ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ “ದಾವಣಗೆರೆ ದೊಡ್ಡಕ್ಕ” ಎಂದೇ ಖ್ಯಾತನಾಮರಾಗಿದ್ದ ಟಿ. ಗಿರಿಜಾ ಅವರು ನಿಧನರಾಗಿ ಇದೇ ಜುಲೈ 3 ಕ್ಕೆ ಆರು ವರ್ಷಗಳು ಸಂದವು (03-07-2014). ದಿವಂಗತ ಟಿ. ಗಿರಿಜಾರವರು ದಾವಣಗೆರೆ ಚಿತ್ರದುರ್ಗ ಅವಳಿ ಜಿಲ್ಲೆಗಳಷ್ಟೇ ಅಲ್ಲದೆ ನಾಡಿನಾದ್ಯಂತ ಖ್ಯಾತನಾಮರಾಗಿದ್ದರು. ವೃತ್ತಿ ಅರೋಗ್ಯ ಇಲಾಖೆಯಾದರು ಪ್ರವೃತ್ತಿ ಸಾಹಿತ್ಯ ಕಲೆ ಸಂಶೋಧನಾ ಕ್ಷೇತ್ರವನ್ನಾಗಿಸಿಕೊಂಡಿದ್ದ ಗಿರಿಜಾ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
1975 ರಲ್ಲಿ “ಮಹಿಳೆ ಮತ್ತು ದಾದಿ ವೃತ್ತಿ” ಎಂಬ ವೈಚಾರಿಕ ಕೃತಿಯ ಮೂಲಕ ಬರವಣಿಗೆಗೆ ತೊಡಗಿಸಿಕೊಂಡ ಗಿರಿಜಮ್ಮನವರು ತಮ್ಮ ಅಂತಿಮ ದಿನಗಳವರೆಗೂ ಅನಾರೋಗ್ಯವನ್ನು ಮೆಟ್ಟಿ ನಿಂತು ಸದಾ ಬರವಣಿಗೆ ಮತ್ತು ಚಿಂತನೆಯಲ್ಲಿ ಕಾರ್ಯ ತತ್ಪರರಾಗಿದ್ದರು. ಭಿಕ್ಷಿಕಿ, ಬೆಳ್ಳಕ್ಕಿಗಳು, ದೇವರ ಬಸವಿ, ಮುದಿಯಜ್ಜ, ಮುಂತಾದ ಹದಿಮೂರು ಸಾಮಾಜಿಕ ಕಾದಂಬರಿಗಳನ್ನು ಬರೆದ ಇವರು ತಮ್ಮ ಒಲವನ್ನು ಐತಿಹಾಸಿಕ ಕಾದಂಬರಿಗಳತ್ತ ಹೊರಳಿಸಿದರು. ದುರ್ಗೋತ್ಸವ, ದುರ್ಗದ ನಾಗತಿಯರು, ಗಂಡೋಬಳವ್ವ ನಾಗತಿ ಹೀಗೆ 4 ಚಾರಿತ್ರಿಕ ಕಾದಂಬರಿಗಳನ್ನು ರಚಿಸಿ ದುರ್ಗದ ಪ್ರಧಾನ ಚಾರಿತ್ರಿಕ ಕಾದಂಬರಿಕಾರರಾದ ತರಾಸು, ಬಿ ಎಲ್ ವೇಣು ನಂತರದಲ್ಲಿ ಗಿರಿಜಾ ಅವರು ತಮ್ಮದೇ ಆದ ಛಾಪು ಮೂಡಿಸಿದರು. ಇಷ್ಟಲ್ಲದೆ ಎರಡು ಜೀವನ ಚರಿತ್ರೆ, ಎರಡು ಆತ್ಮ ಕಥನ, ಎರಡು ಸ್ಥಳ ಪುರಾಣ ಕೃತಿಗಳೊಂದಿಗೆ ಐದು ಸಂಪಾದನಾ ಕೃತಿಗಳನ್ನು ಪ್ರಕಟಿಸಿದ್ದಲ್ಲದೆ ಸುಮಾರು 1500 ಕ್ಕೂ ಹೆಚ್ಚು ಬಿಡಿ ಬಿಡಿ ಲೇಖನಗಳನ್ನು ಬರೆದಿದ್ದಾರೆ.
ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಸಮಾಜೋ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿ ಕೊಡುವ ಚಿತ್ರದುರ್ಗ ಜಿಲ್ಲಾ ದರ್ಶಿನಿ ಹಾಗೂ ದಾವಣಗೆರೆ ಇದು ನಮ್ಮ ಜಿಲ್ಲೆ ಇವುಗಳೊಂದಿಗೆ ಭಾರತ ನದಿಗಳು- ಈ ಮೂರು ಬೃಹತ್ ಮಾಹಿತಿ ಕೋಶಗಳು ಗಿರಿಜಾ ಅವರನ್ನು ಎತ್ತರೆತ್ತರಕ್ಕೆ ಕೊಂಡೊಯ್ದ ಕೃತಿಗಳಾಗಿವೆ.
ನಮ್ಮ ದೇಶಿ ಪರಿಸರದಲ್ಲಿ ಬರುವ ಗ್ರಾಮಗಳು ನಾಡಿನ ಸಾಂಸ್ಕೃತಿಕ ಕಣಜಗಳು. ಅಲ್ಲಿನ ಜೀವ ಸಂಕುಲ ಪ್ರಾಕೃತಿಕ ಬದುಕಿನ ಜೀವ ದ್ರವ್ಯಗಳು ಭಾಷಾ ಬಳಕೆ ಮತ್ತು ಅಭಿವೃದ್ಧಿಯ ರೂಪಗಳು ಮಹತ್ವದ ಸಂಗತಿಗಳಾಗಿರುತ್ತವೆ. ಈ ನಾಡಿನ ಗ್ರಾಮಗಲ್ಲಿ ಇತಿಹಾಸವಿದೆ. ಸಂಪ್ರದಾಯ ಧರ್ಮಗಳಿವೆ. ಮನೆ ಮಠಗಳಿವೆ. ಮೌಲ್ಯ ಮೌಡ್ಯಗಳಿವೆ. ಶಿಕ್ಷಣ ಸಾಮಾಜಿಕ ಚರಿತ್ರೆಗಳಿವೆ. ಈ ಎಲ್ಲಾ ಹಳತು ಹೊಸತುಗಳ ಸಮ್ಮಿಶ್ರಣದಿಂದ ನಮ್ಮ ಗ್ರಾಮಗಳು ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡಿವೆ. ಇವು ಕೇವಲ ಜನ ವಸತಿಗಳಲ್ಲ ಮಾನವ ಪದ ನೆಲೆವೀಡುಗಳು
ಕರ್ನಾಟಕದಲ್ಲಿ ಸುಮಾರು 59 ಸಾವಿರ ಜನ ವಸತಿ ಗ್ರಾಮಗಳಿವೆ, ದಾವಣಗೆರೆ ಜಿಲ್ಲೆಯಲ್ಲಿ ಸು. 1200 ಅಂತೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಸು. 1100 ಗ್ರಾಮಗಳಿವೆ. ಪ್ರತಿ ಗ್ರಾಮವು ತನ್ನದೇ ಆದ ಚಾರಿತ್ರಿಕ ಸಂಗತಿಗಳನ್ನು ಹೊಂದಿರುತ್ತದೆ. ಈ ಹಿನ್ನೆಲೆಯ ಅಧ್ಯಯನಗಳು ಕನ್ನಡದಲ್ಲಿ ತುಂಬಾ ವಿರಳವಾಗಿದ್ದಂತಹ ಹೊತ್ತಿನಲ್ಲಿ `ಚಿತ್ರದುರ್ಗ ಜಿಲ್ಲಾ ದರ್ಶಿನಿ’, ‘ದಾವಣಗೆರೆ ಇದು ನಮ್ಮ ಜಿಲ್ಲೆ’ ಹಾಗೂ `ಭಾರತದ ನದಿಗಳು’ ಈ ಮೂರು ಕೃತಿಗಳು ಮಾಹಿತಿ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯಾಗಿವೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇದೇ ಮಾದರಿಯನ್ನು ಒಂದಷ್ಟು ಪರಿಷ್ಕರಿಸಿಕೊಂಡು ಜಿಲ್ಲಾವಾರು ಕರ್ನಾಟಕ ಸಮಗ್ರ ಗ್ರಾಮಗಳ ಅಧ್ಯಯನಾತ್ಮಕ ಸಮಾಜೋ ಸಾಂಸ್ಕೃತಿಕ ಆರ್ಥಿಕ ಅಭಿವೃದ್ಧಿ ಸಂಗತಿಗಳ ಗ್ರಾಮ ಚರಿತ್ರೆ ಕೋಶ ಯೋಜನೆಗೆ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ಯೋಜನೆಯನ್ನು ರೂಪಿಸಿಕೊಂಡು ಪೂರ್ಣಗೊಳಿಸಲು ಇನ್ನೂ ಹರಸಾಹಸ ಪಡುತ್ತಿರುವ ಸಂದರ್ಭವನ್ನು ಗಮನಿಸಿದಾಗ ಸ್ವ ಆಸಕ್ತಿಯಿಂದ ಟಿ. ಗಿರಿಜಾ ಅವರು ತಮ್ಮ ವಯೋಮಾನ ಹಾಗೂ ದೈಹಿಕ ನ್ಯೂನತೆಗಳ ಸಂಕಷ್ಟಗಳ ನಡುವೆಯೂ ಆಧುನಿಕ ಸಂವಹನ, ಸಾರಿಗೆ ಸೌಲಭ್ಯವಿಲ್ಲದ ಆ ಹೊತ್ತಿನಲ್ಲಿ ಏಕಾಂಗಿಯಾಗಿ ಎರಡು ಜಿಲ್ಲೆಗಳ ಗ್ರಾಮಗಳ ಸಮಗ್ರ ಮಾಹಿತಿಯನ್ನು ಕಟ್ಟಿ ಕೊಟ್ಟಿರುವುದು ಸಾಮಾನ್ಯ ಸಂಗತಿಯಲ್ಲ. ಗಿರಿಜಾ ಅವರ ಸಹೋದರಿ ಟಿ.ಎಸ್. ಶೈಲಜಾ ಅವರು “ದಾವಣಗೆರೆ ಇದು ನಮ್ಮ ಜಿಲ್ಲೆ” ಕೋಶವನ್ನು ಇದೀಗ ಪರಿಷ್ಕರಿಸಿ ಕೆಲವು ನ್ಯೂನತೆಗಳನ್ನು ಸರಿಪಡಿಸಿ ಪ್ರಕಟಿಸಿರುವುದು ಮೆಚ್ಚುವ ವಿಚಾರವಾಗಿದೆ.
ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಸಮಾಜೋ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿ ಕೊಡುವ ಚಿತ್ರದುರ್ಗ ಜಿಲ್ಲಾ ದರ್ಶಿನಿ ಹಾಗೂ ದಾವಣಗೆರೆ ಇದು ನಮ್ಮ ಜಿಲ್ಲೆ ಇವುಗಳೊಂದಿಗೆ ಭಾರತ ನದಿಗಳು- ಈ ಮೂರು ಬೃಹತ್ ಮಾಹಿತಿ ಕೋಶಗಳು ಗಿರಿಜಾ ಅವರನ್ನು ಎತ್ತರೆತ್ತರಕ್ಕೆ ಕೊಂಡೊಯ್ದ ಕೃತಿಗಳಾಗಿವೆ.
ಟಿ. ಗಿರಿಜಾ ಅವರು ಸಾಹಿತಿ ಸಂಶೋಧಕಿ ಆಗಿರುವುದರ ಜೊತೆಜೊತೆಯಲ್ಲೇ ರಂಗ ಕಲಾವಿದೆಯಾಗಿಯೂ ಅನೇಕ ನಾಟಕಗಳಲ್ಲಿ ಅಭಿನಹಿಸಿದ್ದಾರೆ. ದಾವಣಗೆರೆಯ ಪ್ರತಿಮಾ ಸಭಾದ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಟಿ. ಗಿರಿಜಾ ಅವರಿಂದಾಗಿ ಇತರ ಅನೇಕ ಯುವತಿಯರು ಪಾತ್ರ ಮಾಡಲು ಮುಂದೆ ಬರಲು ಕಾರಣ ಕರ್ತರಾದರೆಂದು ಹಿರಿಯ ರಂಗ ತಜ್ಞರಾದ ಡಾ. ಎಂ. ಜಿ. ಈಶ್ವರಪ್ಪನವರು ಆಗಾಗ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಗಿರಿಜಾ ಅವರು ಕುಂಚ ಕಲಾವಿದೆಯಾಗಿದ್ದರೆಂಬುದು ಬಹು ಮಂದಿಗೆ ತಿಳಿಯದು.
ಶ್ರೀಮತಿ ಗಿರಿಜಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ ಮೊದಲ್ಗೊಂಡು ಹತ್ತಾರು ಮೌಲ್ಯಯುಕ್ತ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ 2007 ರಲ್ಲಿ ಹರಪನಹಳ್ಳಿಯಲ್ಲಿ ಜರುಗಿದ ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವದ ಗರಿಯು ಇವರ ಮುಡಿಗೆ ಸೇರಿದೆ.
ಇದೇ ತಿಂಗಳು 9 ರಂದು ದಾವಣಗೆರೆಯ ವನಿತಾ ಸಮಾಜದವತಿಯಿಂದ ಟಿ. ಗಿರಿಜಾ ಅವರ 6ನೇ ಸಂಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಸಂವೇದನಾಶೀಲಸಾಹಿತಿ, ಚಿಂತಕಿ, ಕ್ರಿಯಾಶೀಲ ಇತಿಹಾಸ ಪ್ರಜ್ಞೆಯ ಅದಮ್ಯ ಚೇತನ ಟಿ. ಗಿರಿಜಾ ಅವರಿಗೆ ಭಾವಪೂರ್ಣ ನುಡಿನಮನಗಳು.
ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ
ದಾವಣಗೆರೆ.
[email protected]