ದಾವಣಗೆರೆ, ಅ.10- ಕೃಷಿ ವಿಸ್ತರಣೆಯಲ್ಲಿ ಡಿಪ್ಲೋಮಾ ಪಡೆದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಗಳ ಪಾತ್ರ ಮಹತ್ವವಾದದ್ದು ಎಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಪ್ರೊ|| ಜಿ.ಆರ್.ಪೆನ್ನೋಬಳ ಸ್ವಾಮಿ ತಿಳಿಸಿದ್ದಾರೆ.
ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಳೆದ ವಾರ ನಡೆದ ಕಾರ್ಯದರ್ಶಿಗಳಿಗೆ ಡಿಪ್ಲೋಮಾ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ರೈತರೊಂದಿಗೆ ನೇರ ಸಂಪರ್ಕದಲ್ಲಿರುವ ಇವರು ಒಂದು ವರ್ಷದ ಕೃಷಿ ವಿಜ್ಞಾನದಲ್ಲಿ ಡಿಪ್ಲೋಮಾ ಪಡೆದಿರುತ್ತಾರೆ. ಶಿಫಾರಸ್ಸು ಮಾಡಿರುವ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಲು ರೈತರಿಗೆ ತಿಳಿಸಿಕೊಡುವ ಮೂಲಕ ಉತ್ಪಾದನಾ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡಲು ಅವಕಾಶವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿಯೂ ಆಗಿರುವ ಮುಖ್ಯಸ್ಥ ಡಾ. ಟಿ.ಎನ್.ದೇವರಾಜ, ಡಿಪ್ಲೋಮಾ ಪಡೆದಿರುವ ಕಾರ್ಯದರ್ಶಿಗಳು ರೈತರು ಮತ್ತು ಕೃಷಿ ಸಂಶೋಧನಾ ಕೇಂದ್ರಗಳ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ಇದರಿಂದ ರೈತರು ತಮ್ಮ ಸಮಸ್ಯೆಗಳಿಗೆ ದೂರ ಪ್ರಯಾಣ ಮಾಡುವುದು ತಪ್ಪುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ. ಶ್ರೀನಿವಾಸ ಚಿಂತಾಲ್, ಸಂಯೋಜಕ ಸಿ.ಟಿ.ಚಂದ್ರಪ್ಪ ಮತ್ತಿತರರು ಹಾಜರಿದ್ದರು.