ಮಾಯಕೊಂಡ : ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ
ಮಾಯಕೊಂಡ, ಅ.10 – ಮೆಕ್ಕೆಜೋಳ ಮತ್ತು ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರ ಖರೀದಿ ಕೇಂದ್ರ ತೆರೆಯದಿದ್ದರೆ, ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್. ಬಸವಂತಪ್ಪ ಎಚ್ಚರಿಸಿದರು.
ಇಲ್ಲಿನ ನಾಡ ಕಛೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಮ್ಮಿಕೊಂಡಿ ರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಶುಕ್ರವಾರ ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 1320 ರೂ. ಬೆಂಬಲ ಬೆಲೆ ನೀಡಿ ಮೆಕ್ಕೆಜೋಳ ಖರೀದಿಸಲಾಗಿತ್ತು. ಅಂದು ಕೂಡಾ ಮೆಕ್ಕೆಜೋಳ ಪಡಿತರ ಪಟ್ಟಿಯಲ್ಲಿರಲಿಲ್ಲ.
ಈಗ ಮೋದಿ ಅವರು ಪಡಿತರದಲ್ಲಿ ಸೇರಿಲ್ಲ ಎಂಬ ಕಾರಣಕ್ಕೆ ಮೆಕ್ಕೆಜೋಳದ ಖರೀದಿ ಕೇಂದ್ರ ತೆರೆದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಧೋರಣೆ ರೈತರಿಗೆ ಮರಣ ಶಾಸನವಾಗಿವೆ. ಹಿಂದಿನ ವರ್ಷ ಬೆಳೆದ ಮೆಕ್ಕೆಜೋಳ ಹಾಗೇ ಕೊಳೆಯುತ್ತಿದೆ. ಒಂದು ಕ್ವಿಂಟಾಲ್‌ಗೆ ಸಾವಿರ ರೂ.ಗಳಿಗೂ ಕೇಳುವವರಿಲ್ಲ. ಈಗ ಮಾಲು ಬರುತ್ತಿದ್ದು, ಕೂಡಲೇ ಖರೀದಿ ಕೇಂದ್ರ ತೆರೆದು ಖರೀದಿಸಬೇಕು. ರೈತರ ಮಾಲು ಮುಗಿದ ಬಳಿಕ ಕೇವಲ ಏಜೆಂಟರಿಗಾಗಿ ಖರೀದಿ ನಡೆಯಬಾರದು. ರೈತರನ್ನು ಉಳಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿಲ್ಲ. ಕಾಂಗ್ರೆಸ್ ರೈತರ ಹಿತಕಾಯಲು ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಸಿದರು.
ರೈತ ಸಂಘದ ಮುಖಂಡ ಕೊಗ್ಗನೂರು ಹನುಮಂತಪ್ಪ, ಒಂದು ಎಕರೆ ಮೆಕ್ಕೆಜೋಳ ಬೆಳೆಯಲು 20,000 ರೂ. ಖರ್ಚಾಗುತ್ತದೆ. ಕಳೆದ ವರ್ಷ ಹಾಕಿದ ಬಂಡವಾಳ ಬಂದಿಲ್ಲ. ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರಕ್ಕೆ ಬಿಸಿ ತಗಲುತ್ತದೆ. ರೈತರ ನೋವು ದೆಹಲಿಗೆ ಮುಟ್ಟಿಸುತ್ತೇವೆ ಎಂದರು.
ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್ ಮಾತನಾಡಿ, ಎಪಿಎಂಸಿ ಕಾಯಿದೆ ಜಾರಿಗೊಳಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಮತ್ತು ರೈತರ ಸಂಸ್ಥೆಗಳನ್ನು ನಾಶ ಮಾಡುತ್ತಿವೆ ಎಂದು ಆರೋಪಿಸಿದರು. ಮುಖಂಡ ಕೊಟ್ರೇಶ್ ನಾಯ್ಕ, ಬೆಂಬಲ ಬೆಲೆ ಆಧರಿಸಿಯೇ ಮೆಕ್ಕೆಜೋಳ, ಭತ್ತ ಖರೀದಿಸಿ, ಸರ್ಕಾರ ರೈತರ ಆತ್ಮಹತ್ಯೆ ತಡೆಯಬೇಕು ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವೆಂಕಟೇಶ್, ಹನುಮಂತಪ್ಪ, ಗುಮ್ಮನೂರು ಶಂಭುಲಿಂಗಪ್ಪ, ಸಿದ್ದನೂರು ಪ್ರಕಾಶ್, ಮ್ಯಾಸರಹಳ್ಳಿ ಮಹೇಶಣ್ಣ, ಪ್ರಭು, ಹೊನ್ನೂರು ಸಂತೋಷ್, ಆನಗೋಡು ಕರಿಬಸಪ್ಪ, ಬಸವರಾಜ್, ಈಚಘಟ್ಟ ಕೆಂಚಪ್ಪ ಮತ್ತಿತರರಿದ್ದರು.