ಹುತಾತ್ಮರ ಸಮಾಧಿ ಸ್ಥಳಾಂತರ: ಜಾಗ ನೀಡಿದ ಡಿಸಿಗೆ ಸಮಿತಿಯಿಂದ ಸನ್ಮಾನ

ದಾವಣಗೆರೆ, ಅ. 12 – ಆನಗೋಡಿನ ಬಳಿಯ ಉಳುಪಿನಕಟ್ಟೆ ಕ್ರಾಸ್ ಬಳಿ ಹುತಾತ್ಮ ರೈತರಾದ ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ಧನೂರು ನಾಗರಾಜಾಚಾರ್ ಅವರ ಸಮಾಧಿಗಳ ಸ್ಥಳಾಂತರಕ್ಕೆ 37 ಗುಂಟೆ ಜಮೀನು ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಿತಿಯ ಅಧ್ಯಕ್ಷ ಎನ್‌.ಜಿ. ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಬೀಳಗಿ, ಉಪ ವಿಭಾಗಾಧಿಕಾರಿ ಮಮತಾ ಹೊಸ ಗೌಡರ್ ಹಾಗೂ ತಹಶೀಲ್ದಾರ್ ಗಿರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪುಟ್ಟಸ್ವಾಮಿ, ಜಿಲ್ಲಾಧಿಕಾರಿ ಬೀಳಗಿ ಅವರು ಹುತಾತ್ಮರ ಬಗ್ಗೆ ಕಾಳಜಿ ತೋರಿಸಿ, ಸಮಾಧಿಗಳನ್ನು ಸ್ಥಳಾಂತರ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ಹುತಾತ್ಮರ ಸ್ಮಾರಕ ಭವನ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು 5 ಲಕ್ಷ ರೂ. ಹಣ ಮಂಜೂರು ಮಾಡಿದ್ದಾರೆ. ಇದರ ಜೊತೆಗೆ ಜಿಲ್ಲೆಯ ಸಂಸದರು ಮತ್ತು ಶಾಸಕರ ಅನುದಾನದ ಮೂಲಕ ಸ್ಮಾರಕ ಭವನ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕೆಂದು ಅವರು ಮನವಿ ಮಾಡಿಕೊಂಡರು.

ಹುತಾತ್ಮರ ಸಮಾಧಿ ಸ್ಥಳಾಂತರಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್ ಹಾಗೂ ಪ್ರೊ. ಲಿಂಗಣ್ಣ ಸಹಕರಿಸಿದ್ದಾರೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಬೀಳಗಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ಕಾಲ ಮಿತಿಯಲ್ಲಿ ನಿರ್ಮಿಸುವ ಸಲುವಾಗಿ ಸಮಾಧಿಗಳ ಸ್ಥಳಾಂತರಕ್ಕೆ ಸ್ಪಂದಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.

ಇದನ್ನು ನಾನೇನು ರೈತರ ಮೇಲಿನ §ಅಹೆಸಾನ್’ (ಕೃಪೆ) ಎಂದು ಭಾವಿಸಿಲ್ಲ. ಇದು ನನ್ನ ಕರ್ತವ್ಯ. ಕಾನೂನು ಚೌಕಟ್ಟಿನಲ್ಲಿ ಮುಂದಿನ ಕ್ರಮಗಳಿಗೂ ಬದ್ಧವಾಗಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಹೆಚ್. ನಂಜುಂಡಪ್ಪ, ಆನಗೋಡು ಹೋಬಳಿಯಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಇಲ್ಲಿಗೆ ಸುಸಜ್ಜಿತ ನಾಡಕಚೇರಿಯ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಆವರಗೆರೆ ರುದ್ರಮುನಿ, ಹೆಚ್.ಆರ್. ಲಿಂಗರಾಜು ಶಾಮನೂರು, ಮುನಿಯಪ್ಪ ಹೊನ್ನೂರು, ಕೆ.ಪಿ. ಕಲ್ಲಿಂಗಪ್ಪ, ಕೆ.ಎಸ್. ಮೋಹನ್ ಕುಮಾರ್, ಅಣಜಿ ಬಸವರಾಜ್, ಹನುಮಂತ ನಾಯ್ಕ, ಬಸಣ್ಣ, ಚಿಕ್ಕನಹಳ್ಳಿ ಮಹೇಶಪ್ಪ, ಗೌಡ್ರ ಮಹೇಶಪ್ಪ, ಆವರಗೆರೆ ಬಸವರಾಜ್, ರುದ್ರಮುನಿ ಹರಿಹರ, ಚಂದ್ರೇಗೌಡ, ಶಿವಕುಮಾರ್ ಬಾತಿ, ನಲ್ಕುದುರೆ ಚನ್ನಬಸಪ್ಪ, ಎನ್.ಜಿ. ಪ್ರಕಾಶ್, ಪ್ರಕಾಶ್ ಕೊಂಡಜ್ಜಿ, ಆವರಗೆರೆ ಕಲ್ಲಿಂಗಪ್ಪ, ಹುತಾತ್ಮರ ಕುಟುಂಬದವರಾದ ಪರ್ವತಪ್ಪ ಹಾಗೂ ಮಲ್ಲಾಚಾರ್, ಆವರಗೊಳ್ಳ ಷಣ್ಮುಖಪ್ಪ, ಚಿನ್ನಸಮುದ್ರದ ಶೇಖರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: Content is protected !!