ರಸ್ತೆಗಿಳಿದು ಮಾಸ್ಕ್ ನೀಡಿ ಜಾಗೃತಿ, ದಂಡ ವಿಧಿಸಿ ಎಚ್ಚರಿಕೆ
ದಾವಣಗೆರೆ, ಅ.9- ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆಗಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿ, ದಂಡ ವಿಧಿಸಿದರೂ ಸಹ ಜಾಗೃತರಾಗದೇ, ಮಾಸ್ಕ್ ಧರಿಸದೇ ಅಪಾಯದ ಹೆಜ್ಜೆ ಹಾಕುತ್ತಿದ್ದ ಸಾರ್ವಜನಿಕರಿಗೆ ನಗರದಲ್ಲಿಂದು ಸಂಜೆ ಸ್ವತಃ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ಇಬ್ಬರೂ ಜಂಟಿಯಾಗಿ ರಸ್ತೆಗಿಳಿದು ಚುರುಕು ಮುಟ್ಟಿಸಿದರು.
ಕೋವಿಡ್ 19 ಸೋಂಕು ತಡೆಗಟ್ಟಲು ಮಾಸ್ಕ್ ಇಲ್ಲದೆ ನಗರ ಪ್ರದೇಶದಲ್ಲಿ ಸಂಚರಿಸುವವರಿಗೆ 1 ಸಾವಿರದಿಂದ 250 ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಬಳಸದಿದ್ದರೆ 500 ರಿಂದ 100 ರೂ. ದಂಡ ವಸೂಲಾತಿಗೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಾಸ್ಕ್ ಅಭಿಯಾನ ಇಂದಿನಿಂದ ಪ್ರಾರಂಭವಾಗಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ನಗರದ ವಿವಿಧೆಡೆ ಸ್ವತಃ ಡಿಸಿ-ಎಸ್ಪಿ ಇಬ್ಬರೂ ಸಹ ಮಾಸ್ಕ್ ಜಾಗೃತಿ ಅಭಿಯಾನ ನಡೆಸಿದರು.
ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಸುತ್ತಾಡುತ್ತಿದ್ದ ಸೈಕಲ್ ಸವಾರರು ಮತ್ತು ವಾಹನ ಸವಾರರಿಗೆ ಹಾಗೂ ಮಾಸ್ಕ್ ಧರಿಸದೇ ವ್ಯಾಪಾರ-ವಹಿವಾಟು ಮಾಡುತ್ತಿದ್ದ ಅಂಗಡಿಯವರಿಗೂ ತರಾಟೆಗೆ ತೆಗೆದುಕೊಂಡರು. ಮಾಸ್ಕ್ ವಿತರಿಸಿ ಕೋವಿಡ್ ಮತ್ತು ಅದರಿಂದ ಪಾರಾಗಲು ಮುಂಜಾಗ್ರತೆಯಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಿದರಲ್ಲದೇ, ದಂಡ ವಿಧಿಸಿ ಬಿಸಿ ಮುಟ್ಟಿಸುವ ಮುಖೇನ ಪುನಃ ಮಾಸ್ಕ್ ಧರಿಸದೇ ಸಾರ್ವಜನಿಕವಾಗಿ ಓಡಾಡುವುದು, ವ್ಯಾಪಾರ ನಡೆಸದಂತೆ ಮುನ್ನೆಚ್ಚರಿಕೆ ನೀಡಿದರು.
ಹೊರಗಡೆ ಬಂದರೆ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹು ಮುಖ್ಯ. ಸ್ಯಾನಿಟೈಜರ್ನಿಂದ ಕೈ ತೊಳೆದುಕೊಳ್ಳುವುದು. ಈ ತತ್ವಗಳನ್ನು ಅನುಸರಿಸಿದರೆ ಕೊರೊನಾ ನಿಯಂತ್ರಿಸಬಹುದು. ನಾಗರಿಕರು ಅನುಸರಿಸಬೇಕು.
– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ.
ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ದೈನಂದಿನ ಜೀವನ ಶೈಲಿಯಾಗಿ ರೂಢಿಸಿಕೊಳ್ಳಬೇಕು. ಜನರೇ ತಮ್ಮ ಮನ ಪರಿವರ್ತನೆ ಮಾಡಿಕೊಳ್ಳಬೇಕು. ಸರ್ಕಾರದ ಸೂಚನೆಗಳನ್ನು ಗಂಭೀರವಾಗಿ ಪಾಲಿಸಬೇಕು. ಮನೆಯಿಂದ ಹೊರಗಡೆ ಬಂದರೆ ಮಾಸ್ಕ್ ಮತ್ತು ಅಂತರ ಕಾಯ್ದೆಕೊಳ್ಳಬೇಕು.
– ಹನುಮಂತರಾಯ, ಎಸ್ಪಿ.
ಅರಳಿಮರ ವೃತ್ತದಿಂದ ಅಭಿಯಾನಕ್ಕೆ ಚಾಲನೆ ನೀಡಿದ ಡಿಸಿ-ಎಸ್ಪಿ ಆಗಲೇ ಸುಮಾರು 20ಕ್ಕೂ ಹೆಚ್ಚು ಜನರಿಗೆ ಮಾಸ್ಕ್ ವಿತರಿಸಿ ದಂಡ ವಿಧಿಸಿದರು. ವಿದ್ಯಾನಗರ ಮುಖ್ಯ ರಸ್ತೆ, ಮಾಮಾಸ್ ಜಾಯಿಂಟ್ ರಸ್ತೆ, ಡೆಂಟಲ್ ಕಾಲೇಜ್ ರಸ್ತೆ, ಎಂಸಿಸಿ ಬಿ ಬ್ಲಾಕ್, ಕೃಷ್ಣಯ್ಯ ಶ್ರೇಷ್ಟಿ ಪಾರ್ಕ್ ಹಾಗೂ ಪ್ರಮುಖ ಹೋಟೆಲ್, ಜೀಮ್, ಬಟ್ಟೆ ಅಂಗಡಿ ಸೇರಿದಂತೆ ನಗರದ ಕೆಲವೆಡೆ ಸಂಚರಿಸಿ ಮಾಸ್ಕ್ ನೀಡಿ, ಮಾಸ್ಕ್ ಧರಿಸದ ತಪ್ಪಿಗೆ ತಲಾ 250 ದಂಡ ವಸೂಲಿ ಮಾಡಿದರು. ಒಟ್ಟು 350 ಮಂದಿಗೆ ಮಾಸ್ಕ್ ನೀಡಿ ದಂಡ ವಸೂಲಿ ಮಾಡಲಾಯಿತು.
ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕೋವಿಡ್-19 ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಇತ್ತೀಚಿಗೆ ಸರ್ಕಾರದ ಆದೇಶದಂತೆ ಮಾಸ್ಕ್ ಬಳಸದಿದ್ದರೆ ನಗರ ಪ್ರದೇಶದಲ್ಲಿ 1 ಸಾವಿರದಿಂದ 250 ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ರಿಂದ 100 ರೂ. ದಂಡ ವಿಧಿಸಲು ಕ್ರಮ ಕೈಗೊಳ್ಳುವ ಆದೇಶವಿದೆ. ಅದರಂತೆ ಒಟ್ಟು ಮಾರ್ಚ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ನಗರದಲ್ಲಿ 84 ಲಕ್ಷ ದಂಡ ವಸೂಲಿಯಾಗಿದೆ. ಪ್ರತಿ ವಾರ 4ರಿಂದ 5 ಲಕ್ಷ ರೂ. ದಂಡ ಸಂಗ್ರಹವಾಗುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕರು ಪ್ರಸ್ತುತ ದಿನಗಳಲ್ಲಿ ಕೋವಿಡ್ ಸೋಂಕಿನ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದು, ಎಷ್ಟು ತಿಳಿವಳಿಕೆ ನೀಡಿದರೂ ಜನರು ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹಳೆ ದಾವಣಗೆರೆ, ರಾಂ ಅಂಡ್ ಕೋ ವೃತ್ತ ಸೇರಿದಂತೆ ಹಲವು ನಗರಗಳಲ್ಲಿ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದಾರೆ. ಕೆಲವರು ಮಾಸ್ಕನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಇನ್ನೂ ಕೆಲವರು ಅಂಗಡಿಯಲ್ಲಿದ್ದರೆ ಮಾಸ್ಕ್ ಧರಿಸುವುದೇ ಇಲ್ಲ. ಪ್ರತಿ ವಾರಕ್ಕೊಮ್ಮೆ ಪಾಲಿಕೆ ಆಯುಕ್ತರ ಸಹಿತ ನಗರದಲ್ಲಿ ಎಸ್ಪಿ ಮತ್ತು ನಾನು ಜಂಟಿಯಾಗಿ ಮಾಸ್ಕ್ ಅಭಿಯಾನ ಮಾಡುತ್ತೇವೆ. ಹಾಗೆಯೇ ಗ್ರಾಮೀಣ ಪ್ರದೇಶದಲ್ಲೂ ನಡೆಸುತ್ತೇವೆಂದರು.
ಜಾಗೃತಿ ಅಭಿಯಾನದಲ್ಲಿ ನಗರ ಡಿವೈಎಸ್‍ಪಿ ನಾಗೇಶ್ ಐತಾಳ್, ಪೊಲೀಸ್ ನಿರೀಕ್ಷಕರುಗಳಾದ ಗಜೇಂದ್ರಪ್ಪ, ಗುರುಬಸವರಾಜ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.