ಸಾಧನೆ ಛಲ-ಅರ್ಪಣಾ ಭಾವ ಇದ್ದಾಗ ಸಮಾಜ ಸೇವೆ ಸಾರ್ಥಕ

ಶಾಸಕ ರವೀಂದ್ರನಾಥ ಅಭಿಮತ

ದಾವಣಗೆರೆ, ಅ.10- ಸಾಧನೆಯ ಛಲ, ಅರ್ಪಣಾ ಮನೋಭಾವ ಎಂಬುದು ಪ್ರತಿಯೊಬ್ಬರ ಜೀವ ನದಲ್ಲೂ ಇದ್ದಾಗ ಮಾತ್ರ ಸಮಾಜ ಸೇವೆ ಸಾರ್ಥಕತೆ ಪಡೆಯುತ್ತದೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ತಿಳಿಸಿದರು.

ನಗರದ ಸರಸ್ವತಿ ಬಡಾವಣೆ ಬಿ ಬ್ಲಾಕ್‍ನ ಗಣಪತಿ ಉದ್ಯಾನದಲ್ಲಿ 33ನೇ ವಾರ್ಡ್ ನಾಗರಿಕ ಹಿತರಕ್ಷಣಾ ಸಮಿತಿ, ಶ್ರೀ ಸೋಮೇಶ್ವರ ವಿದ್ಯಾಲಯ, ವಿಜಯ ವಿನಾಯಕ ಯುವಕ ನಾಗರಿಕ ವೇದಿಕೆಯಿಂದ ಇಂದು ಸಂಜೆ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 33ನೇ
ವಾರ್ಡ್‍ನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಶಿಕ್ಷಕರಿಗೆ, ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜ ಸೇವೆಯಲ್ಲಿ ಸಾಧನೆ ಮತ್ತು ಅರ್ಪಣೆ ಅನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಇರಬೇಕು. ಸಾಧನೆ ಮಾಡಿದರೆ ನಮ್ಮೊಳಗಿರುವ ಒಂದು ಅದ್ಭುತ ಚೈತನ್ಯದ ಅರಿವು ನಮಗಾಗುತ್ತದೆ. ಅರ್ಪಣೆ ಮಾಡಿದರೆ ಸಮಾಜ ಉದ್ಧಾರವಾಗುತ್ತದೆ. ನಾವು ಸಮಾಜದಿಂದ ಏನು ಪಡೆದಿದ್ದೇವೆಯೋ ಅದನ್ನು ಸಮಾಜಕ್ಕೆ ವಾಪಸ್ ಕೊಟ್ಟರೆ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಸುಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುತ್ತಿರುವುದು ಮಾದರಿ ಕಾರ್ಯವಾಗಿದೆ  ಎಂದು ಶ್ಲ್ಯಾಘಿಸಿದರು.

ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಯನ್ನು ಮನೆಯಲ್ಲಿ ಹೆತ್ತವರು, ಕುಟುಂಬಸ್ಥರು, ಶಾಲೆಯಲ್ಲಿ ಶಿಕ್ಷಕರು ಗುರುತಿಸಿ, ನೀರೆರೆದು ಪೋಷಿಸುವ ಕೆಲಸ ಮಾಡಬೇಕು ಎಂದು ಹಿತ ನುಡಿದರು.

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಮಾತನಾಡಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ 27 ವಿದ್ಯಾರ್ಥಿಗಳು, 13 ಜನ ಪಿಯು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. 

ಶಿಕ್ಷಕರಾದ ಎಂ. ಸೋಮಶೇಖರ್ ರೆಡ್ಡಿ, ಜ್ಯೋತಿ ಎನ್.ಉಪಾಧ್ಯಾಯ, ಬಿ.ಎಂ.ಗದಿಗೇಶ್, ಹೆಚ್.ಆರ್.ದಾಕ್ಷಾಯಣಿ, ಕೋಮಲ, ಎಸ್.ಆರ್.ರೇಣುಕಾ, ಹಿರಿಯ ನಾಗರಿಕರಾದ ಎಚ್.ಎಚ್. ಮಲ್ಲಿಕಾರ್ಜುನಪ್ಪ, ಶಾಂತಪ್ಪ ಪೂಜಾರಿ, ಎಂ.ಬಿ.ಪೂಜಾರ, ಗುರುರಾಜ ಭಾಗವತ್, ಜಯಕುಮಾರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಅಧ್ಯಕ್ಷ ಎಸ್.ಟಿ. ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಸೌಮ್ಯ ನರೇಂದ್ರ, ಪಾಲಿಕೆ ಸದಸ್ಯ ಕೆ.ಎಂ. ವೀರೇಶ, ಎಸ್. ಮಂಜುನಾಥ, ಪಿ.ಎಸ್.ಬಸವರಾಜ, ಶ್ರೀ ಸೋಮೇಶ್ವರ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ, ಪ್ರಾಧ್ಯಾಪಕ ಪ್ರೊ.ಗಂಗಾಧರಯ್ಯ ಹಿರೇಮಠ, ಕೆನರಾ ಬ್ಯಾಂಕ್ ನೌಕರರ ಸಂಘಟನೆ ಮುಖಂಡ ಕೆ.ರಾಘವೇಂದ್ರ ನಾಯರಿ,  ಕಾಂಗ್ರೆಸ್ ಮುಖಂಡ ಗಣೇಶ ಹುಲ್ಮನಿ, ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯಕ್ಷ ಎನ್. ಹನುಮಂತ ನಾಯ್ಕ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!