ಮಲೇಬೆನ್ನೂರು, ಜು.5- ಹೆಮ್ಮಾರಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಮಲೇಬೆನ್ನೂರು ಪಟ್ಟಣದಲ್ಲಿ ಸಂಡೇ ಲಾಕ್‌ಡೌನ್ ಯಶಸ್ವಿಯಾಯಿತು.
ಆಸ್ಪತ್ರೆ, ಮೆಡಿಕಲ್ ಷಾಪ್ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬೆಳಿಗ್ಗೆ ಮುಖ್ಯ ವೃತ್ತದಲ್ಲಿ ಜನರು ಅನಗತ್ಯವಾಗಿ ರಸ್ತೆಗೆ ಬಂದ ಕಾರಣ, ಪೊಲೀಸರು ಅವರನ್ನು ಚದುರಿಸಿದರು. ನಂತರ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು.
ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಅವರು ಪಟ್ಟಣದಲ್ಲಿ ಸಂಚರಿಸಿ, ಸಂಡೇ ಕರ್ಫ್ಯೂ ಯಶಸ್ವಿಯಾಗುವಂತೆ ನೋಡಿಕೊಂಡರು. ಹೆದ್ದಾರಿಯಲ್ಲಿ ಖಾಸಗಿ ವಾಹನಗಳ ಓಡಾಟ ವಿರಳವಾಗಿತ್ತು. ಯಾವುದೇ ಬಸ್ ಸಂಚಾರ ಇರಲಿಲ್ಲ. ಹಳ್ಳಿಗಳಲ್ಲಿ ಲಾಕ್‌ಡೌನ್ ಕಂಡು ಬರಲಿಲ್ಲ.