ಎನ್‌.ಹೆಚ್.-4ರಲ್ಲಿ ಸೇತುವೆ ನಿರ್ಮಿಸಲು ಒತ್ತಾಯ : ಹೆದ್ದಾರಿ ತಡೆದು ಪ್ರತಿಭಟನೆ

ದಾವಣಗೆರೆ, ಜು.6- ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸೇತುವೆ ನಿರ್ಮಿಸಲು ಒತ್ತಾಯಿಸಿ ಇಂದು ತಾಲ್ಲೂಕಿನ ಹೆಚ್.ಕಲ್ಪನಹಳ್ಳಿ ಬಳಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಸಮಿತಿ ನೇತೃತ್ವದ ರಾಷ್ಟ್ರೀಯ ಹೆದ್ದಾರಿ ತಡೆಯನ್ನು ತಡೆದು ಪ್ರತಿಭಟನಾಕಾರರ ಮನವೊಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆಯಲೆಂದು ಪ್ರತಿಭಟನಾಕಾರರು ಮುಂದಾದ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಪ್ರೊ. ಎನ್. ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ ಅವರುಗಳು ಪ್ರತಿಭಟನಾಕಾರರ ಮನವೊಲಿಸಿ, ಹೆಚ್.ಕಲ್ಪನಹಳ್ಳಿ ಗ್ರಾಮದ ಶಾಲೆಯೊಂದರ ಆವರಣದಲ್ಲಿ ಪ್ರತಿಭಟನಾಕಾರರ ಸಭೆ ನಡೆಸಿದರು.

ಮಲ್ಲಶೆಟ್ಟಿಹಳ್ಳಿ ಮಾರ್ಗವಾಗಿ ಕಬ್ಬೂರು, ಬೊಮ್ಮೇನಹಳ್ಳಿ ಮಾರ್ಗವಾಗಿ ಕೆಎಸ್‍ಆರ್‍ಟಿಸಿ ಬಸ್ ಗಳು ಸಂಚರಿಸುತ್ತವೆ. ಹೆಚ್. ಕಲ್ಪನಹಳ್ಳಿ, ಮಲ್ಲಶೆಟ್ಟಿಹಳ್ಳಿ ಗ್ರಾಮಗಳ ಸೇತುವೆ ಇಲ್ಲದ್ದರಿಂದ ಕೃಷಿ ಉತ್ಪನ್ನ ಸಾಗಿಸುವುದಕ್ಕೂ ಸಮಸ್ಯೆ ಕಾಡುತ್ತಿದೆ ಎಂದು ಅಳಲು ತೋಡಿಕೊಂಡರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮಲ್ಲಶೆಟ್ಟಿಹಳ್ಳಿ, ಹೆಚ್. ಕಲ್ಪನಹಳ್ಳಿ ಗ್ರಾಮಗಳಿಗೆ ಸೇತುವೆ ಕಲ್ಪಿಸುವುದು ನಮ್ಮ ಜವಾಬ್ಧಾರಿ. ಯಾವುದೇ ಕಾರಣಕ್ಕೂ ರಸ್ತೆಗಿಳಿದು ಪ್ರತಿಭಟಿಸಬೇಡಿ. ನಿಮ್ಮ ಸಮಸ್ಯೆ ಪರಿಹರಿಸುವ ಸಲುವಾಗಿ ಬಂದಿದ್ದೇವೆ. ಶೀಘ್ರವೇ ಸೇತುವೆ ಮಾಡಿಕೊಡುವುದು ನನ್ನ ಜವಾಬ್ಧಾರಿ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಜಿಲ್ಲಾ ಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಪ್ರಧಾನ ಕಾರ್ಯ ದರ್ಶಿ ಚಿನ್ನಸಮುದ್ರ ಶೇಖರ ನಾಯ್ಕ, ಮಲ್ಲಶೆಟ್ಟಿ ಹಳ್ಳಿ ಹನುಮೇಶ, ಎಂ.ಜಿ.ನಾಗರಾಜಪ್ಪ, ಕೆ.ಸಿ. ಕಲ್ಲೇಶಪ್ಪ, ಕೆ.ಎಸ್.ಕಲ್ಲೇಶಪ್ಪ, ಮರುಳಸಿದ್ದಪ್ಪ, ಮುಪ್ಪಿನಪ್ಪ, ಮಂಜಪ್ಪ, ಶಿವಕುಮಾರ, ಹೆಚ್.ಮಂಜುನಾಥ, ಸೇವ್ಯಾನಾಯ್ಕ, ಅಜ್ಜಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!