ಕೋವಿಡ್-19 ವಕೀಲರ ಕಷ್ಟಕಾರ್ಪಣ್ಯ

ವಕೀಲಿ ವೃತ್ತಿ `ಶ್ರೇಷ್ಠ ವೃತ್ತಿ’ (Noble Profession) ಎಂದು ಕರೆಯಲಾಗುತ್ತದೆ. ಈ ವೃತ್ತಿ ಮಾಡುತ್ತಿರುವ ವಕೀಲರು ಹಲವು ಬಗೆಯ ಕಾಯ್ದೆಗಳನ್ನು ತಿಳಿದುಕೊಂಡಿರುತ್ತಾರೆ ಎಂಬುದೇ ಆಗಿರುತ್ತದೆ. ಸಮಸ್ಯೆ ಇರುವ ಎಲ್ಲಾ ವರ್ಗದವರು ವಕೀಲರನ್ನು ಸಂಪರ್ಕಿಸಿ ತಮಗಾದ ತೊಂದರೆಗೆ ಕಾನೂನಿನ ಸಲಹೆ ಪಡೆದುಕೊಳ್ಳುತ್ತಾರೆ. ಇಂತಹ ವಕೀಲಿ ವೃತ್ತಿಗೆ ಇಂದು ಕಷ್ಟ ಎದುರಾಗಿದೆ.

ಕಾನೂನು ಪದವಿ ಮುಗಿಸಿ, ನೆಮ್ಮದಿಯ ಜೀವನ ನಡೆಸಬೇಕೆಂಬ ಆಸೆ ಹೊತ್ತು ವಕೀಲಿ ವೃತ್ತಿಗೆ ಬರುತ್ತಾರೆ. ಕಿರಿಯ ವಕೀಲರಾಗಿದ್ದಾಗ ಸ್ವಂತವಾಗಿ ನಡೆಸಲು ಪ್ರಕರಣಗಳು ಸಿಗುವುದು ತುಂಬಾ ಕಷ್ಟ. ಹೀಗಾಗಿ ದುಡಿಮೆಯೆಂಬುದು ಕನಸಾಗಿಯೇ ಉಳಿಯುವುದರಿಂದ ಹಿರಿಯ ವಕೀಲರು ನೀಡುವ ಸಂಭಾವನೆಯ ಮೇಲೆಯೇ ಅವಲಂಬಿತರಾಗಬೇಕಾಗುತ್ತದೆ.

ಸಿಕ್ಕ ಪ್ರಕರಣಗಳಲ್ಲಿ ತಮ್ಮ ಬುದ್ದಿ ಕೌಶಲ್ಯವನ್ನು ತೋರಿಸಿ, ತಮ್ಮನ್ನು ನಂಬಿ ಬಂದ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಟ್ಟಲ್ಲಿ ಮಾತ್ರ ವೃತ್ತಿಯಲ್ಲಿ ಯಶಸ್ಸು. ವಕೀಲರಾಗಿರುವ ಎಲ್ಲರಿಗೂ ಕೈತುಂಬ ಕೇಸು, ದುಡಿಮೆ ಇರುವುದಿಲ್ಲ. 

ಸಾಮಾನ್ಯವಾಗಿ ವಕೀಲಿ ವೃತ್ತಿ ಮಾಡುವವರು ಬಡ ವರ್ಗ ಮತ್ತು ಮಧ್ಯಮವರ್ಗದವರೇ ಹೆಚ್ಚು. ಕಷ್ಟಪಟ್ಟು ಬಿ.ಎ. ಅಥವಾ ಬಿ.ಕಾಂ. ಪದವಿ ಮುಗಿಸಿ, ನೌಕರಿಗಾಗಿ ಹುಡುಕಾಡಿ, ಸಿಗದೇ ಇದ್ದಾಗ ಎಲ್.ಎಲ್. ಬಿ. ಪದವಿ ಹೊಂದಲು ಸೇರಿಕೊಳ್ಳುವವರೇ ಹೆಚ್ಚಿನ ಪ್ರಮಾಣದಲ್ಲಿರುತ್ತಾರೆ. ಮದುವೆಯಾದ ಮೇಲೆ ತಂದೆ-ತಾಯಿಯರ ಜೊತೆಗೆ ಹೆಂಡತಿ-ಮಕ್ಕಳ ಜವಾಬ್ದಾರಿಯೂ ಹೆಗಲಿಗೆ ಬೀಳುತ್ತದೆ. ಸರಿಯಾಗಿ ವರಮಾನ ಇಲ್ಲದೇ ಮಾನಸಿಕವಾಗಿ ಕುಗ್ಗುವ ವಕೀಲರಿಗೆ ಯಾವ ಭದ್ರತೆಯೂ ಇರುವುದಿಲ್ಲ. ಇದರಿಂದ ಎಷ್ಟೋ ಜನ ವಕೀಲರು ದುಡಿಮೆಗಾಗಿ ಪರದಾಡುವ ಸ್ಥಿತಿ ಬಹಳಷ್ಟಿರುತ್ತದೆ. ಇಂತಹದ್ದರಲ್ಲಿ ಅವರಿವರಲ್ಲಿ ಬೇಡಿಕೊಂಡು ವಕೀಲಿ ವೃತ್ತಿ ಮಾಡಿ, ಹೇಗೋ ತಿಂಗಳ ಜೀವನ  ಸಾಗಿಸುವ ವಕೀಲರು ತುಂಬಾ ಇದ್ದಾರೆ. ಸಾಲ ಮಾಡಿ ದ್ವಿಚಕ್ರ ವಾಹನ ಖರೀದಿಸಿ, ಪೆಟ್ರೋಲ್ ಹಾಕಿಸಲು, ಸಾಲದ ಕಂತು ಕಟ್ಟಲು ಒದ್ದಾಡುವ ವಕೀಲರೂ ಇದ್ದಾರೆ. ಇದು ವಕೀಲರ ಪರಿಷತ್ತಿನವರಿಗೆ ತಿಳಿದಿರುತ್ತದೆ. ಕಾನೂನು ಪದವಿ ಹೊಂದಿ ವೃತ್ತಿ ಮಾಡುತ್ತಿರುವ ವಕೀಲರು ತಿಂಗಳಿಗೆ 5 ರಿಂದ 10 ಸಾವಿರ ರೂಪಾಯಿ ಗಳಿಸಲು ಆಗುತ್ತಿಲ್ಲ. ಅದು ಒಬ್ಬ ಕೂಲಿ ಕೆಲಸದವ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪದವಿಯನ್ನು ಮುಗಿಸದೇ ಇರುವವರು ಸುಖವಾಗಿ ದಿನಕ್ಕೆ ಕನಿಷ್ಟ 500/- ರೂಪಾಯಿ ದುಡಿಯುತ್ತಾರೆ. ಇದು ವಕೀಲರಿಗೆ ಸಾಧ್ಯವಾಗುತ್ತಿಲ್ಲ. 

ಮಾರ್ಚ್ ತಿಂಗಳಿನಿಂದ ಕೋವಿಡ್-19 ಎಂಬ ವೈರಾಣುವಿನಿಂದ ನರಳುತ್ತಿರುವ ಜನತೆಯನ್ನು ರಕ್ಷಿಸುವುದಕ್ಕಾಗಿ ಕೇಂದ್ರ ಸರ್ಕಾರವು ಲಾಕ್‌ಡೌನ್ ಮಾಡಿರುವ ಕಾರಣದಿಂದ, ಎಲ್ಲಾ ಮೇಲಿನ ನ್ಯಾಯಾಲಯದವರು, ಕೆಳ ನ್ಯಾಯಾಲಯದವರು ತಮ್ಮ ಕಾರ್ಯ-ಕಲಾಪಗಳನ್ನು ಸ್ಥಗಿತಗೊಳಿಸಿರುವುದರಿಂದ ವಕೀಲ ಸಮುದಾಯದವರು ಸಾಕಷ್ಟು ಆರ್ಥಿಕ ಸಂಕಟಗಳಿಗೆ ಸಿಲುಕಿ ತಮಗೆ ಸಹಾಯ ಮಾಡುವಂತೆ ವಕೀಲರ ಪರಿಷತ್ತಿಗೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಹಾಯ ಯಾಚಿಸಿದರೂ ಫಲಪ್ರದವಾಗಿಲ್ಲ. ಈ ನಡುವೆ ಮೇಲಿನ ನ್ಯಾಯಾಲಯದವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ತುರ್ತು ಪ್ರಕರಣಗಳನ್ನು ನಡೆಸಲು ಅನುವು ಮಾಡಿಕೊಟ್ಟಿದ್ದು, ಅನಂತರ ಎಸ್.ಓ.ಪಿ. ಮೂಲಕ ಕೆಲವು ಪ್ರಕರಣಗಳನ್ನು ಉಭಯತರ ವಕೀಲರ ಸಮ್ಮತಿಯೊಂದಿಗೆ ಮುಂಜಾನೆ 10 ಪ್ರಕರಣಗಳನ್ನು, ಮಧ್ಯಾಹ್ನ 10 ಪ್ರಕರಣಗಳನ್ನು ಪಟ್ಟಿ ಮಾಡಿ ವಾದ-ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿರುತ್ತಾರೆ. ಕೋವಿಡ್-19 ಬಹುತೇಕ ಎಲ್ಲಾ ಊರುಗಳಲ್ಲಿ ಹರಡಿರುವುದರಿಂದ, ಸಾರಿಗೆ ಸಂಪರ್ಕವಿಲ್ಲದಿರುವುದರಿಂದ ಕಕ್ಷಿದಾರರನ್ನು ವಕೀಲರು ಕಛೇರಿಗೆ ಕರೆಯಿಸಲು ಭಯ ಇರುವುದರಿಂದ ಇದಲ್ಲದೇ ಕಕ್ಷಿದಾರನ ಬಳಿ ವಕೀಲರಿಗೆ ನೀಡಲು ಹಣವಿಲ್ಲದೇ ಇರುವುದರಿಂದ ತಮ್ಮ ಪ್ರಕರಣ ಪಟ್ಟಿಯಾಗಿದ್ದಾಗ ಹೋಗಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಬಹಳಷ್ಟಿದೆ. ತಾವಿರುವ ಸ್ಥಳದಿಂದಲೇ ತಮ್ಮ ವಾದ ಮಂಡಿಸಲು ಒಳ್ಳೆಯ ಸ್ಮಾರ್ಟ್ ಫೋನ್ ಅವಶ್ಯವಿದೆ. ಎಷ್ಟೋ ಜನ ವಕೀಲರು ಇಂದಿಗೂ ಸಹ ಕೀಪ್ಯಾಡ್ ಮೊಬೈಲ್‌ಗಳನ್ನು ಹೊಂದಿರುತ್ತಾರೆ. ಇದು ಅಂತಹವರಿಗೆ ತುಂಬಾ ಅನಾನುಕೂಲತೆ ಮಾಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ-ವಿವಾದ ಮಂಡಿಸುವ ಪ್ರಕ್ರಿಯೆಯನ್ನು ತಿಳಿಯದೇ ಇರುವ ವಕೀಲರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆ ಅಂತಹ ಪ್ರಕ್ರಿಯೆಯ ವಿಧಾನಗಳನ್ನು ತಿಳುವಳಿಕೆ ಮೂಡಿಸದೇ ನೇರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ-ವಿವಾದ ಮಂಡಿಸಲು ತಿಳಿಸಿರುವ ಕ್ರಮ ಎಷ್ಟರ ಮಟ್ಟಿಗೆ ಸೂಕ್ತ? ಮತ್ತೊಂದು ಕಡೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವಿದ್ದರೂ ಉಪಯೋಗ ಆಗುವುದಿಲ್ಲ. ಇದರ ಬಗ್ಗೆ ಚಿಂತನೆಯ ಅವಶ್ಯಕತೆ ಇದೆ.

ತಮಗಾದ ತೊಂದರೆಯನ್ನು ಬೇರೆಯವರ ಮುಂದೆ ಹೇಳದೆ ಮಾನಸಿಕವಾಗಿ ತೊಳಲಾಡುತ್ತಿದ್ದಾರೆ. ಕೆಲವರು ಸಾವಿಗೆ ಶರಣಾದ ಸಂದರ್ಭಗಳೂ ಉಂಟು. ಹಾಗಾಗಿ ಇದರ ಬಗ್ಗೆ ವಕೀಲರ ಪರಿಷತ್ತು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಗಮನ ಹರಿಸುವುದು ಬಹುಮುಖ್ಯವಾಗಿದೆ. ಎಷ್ಟೋ ವಕೀಲರು ತಮಗಾದ ತೊಂದರೆಯನ್ನು ಹೇಳಿಕೊಳ್ಳಲಾಗದೆ ಸಾವಿಗೆ ಶರಣಾದ ಸಂದರ್ಭಗಳು ಉಂಟು.

ಈಗಾಗಲೇ ಕಳೆದ ನಾಲ್ಕು ತಿಂಗಳಿನಿಂದ ವಕೀಲರು ಯಾವುದೇ ವರಮಾನವಿಲ್ಲದೇ ಆರ್ಥಿಕವಾಗಿ, ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಸಾರಿಗೆ ಸಂಪರ್ಕ ಸರಿಯಾಗಿಲ್ಲದೇ ಇರುವುದರಿಂದ ತಮ್ಮ ಕಕ್ಷಿದಾರರ ಪರವಾಗಿ ನ್ಯಾಯಾಲಯದಲ್ಲಿ ಪಟ್ಟಿಯಾದ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಬಂದು ವಾದ ಮಂಡನೆ ಮಾಡಲು ಹೆದರುವಂತಹದ್ದು ಸದ್ಯದ ಪರಿಸ್ಥಿತಿಯಾಗಿದೆ.

ಕಕ್ಷಿದಾರರಿಲ್ಲದೇ, ಫೀಜಿಲ್ಲದೆ ಒಪ್ಪತ್ತಿನ ಜೀವನ ನಡೆಸಲು, ತಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡಲು ವಕೀಲರು ಒದ್ದಾಡುತ್ತಿದ್ದಾರೆ. ಮುಂದೆ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತದೆಯೇನೋ ಎಂಬ ಆಸೆ ಹೊತ್ತು 4 ತಿಂಗಳು ಕಳೆದ ವಕೀಲರಿಗೆ ಮುಂದೆ ನ್ಯಾಯಾಲಯಗಳು ತೆರೆಯುವುದಿಲ್ಲವೇನೋ ಎಂಬಂತಹ ಪರಿಸ್ಥಿತಿ ಉಂಟಾಗಿ ತಮ್ಮ ಮುಂದಿನ ದಿನಗಳ ಚಿತ್ರಣವನ್ನು ತಮ್ಮ ಕಣ್ಮುಂದೆ ತುಂಬಿಕೊಂಡು ಆತ್ಮಸ್ಥೈರ್ಯವಿಲ್ಲದೇ ಕುಗ್ಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಕೀಲರು, ವಕೀಲರ ಪರಿಷತ್ತಿನವರು, ಸರ್ಕಾರದವರು ಗಮನ ಹರಿಸುತ್ತಾರೆಂಬ ಆಶಾಭಾವನೆಯೊಂದಿಗೆ ಕಾಯುತ್ತಿದ್ದಾರೆ.


ದಾದಾಪೀರ್ ಕೆ., ವಕೀಲರು
ದಾವಣಗೆರೆ.
[email protected]

error: Content is protected !!