ಮೂರು ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದು ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ

ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಕಾಂ.ಪಿ. ವಿ.ಲೋಕೇಶ್ ಆಕ್ರೋಶ

ದಾವಣಗೆರೆ, ಅ.11- ರಾಜ್ಯ ಸರ್ಕಾರ ತನ್ನದೇ ವ್ಯಾಪ್ತಿಯಲ್ಲಿ ಬರುವಂತಹ 66 ಕ್ಷೇತ್ರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿದೆ. ಅದರಂತೆ 97 ಕ್ಷೇತ್ರಗಳಲ್ಲಿ ಕೇಂದ್ರ ತನ್ನ ಅಧಿಕಾರ ಹೊಂದಿದೆ. ಅದೇನೇ ಇರಲಿ, ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಚರ್ಚಿಸದೇ ಸಂಸತ್ತಿನಲ್ಲಿ ರೈತ ವಿರೋಧಿ ಕಾಯಿದೆಗಳನ್ನು ಜಾರಿಗೆ ತಂದಿರುವುದು ಖಂಡನೀಯ ಎಂದು ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಹಾಗೂ ಎಐಕೆಎಸ್‍ನ ರಾಜ್ಯ ಸಂಚಾಲಕ ಕಾಂ.ಪಿ. ವಿ.ಲೋಕೇಶ್ ಆಕ್ರೋಶ ವ್ಯಕ್ತ ಪಡಿಸಿದರು.

ನಗರದ  ಕಾಂ.ಪಂಪಾಪತಿ ಭವನದಲ್ಲಿ ಇಂದು ನಡೆದ ಜಿಲ್ಲಾ ಎಐಕೆಎಸ್ ಪದಾಧಿಕಾರಿಗಳ ಆಯ್ಕೆ ಸಭೆ ಹಾಗೂ ಜಾಗೃತಿ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಗತ್ತನ್ನು ನಡುಗಿಸಿದಂತಹ ಕೊರೊನಾ ರೋಗದ ಭಯದಲ್ಲಿ ಇರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇದೇ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆಹಾರ ಸಂಪತ್ತನ್ನು ಸೃಷ್ಠಿಸುವಂತೆ ರೈತ ಸಮುದಾಯದ ಮೇಲೆ ದೊಡ್ಡ ದಾಳಿ ನಡೆಸುತ್ತಿದೆ. ಅಲ್ಲದೇ ಮೂರು ಸುಗ್ರೀವಾಜ್ಞೆಗಳನ್ನು ಜಾರಿಗೆ ತರುವ ಮೂಲಕ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಸಂವಿಧಾನದ 7ನೇ ಷೆಡ್ಯೂಲ್ ಪ್ರಕಾರ 97 ಕ್ಷೇತ್ರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿದೆ. ಅದರಂತೆ ರಾಜ್ಯ ಸರ್ಕಾರ ತನ್ನದೇ ವ್ಯಾಪ್ತಿಯಲ್ಲಿ ಬರುವಂತಹ 66 ಕ್ಷೇತ್ರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿದೆ ಎಂದು ಮಾಹಿತಿ ನೀಡಿದರು.

ಕೃಷಿಕರು ಬೆಳೆದಿರುವಂತಹ ದಾಸ್ತಾನುಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಲು ಅವಕಾಶವಿತ್ತು. ಆದರೆ, ಈಗ ಜಾರಿಗೊಳ್ಳುತ್ತಿರುವ ಕಾಯಿದೆಯಿಂದಾಗಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಬಹುದು. ಇದರಿಂದಾಗಿ ಎಪಿಎಂಸಿ ಹಾಗೂ ರೈತರಿಗೆ ದೊಡ್ಡ ಹೊಡೆತ ಬೀಳಲಿದೆ. ಈ ಹಿಂದೆ ರಾಷ್ಟ್ರೀಯ ತುರ್ತು ಸಂದರ್ಭದಲ್ಲಿ ಆಹಾರ ವಸ್ತುಗಳನ್ನು ಸಂಗ್ರಹ ಮಾಡುವುದಕ್ಕೆ ಅವಕಾಶವಿತ್ತು. ಆದರೆ, ಈಗಿನ ಕಾಯಿದೆಯಲ್ಲಿ ಅದಕ್ಕೆ ಅವಕಾಶವಿಲ್ಲ. ಕಾರಣ ಇದು ರೈತ ವಿರೋಧಿ ನೀತಿ ಯಾಗಿದ್ದು, ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು. 

ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ  ಹೆಚ್.ಜಿ.ಉಮೇಶ್ ಮಾತನಾಡಿ, ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆಗಳ ಸುಗ್ರೀವಾಜ್ಞೆ ವಿರೋಧಿಸಿ, ಎಐಕೆಎಸ್‍ನಿಂದ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ.  ಆದ್ದರಿಂದ ಮೂರೂ ಕಾಯ್ದೆಗಳ ಸುಗ್ರೀವಾಜ್ಞೆಯನ್ನು ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಮುಖ್ಯ ಅತಿಥಿಯಾಗಿದ್ದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಚಪ್ಪಲಿ, ಬೂಟು ಮಾರುವ ಅಂಗಡಿಗಳಿಗೆ ಹವಾ ನಿಯಂತ್ರಣ ವ್ಯವಸ್ಥೆ ಇದೆ. ಆದರೆ, ಬೆಳೆಯುವ ತರಕಾರಿ, ದವಸ, ಧಾನ್ಯಗಳನ್ನು ಸಂರಕ್ಷಿಸುವ ಘಟಕಗಳು ಇಂದಿನವರೆಗೂ ಇರದೇ ಇರುವುದೇ ರೈತರು ಇಂದಿಗೂ ಬೀದಿಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರುವ ವ್ಯವಸ್ಥೆ ಕಾಣುತ್ತಿದ್ದೇವೆ. ದೇಶದ ಬೆನ್ನೆಲುಬಾದ ರೈತರು ಮತ್ತು ಕಾರ್ಮಿಕರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಆದ್ದರಿಂದ ರೈತ, ಕಾರ್ಮಿಕರು ಒಂದಾಗಿ ಆಳುವ ಸರ್ಕಾರಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.

ಕೆ.ಎಸ್.ಜನಾರ್ದನ್, ಆನಂದರಾಜ್, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಕೊಪ್ಪಳದ ಹುಲಿಗೆಪ್ಪ, ಯೇಸುಜಾನ್‍ಶೌರಿ, ಪಿ.ಕೆ.ಲಿಂಗರಾಜು, ಭೀಮಾರೆಡ್ಡಿ, ವಿ.ಲಕ್ಷ್ಮಣ್, ಟಿ.ನಾಗರಾಜ್, ಬಾನಪ್ಪ ಆವರಗೆರೆ, ಸಿದ್ದೇಶ್, ಆವರಗೆರೆ ಚಂದ್ರು, ಆವರಗೆರೆ ವಾಸು, ಐರಣಿ ಚಂದ್ರು, ಮೊಹಮದ್‌ ರಫೀಕ್ ಚನ್ನಗಿರಿ, ಸುರೇಶ್ ‍ಯರಗುಂಟೆ, ಕೆರೆಗುಡಿಹಳ್ಳಿ ಹಾಲೇಶ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!