ಕೊರೊನಾ ಸೋಂಕಿತರ ಶವಗಳ ಅಂತ್ಯಕ್ರಿಯೆ : ನಾಗರಿಕರ ವಿರೋಧ

ದಾವಣಗೆರೆ, ಜು.6- ಕೊರೊನಾ ಸೋಂಕಿನಿಂದ ಸಾವಿಗೀಡಾಗಿರುವ ಮೃತ ದೇಹಗಳನ್ನು ಸ್ಥಳೀಯ ಪಾಲಿಕೆ ಸದಸ್ಯರ ಗಮನಕ್ಕೂ ತಾರದೇ ರಾತ್ರೋ ರಾತ್ರಿ ರುದ್ರಭೂಮಿಯಲ್ಲಿ ಮಣ್ಣಿನಲ್ಲಿ ಹೂಳಿ ಅಂತ್ಯಕ್ರಿಯೆ ಮಾಡುತ್ತಿರುವುದನ್ನು ವಿರೋಧಿಸಿ ನಗರದ ಹೊರ ವಲಯದ ಎಸ್‍ಓಜಿ ಕಾಲೋನಿಯಲ್ಲಿ ಸ್ಥಳೀಯ ನಾಗರಿಕರು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ.

ಇಂಡಸ್ಟ್ರಿಯಲ್ ಏರಿಯಾದ ಎಸ್‍ಓಜಿ ಕಾಲೋನಿಯ ಹಿಂದೂ ರುದ್ರಭೂಮಿ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸ್ಥಳೀಯರು, ಕೊರೊನಾ ಸೋಂಕಿತರ ಮೃತ ದೇಹಗಳನ್ನು ರಾತ್ರೋ ರಾತ್ರಿಯೇ ಅಂತ್ಯಕ್ರಿಯೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅಂತ್ಯಕ್ರಿಯೆ ಮಾಡುವ ವಿಚಾರವನ್ನು ಸ್ಥಳೀಯ ಪಾಲಿಕೆ ಸದಸ್ಯರ ಗಮನಕ್ಕೂ ತಂದಿಲ್ಲ. ಸಮೀಪದಲ್ಲಿಯೇ ರಾತ್ರೋ ರಾತ್ರಿ ಸೋಂಕಿತರ ಶವಗಳನ್ನು ತಂದು ಅಂತ್ಯಕ್ರಿಯೆ ಮಾಡುತ್ತಿದ್ದು, ನಾವೆಲ್ಲರೂ ನೆಮ್ಮದಿ ಇಲ್ಲದೇ, ಭಯದಿಂದಲೇ ದಿನ ಕಳೆಯುವಂತಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಯಾವುದೇ ಕಾರಣಕ್ಕೂ ಹಿಂದೂ ರುದ್ರಭೂಮಿಯಲ್ಲಿ ಸೋಂಕಿತರ ಶವಗಳನ್ನು ಅಂತ್ಯಕ್ರಿಯೆ ಮಾಡಬಾರದು. ಕೋವಿಡ್ ಶವಗಳ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟ್ಟ ಕಾವಲುಗಾರ, ಸಹಕರಿಸಿದ ಪಾಲಿಕೆ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದರು.

ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾದ ವ್ಯಕ್ತಿಗಳ ಮೃತ ದೇಹಗಳ ಅಂತ್ಯಕ್ರಿಯೆಗೆ ಪ್ರತ್ಯೇಕ ಭೂಮಿಯನ್ನು ಗುರುತಿಸಲಿ. ಅಲ್ಲದೇ, ಪ್ಲಾಸ್ಟಿಕ್ ಚೀಲ ಗಳನ್ನು ಸುತ್ತಿ ಶವಗಳನ್ನು ಹೂಳುತ್ತಿರು ವುದರಿಂದ ವೈರಸ್ ಯಾವುದೇ ಸಂದರ್ಭ ದಲ್ಲಿ ಮರು ಹುಟ್ಟು ಪಡೆಯಬಹುದು. ಅಂತರ್ಜಲದ ಮೂಲಕವೂ ವ್ಯಾಪಿಸುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮ ಕಾಲೋನಿಯಲ್ಲಿ ಈವರೆಗೆ ಒಂದೇ ಒಂದು ಪಾಸಿಟಿವ್ ಕೇಸ್ ಸಹ ಇಲ್ಲ. ಹೀಗಿರುವಾಗ ನಮ್ಮ ನೆಮ್ಮದಿಗೆ ಭಂಗ ತರುವಂತೆ ಇಲ್ಲಿ ಕೋವಿಡ್ ಶವಗಳ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬಾರದು ಎಂದು ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಒಕ್ಕೊರಲಿನಿಂದ ಒತ್ತಾಯಿಸಿದರು.

error: Content is protected !!