ಮಲೇಬೆನ್ನೂರು, ಅ.8- ವಾಲ್ಮೀಕಿ ಜಯಂತಿಯ ಒಳಗಾಗಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ. 7.5 ಕ್ಕೆ ಹೆಚ್ಚಿಸು ವಂತೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೀಸಲಾತಿ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ನಾಳೆ ದಿನಾಂಕ 9 ರಿಂದ ರಾಜ್ಯ ಪ್ರವಾಸ ಕೈಗೊಂಡಿರುವ ಹಿನ್ನೆಲೆ ಮತ್ತು ವಾಲ್ಮೀಕಿ ಜಯಂತಿಯ ಅಂಗವಾಗಿ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಇಂದು ಏರ್ಪಾಡಾಗಿದ್ದ ಹರಿಹರ ತಾಲ್ಲೂಕಿನ ಪೂರ್ವ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿ 2 ತಿಂಗಳಾಗಿವೆ. ಈ ಕುರಿತು ನಾವು ಎರಡು ಸಲ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ.
ನಾವು ಭೇಟಿ ಮಾಡಿದ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೀಸಲಾತಿ ಹೆಚ್ಚಿಸುವ ಭರವಸೆ ನೀಡಿದ್ದಾರೆಯೇ ಹೊರತು, ಸಂಪುಟ ಸಭೆಗೆ ತರುತ್ತಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ವಾಲ್ಮೀಕಿ ಜಾತ್ರೆಯಲ್ಲಿ ಕೊಟ್ಟ ಮಾತಿನಂತೆ ಎಸ್ಟಿ ಪ್ರತ್ಯೇಕ ಸಚಿವಾಲಯವನ್ನೂ ರಚನೆ ಮಾಡಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಘೋಷಿಸಿದಂತೆ ವಾಲ್ಮೀಕಿ ಸಮಾಜದವರಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡದಿರುವುದು ಬೇಸರ ತಂದಿದೆ.
ಒಂದು ಸಮಾಜವನ್ನು ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅಕ್ಟೋಬರ್ 31 ರಂದು ವಾಲ್ಮೀಕಿ ಅವರ ಜಯಂತಿ ಇದ್ದು, ಅಷ್ಟರೊಳಗೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸುವ ಕುರಿತು ತೀರ್ಮಾನ ಪ್ರಕಟಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಸ್ವಾಮೀಜಿ ಸರ್ಕಾರವನ್ನು ಎಚ್ಚರಿಸಿದರು.
ನಾಳೆ ದಿನಾಂಕ 9 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಇದೇ ದಿನಾಂಕ 21 ರಿಂದ ಬೆಂಗಳೂರಿನಲ್ಲಿ ಧರಣಿ ನಡೆಸುವ ಚಿಂತನೆ ಹೊಂದಿದ್ದು, ಶೀಘ್ರ ನಿರ್ಧಾರ ಪ್ರಕಟಿ ಸುತ್ತೇವೆ. ಸರ್ಕಾರ ವಾಲ್ಮೀಕಿ ಜಯಂತಿಯ ಒಳಗಾಗಿ ಮೀಸಲಾತಿ ಹೆಚ್ಚಿಸಿದರೆ ನಿಮ್ಮ ಗ್ರಾಮ ಗಳಲ್ಲಿ, ತಾಲ್ಲೂಕುಗಳಲ್ಲಿ ವಾಲ್ಮೀಕಿ ಜಯಂತಿ ಆಚರಿಸಿ, ಮೀಸಲಾತಿ ಹೆಚ್ಚಿಸದಿದ್ದರೆ ಅಕ್ಟೋಬರ್ 31 ರಂದು ಬೆಂಗಳೂರು ಚಲೋಗೆ ಬನ್ನಿ ಎಂದು ಸ್ವಾಮೀಜಿ ವಾಲ್ಮೀಕಿ ಸಮಾಜಕ್ಕೆ ಕರೆ ಕೊಟ್ಟರು.
ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ ತಾಲ್ಲೂಕು ಸಮಾಜದ ಅಧ್ಯಕ್ಷ ಕೆ.ಆರ್. ರಂಗಪ್ಪ, ಕೆ.ಬಿ. ಮಂಜುನಾಥ್, ಜಿಗಳಿಯ ಜಿ. ಆನಂದಪ್ಪ, ಕೊಕ್ಕನೂರಿನ ಕೆ.ಹೆಚ್. ಕೊಟ್ರಪ್ಪ, ಡಿ. ಸೋಮಶೇಖರ್ ವಾಸನ ಮಹಾಂತೇಶ್, ನಗರಸಭೆ ಸದಸ್ಯರಾದ ದಿನೇಶ್ಬಾಬು, ಮಾರುತಿ ಬೇಡರ್, ಪಾರ್ವತಿ, ಮೆಣಸಿನಹಾಳ್ ಬಸವರಾಜ್, ರಾಜನಹಳ್ಳಿ ಭೀಮಣ್ಣ, ಮಕರಿ ಪಾಲಾಕ್ಷಪ್ಪ, ಪಾಳೇಗಾರ್ ನಾಗರಾಜ್, ಬಿ.ಜಿ. ಶಿವಮೂರ್ತಿ, ಕೆ. ಬೇವಿನಹಳ್ಳಿಯ ಹಾಲೇಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.