24 ವೆಂಟಿಲೇಟರ್‌ಗಳ ಅಳವಡಿಕೆ ಪರಿಶೀಲಿಸಿದ ಜಿಲ್ಲಾಧಿಕಾರಿ ಬೀಳಗಿ
ದಾವಣಗೆರೆ, ಅ. 12 – ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಅಗತ್ಯವಾಗಿ ಬೇಕಾಗಿದ್ದ ಆಕ್ಸಿಜನ್ ಸಂಗ್ರಹ ಘಟಕವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉದ್ಘಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬೀಳಗಿ, ಪ್ರಸಕ್ತ 6 ಸಾವಿರ ಲೀಟರ್ ಲಿಕ್ವಿಡ್ ಆಕ್ಸಿಜನ್ ಘಟಕ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 6 ಸಾವಿರ ಲೀಟರ್ ಸಾಮರ್ಥ್ಯದ ಘಟಕ ಸ್ಥಾಪಿಸಲಾಗುವುದು ಎಂದು ಹೇಳಿದರು.
ಈಗ ಅಳವಡಿಸಲಾಗಿರುವ ಲಿಕ್ವಿಡ್ ಆಕ್ಸಿಜನ್ ಘಟಕವು ರೋಗಿಗಳಿಗೆ ಎರಡು ದಿನಗಳಿಗಾಗುವಷ್ಟು ಆಕ್ಸಿಜನ್ ಪೂರೈಸುತ್ತದೆ. ಇದರ ಜೊತೆಗೆ ಸಿಲಿಂಡರ್ ಮೂಲಕವೂ ಆಕ್ಸಿಜನ್ ಸಂಗ್ರಹ ಇರಲಿದೆ ಎಂದವರು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಎಂ.ಐ.ಸಿ.ಯು. ಘಟಕದಲ್ಲಿ 24 ವೆಂಟಿಲೇಟರ್ ಬೆಡ್‌ಗಳನ್ನು ಅಳವಡಿಸಲಾಗುತ್ತಿದ್ದು, ಅವುಗಳು ಇನ್ನೆರಡು ದಿನಗಳಲ್ಲಿ ಕಾರ್ಯ ನಿರ್ವಹಣೆ ಆರಂಭಿಸಲಿವೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಈಗ 250 ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 24 ವೆಂಟಿಲೇಟರ್‌ಗಳು ಹಾಗೂ ಆಕ್ಸಿಜನ್ ಘಟಕಗಳಿಂದಾಗಿ ಅವರೆಲ್ಲರಿಗೂ ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಪ್ರಸಕ್ತ ಜಿಲ್ಲಾಸ್ಪತ್ರೆಯಲ್ಲಿ ಹತ್ತು ವೆಂಟಿಲೇಟರ್‌ಗಳಿದ್ದು, ಅವುಗಳಲ್ಲಿ ಎಂಟು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.
ಸದ್ಯಕ್ಕೆ ಘಟಕ ಅಳವಡಿಸಿದ ಸಂಸ್ಥೆಯೇ ಲಿಕ್ವಿಡ್ ಆಕ್ಸಿಜನ್ ಪೂರೈಸಲಿದೆ. ನಿರಂತರ ಆಕ್ಸಿಜನ್ ಪೂರೈಕೆಗೆ ಟೆಂಡರ್ ಕರೆಯಲಾಗುವುದು ಎಂದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಯಪ್ರಕಾಶ್, ವೆಂಟಿಲೇಟರ್ ಘಟಕಗಳಲ್ಲಿ ಕಾರ್ಯ ನಿರ್ವಹಣೆಗಾಗಿ ವೈದ್ಯರ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಾಗಿತ್ತು.
ಹತ್ತು ವೈದ್ಯರ ನೇಮಕಕ್ಕೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತಾದರೂ, ಮೂವರು ಮಾತ್ರ ನೇಮಕವಾಗಿದ್ದಾರೆ. ಬೇರೆ ವಿಭಾಗಗಳಿಂದ ನಿಯೋಜನೆ ಪಡೆಯುವ ಮೂಲಕ ವೆಂಟಿಲೇಟರ್ ಕಾರ್ಯ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರು ವೆಂಟಿಲೇಟರ್ ಅಳವಡಿಕೆ ಮಾಡುತ್ತಿರುವ ಎಂ.ಐ.ಸಿ.ಯು. ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅವರ ಜೊತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಎಇಇ ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.