ಹರಪನಹಳ್ಳಿಯ ಅರಸೀಕೆರೆ ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಹರಪನಹಳ್ಳಿ, ಜು. 7 – ಕಳೆದ 20 ತಿಂಗಳಿನಿಂದ ವೇತನ ನೀಡದಿರುವುದಕ್ಕೆ  ಸಿಟ್ಟಿಗೆದ್ದ ದಿನಗೂಲಿ ನೌಕರರು ಅಧಿಕಾರಿಗಳನ್ನು ಕೂಡಿ ಹಾಕಿ ಗ್ರಾ.ಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ಇಂದು ಜರುಗಿದೆ.

ಪಿಡಿಒ. ಮಹಮ್ಮದ್ ಹುಸೇನ್ ಹಾಗೂ ಸಹಾಯಕ ಲೆಕ್ಕಾಧಿಕಾರಿ ಅಶೋಕ್ ಟಕ್ಕಳಿಕೆ ಅವರುಗಳನ್ನು ಕೂಡಿ ಹಾಕಿದ ನೌಕರರು, ಗ್ರಾಮ ಪಂಚಾಯತ್‍ಗೆ  ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಪಿಡಿಒ ಹತ್ತಿರ ಸಂಬಳ ಕೇಳಲು ಹೋದರೆ ಕಂದಾಯ ವಸೂಲಿಯಾಗಿಲ್ಲ. ವಸೂಲಾತಿ ಆದ ಮೇಲೆ ಸಂಬಳ ಕೊಡುತ್ತೇನೆ, ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ರಾಜೀನಾಮೆ ಪತ್ರ ಬರೆದುಕೊಟ್ಟು ಹೋಗಿ ಎಂದು ಹೇಳುತ್ತಾರೆ ಎಂದು ದಿನಗೂಲಿ ನೌಕರರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಶಶಿಕುಮಾರ್, ಸುನೀಲ್ ಕುಮಾರ್, ಎಂ. ನಾಗರಾಜ್, ಮಂಜಪ್ಪ, ಕಣುವಪ್ಪ,  ರೈತ ಸಂಘದ ಮುಖಂಡ ಅರಸಾಪುರದ ಕಾಳಪ್ಪ, ದುರುಗಪ್ಪ  ಪಾಲ್ಗೊಂಡಿದ್ದರು.

error: Content is protected !!