ದಾವಣಗೆರೆ, ಜು. 5- ಕುಂದುವಾಡ ಕೆರೆಯಲ್ಲಿ ಮೀನುಗಳು ಯಥೇಚ್ಛವಾಗಿ ಸಾವನ್ನಪ್ಪಿದ್ದು, ಕಳೆದ ನಾಲ್ಕೈದು ದಿನಗಳಿಂದ ವಾಯುವಿಹಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಕುಂದುವಾಡ ಕೆರೆ ಪ್ರವೇಶಿಸುತ್ತಲೇ ಸತ್ತ ಮೀನುಗಳ ವಾಸನೆ ವಾಯುವಿಹಾರಿ ಗಳನ್ನು ಸ್ವಾಗತಿಸುತ್ತದೆ. ಅದೂ ಹೊರ ಹೋಗುವವರೆಗೂ. ಈ ಮಧ್ಯೆ ಕೆರೆ ಸುತ್ತಲೂ ಮೂಗು ಮುಚ್ಚಿ ಕೊಂಡೇ ನಡೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದುವರೆಗೂ ಯಾವುದೇ ಇಲಾಖೆ ಅಥವಾ ಅಧಿಕಾರಿ ಗಳು ತಿರುಗಿಯೂ ನೋಡಿಲ್ಲ ಎಂದು ವಾಯುವಿಹಾರಿಗಳು ಆರೋಪಿಸಿದ್ದಾರೆ.
`ಜನತಾವಾಣಿ’ಯೊಂದಿಗೆ ಮಾತನಾ ಡಿದ ವಿನಾಯಕ್, ನಿತ್ಯ ಬೆಳಿಗ್ಗೆ ಶುದ್ಧ
ಗಾಳಿ ಕುಡಿಯುತ್ತಾ, ವಾಯು ವಿಹಾರ ಮಾಡಬೇಕೆಂದು ಇಲ್ಲಿಗೆ ಬರುತ್ತೇವೆ. ಆದರೆ ನಾಲ್ಕೈದು ದಿನಗಳಿಂದ ಮೀನಿನ ವಾಸನೆಯನ್ನೇ ಸೇವಿಸಬೇಕಾಗಿದೆ. ಕೆರೆಯಲ್ಲಿ ಸತ್ತ ಮೀನುಗಳನ್ನು ನಾಯಿಗಳು ರಸ್ತೆಗೆ ತಂದು ಬಿಡುತ್ತಿವೆ. ಇದರಿಂದ ವಾಸನೆ ಮತ್ತಷ್ಟು ಮೂಗಿಗೆ ರಾಚುತ್ತದೆ ಎಂದು ಹೇಳಿದರು.
ರಾಜನಹಳ್ಳಿ ಜಾಕ್ವೆಲ್ ನಿಂದ ನಿತ್ಯ ಕೆರೆಗೆ ನೀರು ಹರಿಸಲಾಗುತ್ತದೆ. ಆದರೆ ನೀರಿನ ಪಂಪ್ಗಳು ದುರಸ್ತಿಗೆ ಬಂದಿರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಕೆರೆ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಮೀನುಗಳು ಸಾವನ್ನಪ್ಪುತ್ತಿವೆ ಎನ್ನಲಾಗಿದೆ.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸತ್ತ ಮೀನುಗಳನ್ನು ತೆರವುಗೊಳಿಸಲು ಕಾರ್ಯೋನ್ಮುಖರಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.