ಮತ್ತೆ ಕೊರೊನಾ ಸ್ಫೋಟ

ಜಿಲ್ಲೆಯಲ್ಲಿ ಒಂದೇ ದಿನ 40 ಪಾಸಿಟಿವ್, 1 ಸಾವು

ದಾವಣಗೆರೆ, ಜು. 9 – ಜಿಲ್ಲೆಯಲ್ಲಿ ಒಂದೇ ದಿನ 40 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಕರಣಗಳು ಒಂದೇ ದಿನ ಕಂಡು ಬಂದಿರುವುದಷ್ಟೇ ಅಲ್ಲದೇ, ಸಾಕಷ್ಟು ವ್ಯಾಪಕವಾಗಿ ಕೊರೊನಾ ಹರಡಿರುವುದೂ ಕಂಡು ಬಂದಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 23 ಕೊರೊನಾ ಪ್ರಕರಣಗಳು ಗುರುವಾರ ಕಂಡು ಬಂದಿವೆ. ಈ ಪೈಕಿ 21 ಪ್ರಕರಣಗಳು ನಗರದವಾಗಿವೆ.

ಒಂದೇ ದಿನ ಸಕ್ರಿಯ ಸೋಂಕಿತರು ದುಪ್ಪಟ್ಟು, ವ್ಯಾಪಕವಾಗಿ ಕಂಡು ಬಂದ ಕೊರೊನಾ, ನಗರದ ಹತ್ತಾರು ಬಡಾವಣೆಗಳಲ್ಲಿ ಸೋಂಕಿತರು

ದಾವಣಗೆರೆಯ ಸರಸ್ವತಿ ನಗರ, ಶ್ರೀನಿವಾಸ ನಗರ, ಬಸಾಪುರ, ಬಾಷಾ ನಗರ, ವಿದ್ಯಾನಗರ, ಶಿವಕುಮಾರಸ್ವಾಮಿ ಬಡಾವಣೆ, ಅಶೋಕ ನಗರ, ವೆಂಕಾಭೋವಿ ಕಾಲೋನಿ, ತರಳಬಾಳು ನಗರ, ವಿನೋಬನಗರ, ಕೆ.ಟಿ.ಜೆ. ನಗರ, ಕೆ.ಬಿ. ಬಡಾವಣೆ, ಪಿ.ಜೆ. ಬಡಾವಣೆ, ಕೆ.ಆರ್. ರಸ್ತೆಯ ಜೆ.ಕೆ. ರೆಸಿಡೆನ್ಸಿ, ಶೇಖರಪ್ಪ ನಗರ, ನರಸರಾಜಪೇಟೆ, ಎಂ.ಸಿ.ಸಿ. ಎ ಬ್ಲಾಕ್‌ಗಳಲ್ಲಿ ಗುರುವಾರ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ. ನಗರದಲ್ಲಿ ಇಷ್ಟು ವ್ಯಾಪಕ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿರುವುದು ಇದೇ ಮೊದಲು.

ನಗರದ ಚರ್ಚ್ ರಸ್ತೆಯ 73 ವರ್ಷದ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೇ ಸಾವು. ಜಿಲ್ಲೆಯಲ್ಲಿ ಒಟ್ಟಾರೆ 14 ಸಾವು, ಸಕ್ರಿಯ ಸಂಖ್ಯೆ 81

ದಾವಣಗೆರೆ ತಾಲ್ಲೂಕಿನ ಮಹದೇವಪುರ ಹಾಗೂ ಗೊಲ್ಲರ ಹಳ್ಳಿಗಳಲ್ಲೂ ಕೊರೊನಾ ಸೋಂಕಿತರಿರುವುದು ಕಂಡು ಬಂದಿದೆ.

ಇಷ್ಟೊಂದು ಸಂಖ್ಯೆಯ ಸೋಂಕಿತರು ಕಂಡು ಬಂದಿದ್ದರೂ ಸಹ, ಇವರಾರೂ ಈಗಾಗಲೇ ಸೋಂಕಿತರ ಜೊತೆ ಸಂಪರ್ಕ ಹೊಂದಿದವರಲ್ಲ. ಇವರಲ್ಲಿ ಬಹುತೇಕರು ರಾಂಡಮ್ ಸ್ಯಾಂಪಲ್, ಫ್ಲು ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವವರು, ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ. 

ಜನ ಸಮೂಹದಲ್ಲಿ ರಾಂಡಮ್ ಆಗಿ ಕೊರೊನಾ ಪರೀಕ್ಷೆ ಮಾಡಿದಾಗ 16 ಸೋಂಕಿತರು ಕಂಡು ಬಂದಿದ್ದಾರೆ. ರಾಂಡಮ್ ಸ್ಯಾಂಪಲ್ ಪರೀಕ್ಷೆಯಲ್ಲಿ ಇಷ್ಟೊಂದು ಸೋಂಕಿತರು ಕಂಡು ಬಂದಿರುವುದೂ ಸಹ ಇದೇ ಮೊದಲು.

ಹೊನ್ನಾಳಿಯಲ್ಲಿ 15 ಸೋಂಕಿತರು ಕಂಡು ಬಂದಿದ್ದಾರೆ. ರಾಂಡಮ್ ಪರೀಕ್ಷೆಯಲ್ಲಿ ಇವರಿಗೆ ಸೋಂಕಿರುವುದು ಕಂಡು ಬಂದಿದೆ. ಉಳಿದಂತೆ ಚನ್ನಗಿರಿಯಲ್ಲಿ ಒಂದು ಸೋಂಕು ಪ್ರಕರಣ ಪತ್ತೆಯಾಗಿದೆ. ಇದೇ ದಿನದಂದು ನಾಲ್ವರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರು ಚಿತ್ರದುರ್ಗದ ಭರಮಸಾಗರ, ಹೊನ್ನಾಳಿಯ ಕ್ಯಾಸಿನಕೆರೆ, ಹರಿಹರದ ಇಂದಿರಾ ನಗರ ಹಾಗೂ ದಾವಣಗೆರೆಯ ಸುಲ್ತಾನ್ ಪೇಟೆಯವರಾಗಿದ್ದಾರೆ.

ನಗರದ ಚರ್ಚ್ ರಸ್ತೆಯ 73 ವರ್ಷದ ಸೋಂಕಿತರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಗರದ ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಕೊರೊನಾ ಅಲ್ಲದೇ ಸಕ್ಕರೆ ಕಾಯಿಲೆ, ರಕ್ತದೊತ್ತಡ, ತೀವ್ರ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದರು.

ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ದುಪ್ಪಟ್ಟಾಗಿದೆ. ನಿನ್ನೆ 41 ಆಗಿದ್ದ ಸಕ್ರಿಯ ಸೋಂಕಿತರ ಸಂಖ್ಯೆ ಗುರುವಾರಕ್ಕೆ 81ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಇದುವರೆಗೂ 423 ಜನರಲ್ಲಿ ಸೋಂಕು ಕಂಡು ಬಂದಿದ್ದು, ಇವರಲ್ಲಿ 328 ಜನರು ಗುಣಹೊಂದಿ ಬಿಡುಗಡೆಯಾಗಿದ್ದಾರೆ. 14 ಜನರು ಸಾವನ್ನಪ್ಪಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ನಗರದ ಎರಡು ಪ್ರಖ್ಯಾತ ಜವಳಿ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.

error: Content is protected !!