ದಾನಿ ಎನ್.ಹೆಚ್. ಶ್ರೀನಿವಾಸ್ ಭರವಸೆ
ಹರಿಹರ, ಅ.10- ಹರಿಹರ ತಾಲ್ಲೂಕಿನ ಯಾವುದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದರೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ತರಹದ ತೊಂದರೆಯಾಗಬಾರದು ಎಂಬ ಉದ್ದೇಶಕ್ಕಾಗಿ ಅವರಿಗೆ ಎನ್. ಕೆ. ಹನುಮಂತಪ್ಪ ವಿದ್ಯಾ ಪೋಷಣ್ ವತಿಯಿಂದ ಹಾಗೂ ಎನ್.ಹೆಚ್. ಶ್ರೀನಿವಾಸ ಸ್ನೇಹ ಬಳಗದಿಂದ ಪ್ರತಿವರ್ಷ 1 ಲಕ್ಷ ರೂಪಾಯಿ ನೀಡಲಾಗುವುದು ಎಂದು ದಾನಿ ಎನ್.ಹೆಚ್ ಶ್ರೀನಿವಾಸ್ ಹೇಳಿದರು.
ನಗರದ ಲಲಿತ್ ಪ್ಯಾಲೇಸ್ ನಲ್ಲಿ ಮೊನ್ನೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರಾಂಕ್ ಪಡೆದಿರುವ ಅಭಿಷೇಕ್ ಅವರನ್ನು ಸನ್ಮಾನಿಸಿ, ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಿರು ಕಾಣಿಕೆ ನೀಡಿ ಅವರು ಮಾತನಾಡಿದರು.
ಮುಂದಿನ ವರ್ಷದಿಂದ ತಾಲ್ಲೂಕಿನ ಯಾವುದೇ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 90 ರಷ್ಟು ಅಂಕಗಳನ್ನು ಗಳಿಸಿ, ಉತ್ತೀರ್ಣರಾದರೆ ಅವರಿಗೆ 5 ಸಾವಿರ ಮತ್ತು ಸರ್ಕಾರಿ ಶಾಲೆಯಲ್ಲಿ ಉತ್ತೀರ್ಣರಾದರೆ ಇನ್ನೂ 2 ಸಾವಿರ ಹೆಚ್ಚು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಡಿ.ಕುಮಾರ್ ಹನಗವಾಡಿ, ಎನ್.ಹೆಚ್. ಸತ್ಯನಾರಾಯಣ, ಮಂಜುನಾಥ್, ಶಿವಣ್ಣ, ಆರ್. ರಾಘವೇಂದ್ರ, ಸುರೇಶ್ ರಾಜನವರ್, ಸುರೇಶ್ ಕುಣೆಬೆಳಕೆರೆ, ಚಿದಾನಂದ ಕಂಚಿಕೇರೆ, ಕೆ. ಜೈಮುನಿ, ಎಂ. ಆರ್. ಮಂಜುನಾಥ್, ಚಂದ್ರಶೇಖರ್, ಸುಧಾಕರ್, ರಾಜನಹಳ್ಳಿ ಮಂಜುನಾಥ್, ವಿಶ್ವನಾಥ ಮೈಲಾಳ, ವಿಶ್ವಜಿತ್, ಉಮೇಶ್, ಸುರೇಶ್, ಮಂಜುನಾಥ್ ಹನಗವಾಡಿ ಹಾಗು ಇತರರು ಹಾಜರಿದ್ದರು.