ವೀಕೆಂಡ್ ಜೊತೆ ಲಾಕ್‌ಡೌನ್: ಮನೆ ಬಿಟ್ಟು ಹೊರ ಬರಲಿಲ್ಲ ಜನ
ದಾವಣಗೆರೆ, ಜು. 5- ಸರ್ಕಾರದ ಲಾಕ್‌ಡೌನ್ ಆದೇಶ ಪಾಲಿಸಲು ಭಾನುವಾರದ ರಜೆ ಹಾಗೂ ಮೋಡ ಕವಿದ ವಾತಾವರಣ ಜನತೆಗೆ ಮತ್ತಷ್ಟು ಪುಷ್ಠಿ ನೀಡಿದವು. ಈ ಹಿನ್ನೆಲೆಯಲ್ಲಿ ದೇವನಗರಿ ಮತ್ತೊಮ್ಮೆ ಪೂರ್ಣ ಸ್ತಬ್ಧವಾಗಿತ್ತು.
ಬೆಳಿಗ್ಗೆ 10 ಗಂಟೆಯವರೆಗೂ ಮಾರುಕಟ್ಟೆ ಪ್ರದೇಶದಲ್ಲಿ ತರಕಾರಿ, ಹಣ್ಣು, ಹೂ ಕೊಡು-ಕೊಳ್ಳುವಿಕೆ ನಡೆದಿತ್ತಾದರೂ, ಜನರ ಸಂಖ್ಯೆ ಎಂದಿಗಿಂತ ವಿರಳವಾಗಿತ್ತು. ವಾಹನಗಳೂ ಸಹ ಬೆಳಿಗ್ಗೆ ಎಂದಿನಂತೆ ಓಡಾಡಿದವು.
ಆದರೆ 10 ಗಂಟೆಯ ನಂತರ ನಗರ ನಿಧಾನವಾಗಿ ಸ್ತಬ್ಧವಾಗ ತೊಡಗಿತು. ಔಷಧಿ ಅಂಗಡಿ, ಹಣ್ಣು, ತರಕಾರಿ, ಕಿರಾಣಿ ಅಂಗಡಿಗಳು, ಪೆಟ್ರೋಲ್ ಬಂಕ್‌ಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ವಾಣಿಜ್ಯ ವ್ಯವಹಾರ ಸ್ಥಗಿತವಾಗಿದ್ದವು. ಮಧ್ಯಾಹ್ನದ ವೇಳೆಗಾಗಲೇ ನಗರ ಬಿಕೋ ಎನ್ನುತ್ತಿತ್ತು.
ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ಕೆಲ ದ್ವಿಚಕ್ರವಾಹನಗಳನ್ನು ಹೊರತುಪಡಿಸಿದರೆ ಆಟೋ ಅಥವಾ ಮತ್ತಾವುದೇ ವಾಹನಗಳು ಸುಳಿಯಲಿಲ್ಲ. ಲಾಕ್‌ಡೌನ್ ವಿಷಯ ತಿಳಿದಿದ್ದರಿಂದ ಹಳ್ಳಿಗರೂ ಸಹ ನಗರದತ್ತ ಸುಳಿಯಲಿಲ್ಲ.
ಭಾನುವಾರವೂ ಸಹ ಆಗಿದ್ದುದರಿಂದ ಜನ ಲಾಕ್‌ಡೌನ್ ನೆಪದಲ್ಲಿಯೇ ಶ್ರೀಮಂತ ವರ್ಗ ವೀಕೆಂಡ್ ಖುಷಿ ಅನುಭವಿಸಿತು. ಕೆಲ ಪ್ರತಿಷ್ಠಿತ ಬಡಾವಣೆಗಳಲ್ಲಿ ಜನರು ಹೊರಗೆ ಬರಲಿಲ್ಲ. ಆದರೆ ಬಡ ವರ್ಗ ಹಾಗೂ ಮಧ್ಯಮ ವರ್ಗ ಹೆಚ್ಚಾಗಿದ್ದ ನಿಟುವಳ್ಳಿ, ಕೆಟಿಜೆ ನಗರ, ಜಾಲಿ ನಗರ, ಕೆ.ಬಿ. ಬಡಾವಣೆ ಮತ್ತಿತರೆ ಕಡೆ ಜನರು ಎಂದಿನಂತೆಯೇ ಹೊರಗಡೆ ಓಡಾಡುತ್ತಿದ್ದುದು ಕಂಡು ಬಂತು.
ಯಾಕ್ ಬಂದ್ರೀ ಹೊರಗೆ ? ಭಾನುವಾರ ಲಾಕ್‌ಡೌನ್ ಇದ್ದರೂ ಹೊರ ಬಂದ ವಾಹನ ಸವಾರರನ್ನು ದಾವಣಗೆರೆ ನಗರದಲ್ಲಿ ಪೊಲೀಸರು ಪ್ರಶ್ನಿಸುತ್ತಿರುವುದು.
ಪೆಟ್ರೋಲ್ ಬಂಕ್ ತಮ್ಮ ಸೇವೆಯನ್ನು ಎಂದಿನಂತೆಯೇ ಮುಂದುವರೆಸಿದ್ದವಾದರೂ, ಗ್ರಾಹಕರ ಸಂಖ್ಯೆ ಅತಿ ವಿರಳವಾಗಿತ್ತು. ಈ ಹಿನ್ನೆಲೆಯಲ್ಲಿ ಬಂಕ್ ನಲ್ಲಿ ನಾಲ್ಕು ಕಡೆ ಪೆಟ್ರೋಲ್ ವಿತರಿಸುವ ಬದಲು ಒಂದು ಕಡೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಬೀದಿಗಿಳಿದ ಪೊಲೀಸರು: ಬೆಳಿಗ್ಗೆ ವಾಹನಗಳ ಸಂಚಾರಕ್ಕೆ ಅಡೆ-ತಡೆ ಮಾಡದ ಪೊಲೀಸರು 10 ಗಂಟೆಯ ನಂತರ ನಿಧಾನವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಗಿಳಿದರು. ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಪ್ರಶ್ನಿಸಿ, ಎಚ್ಚರಿಕೆ ನೀಡುತ್ತಿದ್ದುದು ಕಂಡು ಬಂತು.
ಆದರೆ ಸಂಜೆಯಾಗುತ್ತಲೇ ಪೊಲೀಸರೂ ಸಹ ಸುಮ್ಮನಾದರು. ಇದರಿಂದಾಗಿ ದ್ವಿಚಕ್ರವಾಹನಗಳ ಅನಗತ್ಯ ಓಡಾಟ ಮತ್ತೆ ಹೆಚ್ಚಾಯಿತು. ಪೊಲೀಸ್ ಜೀಪುಗಳಲ್ಲಿ ಮಾತ್ರ ಧ್ವನಿವರ್ಧಕದ ಸಹಾಯದಿಂದ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಲಾಗುತ್ತಿತ್ತು. ಒಟ್ಟಿನಲ್ಲಿ ಮೋಡ ಕವಿದ ವಾತಾವರಣ, ವೀಕೆಂಡ್, ಲಾಕ್‌ಡೌನ್, ಕೊರೊನಾ ಭಯ ಎಲ್ಲವು ಒಟ್ಟಾಗಿ ಭಾನುವಾರ ನಗರ ಬಿಕೋ ಎನ್ನುತ್ತಿತ್ತು.