ಸಂದಿಗ್ಧತೆಯಲ್ಲೂ ಸರ್ಕಾರಿ ನೌಕರರ ಸೇವೆ ಶ್ಲ್ಯಾಘನೀಯ

ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಹಾಗೂ ಸಂಘದ ಸಾಧನಾ ಪಥ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬೀಳಗಿ

ದಾವಣಗೆರೆ, ಅ. 11- ಕೊರೊನಾ ಸಂದಿಗ್ಥತೆಯಲ್ಲಿ  ಸರ್ಕಾರ ನೌಕರರರು ಜೀವದ ಹಂಗು ತೊರೆದು ಜನ ಸೇವೆ ಮಾಡುತ್ತಿರುವುದು ಶ್ಲ್ಯಾಘನೀಯ. ಸಮಾಜ ನಿಮ್ಮ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಹೇಳಿದರು.

ನಗರದ ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಹಾಗೂ ಸಂಘದ ಸಾಧನಾ ಪಥ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದು.

ಕಳೆದ ಮಾರ್ಚ್ 20 ರಿಂದ ಈ ದಿನದವರೆಗೆ ಜಗತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಈ ಏಳು ತಿಂಗಳಿನಿಂದ ನಾವೆಲ್ಲಾ ಈ ಪರಿಸ್ಥಿತಿ ಎಂದು ಮುಗಿಯುತ್ತದೆಯೋ ಎಂದು ಕಾಯುತ್ತಿದ್ದೇವೆ.  ಯಾವ ಕ್ಷಣದಲ್ಲೂ ಮೈ ಮರೆಯದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಎಲ್ಲರೂ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆಗೆ ಹೆಚ್ಚು ಒತ್ತು ನೀಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. 

ನಾವೆಲ್ಲಾ ನಿವೃತ್ತರಾದ ಮೇಲೆ ಮಕ್ಕಳಿಗೆ `2020ರಲ್ಲಿ ಕೊರೊನಾ ಬಂದಿತ್ತು. ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು’ ಎಂದು ಹೇಳಬೇಕಾಗುತ್ತದೆ. ಆಗ ಮಕ್ಕಳು ಆ ವೇಳೆ `ನೀವೇನು ಸೇವೆ ಸಲ್ಲಿಸಿದ್ದಿರಿ?’ ಎಂದು ಪ್ರಶ್ನಿಸಿದಾಗ ಉತ್ತರಿಸಲಿಕ್ಕಾದರೂ ಉತ್ತಮ ಸೇವೆ ಸಲ್ಲಿಸಿರಿ ಎಂದು ಸಲಹೆ ನೀಡಿದರು.

ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಬಂದು ಕಾರ್ಯಕ್ರಮ ನಡೆಸಲು ಸಹಕಾರ ಕೇಳಿದಾಗ ಹಿಂದೆ ಮುಂದೆ ನೋಡದೆ ಹೂಂ ಎಂದಿದ್ದೇನೆ. ಮುಂದೆಯೂ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನೌಕರರ, ಅಧಿಕಾರಿಗಳ ಆಶೋತ್ತರಗಳಿಗೆ ದನಿಯಾಗಿ, ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಕಾರ್ಯ ಮತ್ತಷ್ಟು ಹೆಚ್ಚಾಗಲಿ ಎಂದು ಆಶಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತಾಲ್ಲೂಕು ಹಾಗೂ ಜಿಲ್ಲಾ ಸಂಘಗಳಲ್ಲಿ ಪಾರದರ್ಶಕತೆ ಇಲ್ಲ. ಲೆಕ್ಕ ಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ತಾಲ್ಲೂಕು ಸಂಘದ ಮೇಲೆ ಜಿಲ್ಲಾ ಸಂಘವು, ಜಿಲ್ಲಾ ಸಂಘದ ಮೇಲೆ ರಾಜ್ಯ ಸಂಘವು ನಿಯಂತ್ರಣ ಹೊಂದಿ ನಿಗಾವಹಿಸಬೇಕಿದೆ. ಸಂಘಟನೆಯಲ್ಲಿ ಆರ್ಥಿಕ ಶಿಸ್ತು ಬರಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿಯೇ ಇದೇ ಮೊದಲ ಬಾರಿ ಇಲ್ಲಿ ಸರ್ವ ಸದಸ್ಯರ ವಿಶೇಷ ಮಹಾಸಭೆ ನಡೆಸಲಾಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರು.

`ವ್ಯಕ್ತಿ ದೊಡ್ಡವನಲ್ಲ ಸಂಘ ದೊಡ್ಡದು’ ಎಂಬ ದ್ಯೇಯೋದ್ಧೇಶ ನಮ್ಮದಾಗಿದ್ದು,  ಹಣಕಾಸು ದುರುಪಯೋಗ ಸೇರಿದಂತೆ ಇತರೆ ಆಪಾದನೆ, ತನಿಖೆ ಬಗ್ಗೆ ಚರ್ಚಿಸಲಾಗುವುದು. 1 ರೂಪಾಯಿ ಸಹ ಸಂಘದ ಹಣ ದುರ್ಬಳಕೆಯಾಗಲು ಬಿಡುವುದಿಲ್ಲ ಎಂದರು.

ಸಂಘದ ಪದಾಧಿಕಾರಿಗಳಲ್ಲಿ ಪ್ರಾಮಾಣಿಕತೆ, ಬದ್ಧತೆ ಇರಬೇಕು. ಅನಾವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶವಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದನ್ನು ನೆನೆಯುತ್ತಾ, ನೌಕರರ ಸಮಸ್ಯೆ ಪರಿಹರಿಸುವಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರು ಅಗ್ರ ಪಂಕ್ತಿಯಲ್ಲಿರುತ್ತಾರೆ. ಎಲ್ಲಾ ಜಿಲ್ಲೆಗಳಲ್ಲೂ ಇಂತಹ ಜಿಲ್ಲಾಧಿಕಾರಿಗಳಿದ್ದರೆ ನೌಕರರ ಅರ್ಧದಷ್ಟು ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಅಭಿಪ್ರಾಯಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ್ ಸ್ವಾಗತಿಸಿದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ರಾಜ್ಯ ಸಂಘದ ಖಜಾಂಚಿ ಆರ್.ಶ್ರೀನಿವಾಸ್, ಗೌರವಾಧ್ಯಕ್ಷ ವಿ.ವಿ.ಶಿವರುದ್ರಯ್ಯ, ದಾವಣಗೆರೆ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಸೇರಿದಂತೆ ವಿವಿಧ ಜಿಲ್ಲೆಗಳ ಅಧ್ಯಕ್ಷರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾ ಶಾಖೆಯ ಪ್ರಥಮ ವರ್ಷದ ಪ್ರಗತಿ ಹಾದಿಯಲ್ಲಿ ಕೈ ಪಿಡಿ ಬಿಡುಗಡೆ ಮಾಡಲಾಯಿತು. ರಾಜ್ಯಾಧ್ಯಕ್ಷರ ಕುರಿತ ಜನನಾಯಕ ವೀಡಿಯೋ ಬಿಡುಗಡೆ ಮಾಡಲಾಯಿತು.  ಸಂಘದ ಯುಟ್ಯೂಬ್ ಚಾನಲ್ ಸಹ ಉದ್ಘಾಟಿಸಲಾಯಿತು.

error: Content is protected !!