆ ತ್ರಿನೇತ್ರ ಚಿತ್ರಮಂದಿರದ ಸಿಬ್ಬಂದಿ.

ಪತ್ರಿಕೆಯೊದಿಗೆ ಮಾತನಾಡಿದ ಗೀತಾಂಜಲಿ ಚಿತ್ರಮಂದಿರದ ಸಿಬ್ಬಂದಿಯೊಬ್ಬರು, ನಾಡಿದ್ದು ಚಿತ್ರಪ್ರದರ್ಶನ ಆರಂಭಿಸುವ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಆಗಾಗ್ಗೆ ಚಿತ್ರಮಂದಿರ ಸ್ವಚ್ಛ ಮಾಡುತ್ತಿದ್ದೇವೆ. ಈಗಲೂ ಸ್ವಚ್ಛ ಮಾಡಿದ್ದೇವೆ. ಲಾಕ್‌ಡೌನ್‌ ವೇಳೆ ಕೆಲಸವಿಲ್ಲದೆ ಕಷ್ಟವಾಗಿದೆ. ಸರ್ಕಾರವಾಗಲೀ, ಸಂಘ-ಸಂಸ್ಥೆಗಳಾಗಲೀ ನೆರವಿಗೆ ಬಾರದಿದ್ದುದು ಬೇಸರ ತರಿಸಿದೆ ಎಂದರು.

ನಗರದಲ್ಲಿ ತ್ರಿಶೂಲ್, ತ್ರಿನೇತ್ರ, ಅಶೋಕ, ಗೀತಾಂಜಲಿ, ಪದ್ಮಾಂಜಲಿ, ಪುಷ್ಪಾಂಜಲಿ, ವಸಂತ, ಅರುಣ, ಶಿವಾಲಿ  ಸೇರಿ ಹತ್ತು  ಚಿತ್ರಮಂದಿರಗಳು, ಎಸ್.ಎಸ್. ಮಾಲ್‌ನಲ್ಲಿರುವ ಒಂದು ಮಲ್ಟಿಪ್ಲೆಕ್ಸ್  ಹಾಲ್ ಇದೆ.  7 ತಿಂಗಳಿನಿಂದ ನೂರಾರು ಸಿಬ್ಬಂದಿಗಳು ಸದ್ಯ ಕೆಲಸವಿಲ್ಲದೆ ಬೇರೆ ಬೇರೆ ಕೆಲಸಗಳಲ್ಲಿ ತಲ್ಲೀನರಾಗಿದ್ದು, `ಮಂದಿರ’ಗಳು ಆರಂಭವಾಗುವುದನ್ನು ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಚಿತ್ರಪ್ರದರ್ಶನದ ಆರಂಭಕ್ಕೆ ಒಪ್ಪಿಗೆ ಸೂಚಿಸಿದೆ. ಮಾಲೀಕರ ನಡೆ ಏನು? ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನ ಆತಂಕದ ನಡುವೆಯೂ ಜನರು ಮೊದಲಿನಿಂತೆ ನಿರಾತಂಕವಾಗಿ ಚಿತ್ರಮಂದಿರಗಳಿಗೆ ಬರುವರೇ? ಕಾದು ನೋಡಬೇಕಿದೆ.

error: Content is protected !!