ಪೊಲೀಸ್ ಕಸ್ಟೋಡಿಯಲ್ ಡೆತ್ ಜಡ್ಜ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ

ದಾವಣಗೆರೆ, ಅ.7- ಮಾಯಕೊಂಡ ಸಮೀಪದ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಭಿರಕ್ಷೆಯಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ನಗರದಲ್ಲಿ ಇಂದು ಜಿಲ್ಲಾಸ್ಪತ್ರೆಯ ಶವಗಾರ ದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮೃತ ಮರುಳಸಿದ್ದಪ್ಪ ಈಗಾಗಲೇ ಮದುವೆ ಯಾಗಿದ್ದರೂ ಬೇರೊಂದು ಮದುವೆಯಾಗುವ ಮಾತು ಕೇಳಿ ಬಂದಿದ್ದವು ಎನ್ನಲಾಗಿದ್ದು, ಹಲವು ದಿನಗಳಿಂದ ಕಾಣೆಯಾಗಿದ್ದ ಈತನನ್ನು ಹುಡುಕಿ ಅವರ ವಿವಾಹ ತಡೆಯುವಂತೆ ಈತನ ಪತ್ನಿ ವೃಂದಮ್ಮ ಮಾಯಕೊಂಡ ಠಾಣೆಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಠಾಣೆಗೆ ಮರುಳಸಿದ್ದಪ್ಪನನ್ನು ವಿಚಾರಣೆಗೆ ಕರೆತರಲಾಗಿತ್ತು. ಆದರೆ ಮರುಳಸಿದ್ಧಪ್ಪ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದ. ವಿಚಾರಣೆ ವೇಳೆ ಠಾಣೆಯಲ್ಲಿಯೇ ಪೊಲೀಸರು ಹಲ್ಲೆ ಮಾಡಿ ಅಲ್ಲಿಗೆ ತಂದು ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ನಂದಿನಿ ಸಮ್ಮುಖದಲ್ಲಿ ಮೃತ ಮರುಳಸಿದ್ದಪ್ಪನ ಮರಣೋತ್ತರ ಪರೀಕ್ಷೆ ನಡೆಯಿ ತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪ, ಕಾಂಗ್ರೆಸ್ ಜಿಲ್ಲಾ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಓಬಳೇಶಪ್ಪ, ಕಾಂಗ್ರೆಸ್ ಮುಖಂಡ ಡಿ. ಬಸವರಾಜ್, ತಹಸೀಲ್ದಾರ್ ಗಿರೀಶ್, ಡಿವೈಎಸ್ಪಿ ನಾಗೇಶ್ ಐತಾಳ್, ಸಂಬಂಧಪಟ್ಟ ಅಧಿಕಾರಿಗಳು, ಮೃತನ ಸಂಬಂಧಿಕರು ಹಾಜರಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ.

ಮೃತನ ಪತ್ನಿಗೆ ಪರಿಹಾರ ಚೆಕ್ ವಿತರಣೆ: ಮೃತನ ಪತ್ನಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರದಲ್ಲಿ ಸದ್ಯಕ್ಕೆ 4 ಲಕ್ಷದ 12 ಸಾವಿರದ 500 ರೂ. ಗಳ ಚೆಕ್ಕನ್ನು ಜಿಲ್ಲಾಡಳಿತದಿಂದ ವಿತರಿಸಲಾಯಿತು.

ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಶವಾಗಾರದ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ ರಲ್ಲದೇ, ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ಗಂಡ ಸಾವಿನಿಂದ ಕಂಗಾಲಾಗಿದ್ದ ಮೃತನ ಪತ್ನಿಯು ನನಗೆ ಹಣ ಬೇಡ, ಗಂಡ ಬೇಕು ಎಂದು ಆಕ್ರಂದಿಸಿ, ಚೆಕ್ ನಿರಾಕರಿಸಿದ್ದು, ಆಗ ರೈತ ಮುಖಂಡ ಹುಚ್ಚವ್ವ ನಹಳ್ಳಿ ಮಂಜುನಾಥ್ ಸೇರಿದಂತೆ ಇತರೆ ಮುಖಂ ಡರು ಸಮಜಾಯಿಸಿ ನೀಡಿ, ಸರ್ಕಾರದ ಪರಿಹಾರದ ಹಣದಿಂದ ಮುಂದಿನ ಜೀವನೋಪಾಯಕ್ಕೆ ದಾರಿ ಮಾಡಿಕೊಳ್ಳುವಂತೆ ಸಲಹೆ ನೀಡಿದ ಮೇಲೆ ಮೃತನ ಪತ್ನಿ ಚೆಕ್ ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಭಿರಕ್ಷೆಯಲ್ಲಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಎಸ್‍ಎಲ್ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಸಾವು ಸಂಭವಿಸುವ ಸಂದರ್ಭದಲ್ಲಿ ಎಸ್‍ಸಿ, ಎಸ್‍ಟಿ ಪಂಗಡಕ್ಕೆ ಎಸ್‍ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಸಮಾಜ ಕಲ್ಯಾಣ ಇಲಾಖೆಯಿಂದ ಮೃತನ ಕುಟುಂಬಕ್ಕೆ ಸರ್ಕಾರದಿಂದ 8 ಲಕ್ಷದ 25 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಅದರಂತೆ ಇಂದು ಮೊದಲ ಹಂತದಲ್ಲಿ 4 ಲಕ್ಷದ 12 ಸಾವಿರದ 500 ರೂಗಳ ಪರಿಹಾರದ ಚೆಕ್ಕನ್ನು ಮೃತನ ಪತ್ನಿಗೆ ತಲುಪಿಸಲಾಗಿದೆ. ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ತಲುಪಿದ ಬಳಿಕ ಉಳಿದ ಶೇ.50 ರಷ್ಟು ಹಣವನ್ನು ನೀಡುತ್ತೇವೆ. ಮೃತನ ಕುಟುಂಬದ ಜೊತೆ ನಾವಿದ್ದು, ಮುಂದಿನ ದಿನಗಳಲ್ಲಿ ಆ ಕುಟುಂಬಕ್ಕೆ ಸರ್ಕಾರದ ಸಕಲ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನ ಜಿಲ್ಲಾಡಳಿತ ಮಾಡಲಿದೆ ಎಂದರು.

ಎಸ್ಪಿ ಹನುಮಂತರಾಯ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆಯಂತೆ ಮರುಳಸಿದ್ದಪ್ಪ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪೊಲೀಸ್ ಅಭಿರಕ್ಷೆಯಲ್ಲಿ ಸಾವು ಪ್ರಕರಣ ಎಂದು ಪರಿಗಣಿಸಲಾಗಿದೆ. ಸದ್ಯ ಗ್ರಾಮೀಣ ಡಿಎಸ್ಪಿ ತನಿಖೆ ಕೈಗೊಂಡಿದ್ದು, ಮುಂದಿನ ತನಿಖೆಗೆ ಮಾಹಿತಿ ನೀಡಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ ಸಿಐಡಿ ತನಿಖೆಗೆ ವರದಿ ಸಲ್ಲಿಸಲಾಗಿದೆ. ಶೀಘ್ರವೇ ಅವರು ಮುಂದಿನ ತನಿಖೆ ಮಾಡಲಿದ್ದಾರೆ. ಈಗಾಗಲೇ ಸಂಬಂಧಪಟ್ಟ ಮಾಯಕೊಂಡ ಠಾಣೆಯ ಪಿಎಸ್ ಐ ಮತ್ತು ಇಬ್ಬರು ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ಬಂಧಿಸಲಾಗಿದೆ. ಅಲ್ಲದೇ ಇಂದು ಠಾಣೆಯ ಸಿಬ್ಬಂದಿ ರಂಗಸ್ವಾಮಿ ಎಂಬಾತನನ್ನು ಅಮಾನತ್ತುಪಡಿಸಲಾಗಿದೆ. ಈ ಪ್ರಕರಣ ಸಂಬಂಧ ಸಮಾಜ ಕಲ್ಯಾಣ ಇಲಾಖೆಗೆ ವರದಿ ಸಲ್ಲಿಸಲಾಗಿತ್ತು. ಅದರಂತೆ ಇಂದು ಜಿಲ್ಲಾಧಿಕಾರಿಗಳು ಸರ್ಕಾರದ ನಿಯಮಾನುಸಾರ ಮೃತನ ಪತ್ನಿಗೆ ಶೇ. 50ರಷ್ಟು ಪರಿಹಾರ ಹಣದ ಚೆಕ್ ವಿತರಿಸಿದ್ದಾರೆಂದರು.

error: Content is protected !!