ಹೆಲ್ಮೆಟ್ ಧರಿಸದಿದ್ದರೆ, ಸ್ಥಳದಲ್ಲಿಯೇ ಹೆಲ್ಮೆಟ್ ಖರೀದಿಸಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕು

ಹರಪನಹಳ್ಳಿ : ಹೆಲ್ಮೆಟ್ ಜಾಗೃತಿ ಅಭಿಯಾನದಲ್ಲಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ

ಹರಪನಹಳ್ಳಿ, ಅ.10- ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಾ ಅಪಘಾತವಾದಲ್ಲಿ ಹೆಚ್ಚು ಸಾವು ಸಂಭವಿಸುತ್ತಿರುವ ಪರಿಣಾಮ ಹೆಲ್ಮೆಟ್ ಕಡ್ಡಾಯ ಮಾಡಲಾಗುತ್ತಿದ್ದು, ಬೈಕ್ ಸವಾರರು  ಹೆಲ್ಮೆಟ್ ಧರಿಸದಿದ್ದರೆ, ಸ್ಥಳದಲ್ಲಿಯೇ ಹೆಲ್ಮೆಟ್ ಖರೀದಿಸಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕು ಎಂದು ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಎದುರಿನ ರಾಜ್ಯ ಹೆದ್ದಾರಿ ಬಳಿ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಲ್ಮೆಟ್ ಇಲ್ಲದೆ ಬೈಕ್ ಸಂಚಾರ ಮಾಡುವುದರಿಂದ ಅಪಘಾತ, ಸಾವು-ನೋವು  ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಗಟ್ಟುವ ದಿಸೆಯಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಬಳ್ಳಾರಿ ಜಿಲ್ಲಾ ಎಸ್‍ಪಿರವರ ನಿರ್ದೇಶನದಂತೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹೆಲ್ಮೆಟ್ ಧರಿಸದ ವಾಹನ ಸವಾರರು ಸಂಚರಿಸಿದರೆ ಸ್ಥಳದಲ್ಲಿಯೇ ಹೆಲ್ಮೆಟ್ ಖರೀದಿಸಬೇಕು, ಇಲ್ಲದಿದ್ದರೆ 500 ರೂ. ದಂಡ ಕಟ್ಟಬೇಕು. ಮಧ್ಯಾಹ್ನದ ನಂತರ ಕೇವಲ ದಂಡ ಪಾವತಿಸಬೇಕು ಎಂದ ಅವರು, ಹರಪನಹಳ್ಳಿ ವೃತ್ತದಲ್ಲಿ ಈ ಕಾರ್ಯ ಮಾಡುತ್ತಲಿದ್ದು, ಹಡಗಲಿ ವೃತ್ತದಲ್ಲೂ ಶೀಘ್ರ ಇಂತಹ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿರುತ್ತದೆ, ಆದ್ದರಿಂದ ಹೆಲ್ಮೆಟ್ ಕಷ್ಟ ಎಂಬುವವರಿಗೆ ಯಮಧರ್ಮನಿಗೆ ಅದಾವುದೂ ಗೊತ್ತಾಗವುದಿಲ್ಲ. ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಲೇಬೇಕು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ನಿಯಮಗಳ ಪಾಲಿಸದಿದ್ದರೆ ಎಷ್ಟೆಷ್ಟು ದಂಡ ಎಂಬ ಕುರಿತು ಫಲಕಗಳನ್ನು ಹಾಕಲಾಗುವುದು, ಮಾಸ್ಕ್ ಧರಿಸದಿದ್ದರೆ 100 ರೂ. ದಂಡ ಸಹ ವಿಧಿಸಲಾಗುವುದು. ಹರಪನಹಳ್ಳಿ ಉಪವಿಭಾಗ ಪ್ರಥಮವಾಗಿ ಇಂತಹ ಕಾರ್ಯಕ್ರಮದ ಸಲಹೆ ನೀಡಿದ್ದರಿಂದ ಇಡೀ ಬಳ್ಳಾರಿ ಜಿಲ್ಲೆಯಲ್ಲಿ ಈ ಅರಿವು ಜಾಥಾ ನಡೆಯುತ್ತಲಿದೆ ಎಂದರು.

ಸಿ.ಪಿ.ಐ. ಕೆ. ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಬಹುತೇಕ ಮಂದಿಗೆ ತಲೆಗೆ ಪೆಟ್ಟಾಗಿ ಚಿಕಿತ್ಸೆಗೂ ಮಂಚೆಯೇ ಸ್ಥಳದಲ್ಲೇ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ದ್ವಿಚಕ್ರ ವಾಹನ ಸವಾರರಿಗೆ ಹಲವು ಬಾರಿ ಎಚ್ಚರಿಕೆ ಮತ್ತು ಅರಿವು ಮೂಡಿಸಿದರೂ ಅನೇಕರು ಹೆಲ್ಮೆಟ್ ಧರಿಸದೆ ದಂಡವನ್ನು ಪದೇ ಪದೆ ಪಾವತಿಸುತ್ತಿದ್ದು ಇದಕ್ಕಾಗಿ ಪರ್ಯಾಯ ಮಾರ್ಗವಾಗಿ ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ದಂಡದ 500 ರೂ ಬದಲಾಗಿ  ಹೆಲ್ಮೆಟ್ ಅಂದರೆ ಐಎಸ್‍ಐ ಮಾರ್ಕ್‌ನ ಹೆಲ್ಮೆಟನ್ನು ಹಣ ಪಡೆದು ಸ್ಥಳದಲ್ಲೇ ನೀಡಲಾಗುತ್ತದೆ. ಇದರಿಂದ ಪಾವತಿಸಿದ ಹಣಕ್ಕಾಗಿ ಮತ್ತೆ ಪೊಲೀಸರು ಹೆಲ್ಮೆಟನ್ನು ಧರಿಸಿದಂತಾಗುತ್ತದೆ. ಇದರ ಉದ್ದೇಶ ವಾಹನ ಸವಾರರ ಜೀವನ ರಕ್ಷಣೆಯೇ ಹೊರತು ಬೇರೆಯದಲ್ಲ ಎಂದರು.

ಸಬ್ ಇನ್‌ಸ್ಪೆಕ್ಟರ್ ಸಿ.ಪ್ರಕಾಶ್, ಎಎಸ್‍ಐ ಸದ್ಯೋಜಾತಪ್ಪ, ಕಲಾರಿ, ರತನ್ ಸಿಂಗ್, ಪ್ರಹ್ಲಾದನಾಯ್ಕ, ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಬಾಗಳಿ ಕೊಟ್ರೇಶ್, ಮಲ್ಲೇಶ್ ನಾಯ್ಕ, ರವಿಕುಮಾರ್, ವಾಸುದೇವನಾಯ್ಕ, ಅಜ್ಜಪ್ಪ, ದಾದಾಪೀರ್, ಬಸವರಾಜ್, ಕೊಟ್ರೇಶ್ ಮತ್ತು ಪೊಲೀಸ್ ಠಾಣೆಯ ಸಿಬ್ಬಂದಿಗಳು `ಹೆಲ್ಮೆಟ್ ಧರಿಸಿ ದಂಡ ತಪ್ಪಿಸಿ, ಮನೆಗೊಂದು ಮರ ತಲೆಗೊಂದು ಹೆಲ್ಮೆಟ್, ತಲೆ ಇದ್ದವರಿಗೆ ಮಾತ್ರ ಹೆಲ್ಮೆಟ್, ಹೆಲ್ಮೆಟ್ ಇಲ್ಲದ ಪ್ರಯಾಣ ಅಪಘಾತಕ್ಕೆ ಆಹ್ವಾನ’ ಇನ್ನೂ ಮುಂತಾದ ಘೋಷವಾಕ್ಯ ಗಳೊಂದಿಗೆ ಬೈಕ್ ರಾಲಿಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಜೀವ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.

error: Content is protected !!