ಪೊಲೀಸ್ ಅಭಿರಕ್ಷೆಯಲ್ಲಿ ಸಾವು: ನ್ಯಾಯಾಂಗ ತನಿಖೆಗೆ ಆಗ್ರಹ

ದಾವಣಗೆರೆ, ಅ.7- ಮಾಯಕೊಂಡದಲ್ಲಿ ಪೊಲೀಸ್‌ ಅಭಿರಕ್ಷೆಯಲ್ಲಿ ಸಾವಿಗೀಡಾದ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮತ್ತು  ಜಿಲ್ಲಾ ಪಂಚಾಯತ್ ಸದಸ್ಯ ಕೆ.ಹೆಚ್. ಓಬಳಪ್ಪ ಒತ್ತಾಯಿಸಿದ್ದಾರೆ.

ಕೌಟುಂಬಿಕ ಸಮಸ್ಯೆ ದೂರಿನ ಮೇರೆಗೆ ಮಾಯಕೊಂಡ ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆ ತಂದಿದ್ದ ನಾಯಕ ಸಮಾಜದ ವಿಠಲಾಪುರ ಮರುಳಸಿದ್ದಪ್ಪ ಎಂಬಾತನನ್ನು ಪೊಲೀಸರು ಠಾಣೆಯಲ್ಲೇ ಕೊಂದಿದ್ದಾರೆ. ನಂತರ ಮಾಯಕೊಂಡ ಬಸ್ ನಿಲ್ದಾಣದ ಸಮೀಪ ಮೃತನ ಶವ ಇರಿಸಿ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಎಸ್ಪಿ ಹನುಮಂತರಾಯ ಭರವಸೆ ನೀಡಿದ್ದು, ಪೊಲೀಸರೇ ಇದರಲ್ಲಿ ಭಾಗಿಯಾಗಿರುವುದರಿಂದ ಸಿಐಡಿ ತನಿಖೆಯಿಂದ ಸತ್ಯಾಸತ್ಯತೆ ಹೊರಬರುವುದು ಸಾಧ್ಯವಿಲ್ಲ. ಆದ್ದರಿಂದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ವಯ 8.25 ಲಕ್ಷ ರೂ. ಪರಿಹಾರದಲ್ಲಿ ಈಗಾಗಲೇ ಮೃತ ವ್ಯಕ್ತಿಯ ಕುಟುಂಬಕ್ಕೆ 4.12 ಲಕ್ಷ ರೂ.ಗಳ ಪರಿಹಾರ ಚೆಕ್ಕನ್ನು ಸರ್ಕಾರದಿಂದ ನೀಡಲಾಗಿದೆ. ಆದರೆ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯೇ ಮೃತಪಟ್ಟಿರುವುದರಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಮೃತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು.  ಪತ್ರಿಕಾಗೋಷ್ಠಿಯಲ್ಲಿ ಇಂಟಕ್ ಜಿಲ್ಲಾಧ್ಯಕ್ಷ ಕೆ.ಎಂ. ಮಂಜುನಾಥ ಇದ್ದರು.

error: Content is protected !!