ಕೊರೊನಾ : ವಿಶ್ವದಲ್ಲೇ 3ನೇ ಸ್ಥಾನಕ್ಕೆ ಬಂದ ಭಾರತ

ನವದೆಹಲಿ, ಜು. 5 – ಕೊರೊನಾ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಈಗ ಮೂರನೇ ಸ್ಥಾನಕ್ಕೆ ಬಂದಿದೆ. ದೇಶದಲ್ಲೀಗ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6.9 ಲಕ್ಷವಾಗಿದೆ.

ಇದುವರೆಗೂ ಮೂರನೇ ಸ್ಥಾನದಲ್ಲಿದ್ದ ರಷ್ಯಾದಲ್ಲಿ 6.8 ಲಕ್ಷ ಕೊರೊನಾ ಪ್ರಕರಣಗಳಿವೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 15.7 ಲಕ್ಷ ಹಾಗೂ ಅಮೆರಿಕದಲ್ಲಿ ಸುಮಾರು 30 ಲಕ್ಷ ಕೊರೊನಾ ಪ್ರಕರಣಗಳಿವೆ.

ಭಾನುವಾರ ಒಂದೇ ದಿನ ದೇಶದಲ್ಲಿ 24,850 ಸೋಂಕಿತರು ಕಂಡು ಬಂದಿದ್ದಾರೆ. ಒಟ್ಟು ಸೋಂಕುಗಳ ಸಂಖ್ಯೆ 6.9 ಲಕ್ಷವಾಗಿದೆಯಾದರೂ, ಸಕ್ರಿಯ ಸೋಂಕುಗಳ ಸಂಖ್ಯೆ 2.44 ಲಕ್ಷವಾಗಿದೆ. ಶೇ.60ಕ್ಕೂ ಹೆಚ್ಚು ಜನರು ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಸರಾಸರಿ ಸೋಂಕು ಕಡಿಮೆ : ಭಾರತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ದೇಶದಲ್ಲಿ 130 ಕೋಟಿ ಜನರಿರುವುದನ್ನು ಪರಿಗಣಿಸಿದಾಗ ಒಟ್ಟು ಸೋಂಕುಗಳ ಸಂಖ್ಯೆ ಕಡಿಮೆಯೇ ಆಗುತ್ತದೆ.

 ಅಮೆರಿಕದಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಸುಮಾರು 9 ಸಾವಿರ ಸೋಂಕಿತರಿದ್ದಾರೆ. ಭಾರತದಲ್ಲಿ ಹತ್ತು ಲಕ್ಷ ಜನರಿಗೆ ಕೇವಲ 505 ಸೋಂಕಿತರಿದ್ದಾರೆ. ರಷ್ಯಾದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 4,668 ಸೋಂಕಿತರಿದ್ದಾರೆ.

ಸಾವುಗಳೂ ಕಡಿಮೆ : ಪ್ರತಿ ಹತ್ತು ದಶಲಕ್ಷ ಜನಸಂಖ್ಯೆಗೆ ಹೋಲಿಸಿದಾಗ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಅಮೆರಿಕದಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ ಕೊರೊನಾ ಕಾರಣದಿಂದ 400 ಜನ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ 14 ಆಗಿದೆ.

error: Content is protected !!