ಮತ್ತೆ ಬೀದಿಯಲ್ಲಿ ಹೆಚ್ಚಾದ ಬಿಡಾಡಿ ದನ, ಹಂದಿ-ನಾಯಿಗಳ ಉಪಟಳ

  • ಕಣ್ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು
  • ಸ್ಮಾರ್ಟ್ ಸಿಟಿ ಹೆಸರಿಗೆ ಕಪ್ಪುಚುಕ್ಕೆ

ದಾವಣಗೆರೆ, ಅ.5- ಕೊರೊನಾ ಕಾರಣದಿಂದಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ ತೆರವುಗೊಂಡು ಜನ ಸಂಚಾರ ಹೆಚ್ಚುತ್ತಿರುವ ಜೊತೆಗೆ ನಗರದಲ್ಲಿ ಬಿಡಾಡಿ ದನ, ಹಂದಿ, ನಾಯಿಗಳ ಹಾವಳಿಯೂ ಹೆಚ್ಚಾಗುತ್ತಿದೆ.

ನಗರದ ಮಧ್ಯಭಾಗದ ಪಿ.ಬಿ.ರಸ್ತೆ, ಗಡಿಯಾರ ಕಂಬ, ಹದಡಿ ರಸ್ತೆ ಮುಂತಾದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಎಲ್ಲೆಂದರಲ್ಲಿ ಓಡಾಡುವ ಈ ದನ–ಕರುಗಳು ಸಿಕ್ಕಿದ್ದನ್ನು ತಿನ್ನುತ್ತವೆ. ಕಸದೊಂದಿಗೆ ಪ್ಲಾಸ್ಟಿಕ್‌ ಕೂಡ ಅವುಗಳ ಹೊಟ್ಟೆ ಸೇರುತ್ತಿದೆ. ಇದು ಅವುಗಳ ಪ್ರಾಣಕ್ಕೂ ಕುತ್ತು ತರುತ್ತಿದೆ. ವಾಹನಗಳು  ಡಿಕ್ಕಿಯಾಗುವುದರಿಂದಲೂ ಜೀವಕ್ಕೆ ಕಂಟಕವಿದೆ. ಸವಾರರು ಕೂಡ ಗಾಯಗೊಂಡ ಉದಾಹರಣೆಗಳಿವೆ. ರಸ್ತೆಗಳ ಮಧ್ಯೆ ‘ಕೃತಕ ಸ್ಪೀಡ್‌ ಬ್ರೇಕರ್‌’ಗಳ ರೀತಿಯಲ್ಲಿರುವ ಅವು ಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ಇಷ್ಟಾದರೂ ಸಂಬಂಧಿಸಿದ ನಗರ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಡಾಡಿ ದನಗಳಿಂದ ನಮಗೆ ಮುಕ್ತಿ ಸಿಗುವುದು ಯಾವಾಗ ಎನ್ನುವುದು ಜನರ ಪ್ರಶ್ನೆಯಾಗಿದೆ.  ನಗರದಲ್ಲಿ ಹಲವು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಅಧಿಕಾರಿಗಳ ‘ತಾತ್ಕಾಲಿಕ ಸ್ಪಂದನೆ’ಯಿಂದ ‘ಫಲ’ ಸಿಕ್ಕಿಲ್ಲ. ಆಗಾಗ ‘ಶಾಸ್ತ್ರಕ್ಕೆಂಬಂತೆ’ ಕೆಲವು ಬಿಡಾಡಿ ದನಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆಯನ್ನು ಮಹಾನಗರಪಾಲಿಕೆ ಅಧಿಕಾರಿಗಳು ನಡೆಸಿ ಬಳಿಕ ಸುಮ್ಮನಾಗುತ್ತಾರೆ. ಪರಿಣಾಮ, ರಸ್ತೆಗಳ ಅಲ್ಲಲ್ಲಿ ಬಿಡಾಡಿ ದನ, ಕರುಗಳ ‘ಬಿಡಾರ’ ಕಂಡುಬರುತ್ತಿದೆ. ಈ ದೃಶ್ಯಗಳು ಸ್ಮಾರ್ಟ್‌ ಸಿಟಿಗೆ ‘ಕಪ್ಪು ಚುಕ್ಕೆ’ಯಂತಾಗಿವೆ.

ಈ ಮೊದಲೇ ಹಲವು ಬಾರಿ ಸ್ಥಳೀಯರು ಹಾಗೂ ಸಂಘ-ಸಂಸ್ಥೆಗಳು  ಬಿಡಾಡಿ ದನಗಳಿಂದ ಮುಕ್ತಿ ಒದಗಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಈ ರೀತಿಯ ತೀರ ಒತ್ತಡ ಬಂದಾಗ ಒಮ್ಮೆ ನಾಲ್ಕಾರು ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಿ ಕಣ್ಣೊರೆಸುವ ತಂತ್ರ ಮಾಡುತ್ತಾರೆ. ಆದರೆ ಸಂಪೂರ್ಣವಾಗಿ ಸಮಸ್ಯೆಗೆ ಮುಕ್ತಿ ಹಾಡಲು ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

error: Content is protected !!