ಕೊರೊನಾ ಸೋಂಕು ಮೆಟ್ಟಿನಿಂತ ಎಸ್ಸೆಸ್ಸೆಲ್ಸಿ ಮಕ್ಕಳು

10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಯುತ್ತದೋ, ಇಲ್ಲವೋ ಎಂಬ ಅನಿಶ್ಚಿತತೆಯ ನಡುವೆ ನಮ್ಮ ಶಿಕ್ಷಣ ಮಂತ್ರಿಗಳಾದ ಸುರೇಶ್‍ಕುಮಾರ್‌ ಗಟ್ಟಿ ನಿರ್ಧಾರ ಕೈಗೊಂಡು  ಎಸ್‌.ಎಸ್‌.ಎಲ್.ಸಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ನೆಮ್ಮದಿಯ ದಡ ಸೇರಿಸಿದ್ದಾರೆ. ಶಿಕ್ಷಣ ಇಲಾಖೆಯ ಎಲ್ಲ ಮಟ್ಟದ ಅಧಿಕಾರಿಗಳು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಇದನ್ನು ಸವಾಲಾಗಿ ಸ್ವೀಕರಿಸಿ, ಅವಿಶ್ರಾಂತವಾಗಿ ದುಡಿದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಪಕ್ಕದ ಚೆನ್ನೈ, ಆಂಧ್ರಪ್ರದೇಶ ಪರೀಕ್ಷೆಗಳನ್ನು ರದ್ದುಗೊಳಿಸಿ, ಎಲ್ಲಾ ಮಕ್ಕಳನ್ನೂ ಉತ್ತೀರ್ಣ ಗೊಳಿಸಿತು. ಹಗಲಿರುಳೂ ಓದಿದ್ದ ಮಕ್ಕಳಿಗೆ, ಹಾಗೂ ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲದ ನಿರೀಕ್ಷೆಯಲ್ಲಿದ್ದವರಿಗೆ ಇದು ನಿರಾಸೆ ಮೂಡಿಸಿತು. ಆದರೆ ಅಲ್ಲಿಯ ಪರಿಸ್ಥಿತಿ ಹಾಗಿತ್ತು. ಇದನ್ನೇ ಅಸ್ತ್ರವಾ ಗಿಸಿಕೊಂಡು ದೃಶ್ಯ ಮಾಧ್ಯಮದವರು ಸಾಕಷ್ಟು ಕಾಲೆಳೆಯಲು ಪ್ರಯತ್ನಿಸಿ ಪೋಷಕರಲ್ಲಿ, ವಿದ್ಯಾರ್ಥಿ ಗಳಲ್ಲಿ ಭೀತಿ ಸೃಷ್ಠಿ ಮಾಡಲು ಪ್ರಯತ್ನಿಸಿದರು. ತಜ್ಞರನ್ನು ಕರೆಸಿ ಅಭಿಪ್ರಾಯ ಬಿತ್ತರಿಸಿದರು. ಪೋಷಕರ ಸಂದರ್ಶನ ನಡೆಸಿ ವಿಭಿನ್ನ ಉತ್ತರಗಳನ್ನು ಪಡೆದರು. ಮಕ್ಕಳು ಪರೀಕ್ಷೆಯ ಬಗ್ಗೆ ಆತಂಕಗೊಂಡರು. ಓದಿದ್ದ ಮಕ್ಕಳು ಪರೀಕ್ಷೆ ನಡೆಯಲಿ ಎಂದು ಹಾರೈಸಿದರೆ, ಓದಿಲ್ಲದವರು ಕೊರೊನಾ ಪಾಸ್‍ಗಾಗಿ ದೇವರಿಗೆ ಮೊರೆ ಇಟ್ಟರು.

ಪರೀಕ್ಷೆ ನಡೆಯುವುದು ಖಚಿತವೆಂದ ಮೇಲೆ ಮಕ್ಕಳು ಮತ್ತು ಪೋಷಕರು ಮಾನಸಿಕವಾಗಿ ಸಿದ್ಧ ರಾದರು. ಅಸ್ವಸ್ಥ ಮಕ್ಕಳಿಗೆ – ಪರೀಕ್ಷೆ ಬರೆಯಲಾಗ ದವರಿಗೆ ಆಗಸ್ಟ್ ತಿಂಗಳ ಪರೀಕ್ಷೆಯ ಅವಕಾಶ ಮಾಡಿಕೊಡಲಾಯಿತು. ಹಾಸ್ಟೆಲ್ ಮತ್ತು ಪರ ವೂರಿನ ಮಕ್ಕಳಿಗೆ ಅವರವರ ಸ್ಥಳದಲ್ಲೇ ಪರೀಕ್ಷೆ ಬರೆ ಯಲು ಅವಕಾಶ ದೊರೆಯಿತು. ಪರೀಕ್ಷೆ ಮುನ್ನಾ ದಿನ ಮಕ್ಕಳ ಪರೀಕ್ಷಾ ಕೇಂದ್ರದಲ್ಲಿನ ಕೊಠಡಿ ಸಂಖ್ಯೆ ಯನ್ನು ವಾಟ್ಸಾಪ್‍ನಲ್ಲಿ ತಿಳಿಸಿ ನೋಟಿಸ್ ಬೋ ರ್ಡಿನ ಮುಂದೆ ಗುಂಪು ಗೂಡುವುದನ್ನು ತಪ್ಪಿಸಿ ಸಾಮಾಜಿಕ ಅಂತರವನ್ನು ಕಾಪಾಡಲಾಯಿತು.

ಕೋವಿಡ್-19, ಸುರಿಯುವ ಮಳೆ, ಗ್ರಹಣಗಳ ಜ್ಯೋತಿಷ್ಯ, ನೆತ್ತಿ ಸುಡುವ ಬಿಸಿಲು ಇವ್ಯಾವುದೂ ಎಸ್ಸೆಸ್ಸೆಲ್ಸಿ  ಪರೀಕ್ಷೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಮಕ್ಕಳು ಕೊರೊನಾ ಮೆಟ್ಟಿನಿಂತು ಪರೀಕ್ಷೆ ಬರೆದರು. 

ದಾವಣಗೆರೆ ಜಿಲ್ಲೆಯ ಉಪ ನಿರ್ದೇಶಕರು ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಸಿದ ಪೂರ್ವಭಾವಿ ಪರೀಕ್ಷೆ ಮಕ್ಕಳಿಗೆ ಬಹಳ ಸಹಕಾರಿಯಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಇಡೀ ಪಠ್ಯವನ್ನು 5 ಸಮ ಭಾಗಗಳಾಗಿ ವಿಂಗಡಿಸಿ ನಿರ್ದಿಷ್ಟ ರೂಪು – ರೇಷೆಗಳೊಂದಿಗೆ ನಿಗದಿತ ವೇಳಾಪಟ್ಟಿ ನೀಡಿ ಭಾನುವಾರವೂ ಬಿಡದಂತೆ ಪ್ರಶ್ನೆಪತ್ರಿಕೆಗಳನ್ನು ಮಕ್ಕಳ ವಾಟ್ಸಾಪ್‍ಗೆ ತಲುಪುವಂತೆ ಮಾಡಿ, ಪರೀಕ್ಷೆ ಮುಗಿದ ನಂತರ ಮಾದರಿ ಉತ್ತರಗಳನ್ನೂ ರವಾನಿಸಿ ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡುವಂತೆ ಮಾಡಿದ್ದು ಶ್ಲಾಘನೀಯ. ನಿರಂತರ 30 ದಿನಗಳ ಕಾಲ ಮಕ್ಕಳು ಮನೆಯಲ್ಲೇ ಕುಳಿತು ಪರೀಕ್ಷೆ ಬರೆಯುವ ಸೌಲಭ್ಯ ಕಲ್ಪಿಸಿದ್ದು, ಮಕ್ಕಳ ಕಲಿಕೆ ಸರಾಗವಾಗಿ ಸಾಗುವಂತೆ ಮಾಡಿದ್ದು ಮೆಚ್ಚುವಂತಹುದು. ಈ ನಿಟ್ಟಿನಲ್ಲಿ ನಮ್ಮ ಉಪನಿರ್ದೇಶಕರಾದ ಸಿ.ಆರ್.ಪರಮೇಶ್ವರಪ್ಪ ಮತ್ತು ಅವರ ಜೊತೆ ಕೆಲಸ ಮಾಡಿದ ಇಡೀ ತಂಡಕ್ಕೆ ಅಭಿನಂದನೆಗಳು ಸಲ್ಲಬೇಕು.

ಪರೀಕ್ಷೆ ಪ್ರಾರಂಭಕ್ಕೂ ಮುನ್ನ ದಾವಣಗೆರೆ  ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಯವರು ಪ್ರತಿ ಯೊಂದು ಪರೀಕ್ಷಾ ಕೇಂದ್ರವೂ ಸುರಕ್ಷಿತವಾಗಿರು ವಂತೆ ಎಲ್ಲಾ ವ್ಯವಸ್ಥೆ ಮಾಡಿದ್ದು, ಅವರ ಸಾಮಾಜಿಕ ಕಾಳಜಿ ಮಕ್ಕಳ ಸಂರಕ್ಷಣೆಗೆ ಹಿಡಿದ ಕೈಗನ್ನಡಿಯಾ ಗಿದೆ. ಸ್ಕೌಟ್-ಗೈಡ್, ಎನ್.ಸಿ.ಸಿ ಕೆಡೆಟ್‍ಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಯವರು ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ, ಮೇಲ್ವಿಚಾರಕರಿಗೆ ನಿತ್ಯವೂ ಅಗ್ನಿ ಪರೀಕ್ಷೆ! ಒಂದೊಂದು ಪರೀಕ್ಷೆ ಮುಗಿದಾಗಲೂ ಕೌಂಟ್‍ಡೌ ನ್ ಮಾಡುತ್ತಾ ಮುಂದಿನ ಪರೀಕ್ಷೆ ಸುಗ ಮವಾಗಿರಲಿ ಎಂದು ದೇವರಲ್ಲಿ ಮೊರೆ ಇಟ್ಟರು.

ಪಾಲಕರಿಗೆ ಮತ್ತು ಮಕ್ಕಳಿಗೆ ಅಯೋಮಯ ಸ್ಥಿತಿ. ಪರೀಕ್ಷೆಯೂ ನಡೆಯಬೇಕು, ತಾವೂ ಸುರಕ್ಷಿತವಾಗಿರಬೇಕು. ವೈರಾಣು ಸೋಂಕಿನ ಬಗ್ಗೆ ಟಿ.ವಿ.ಗಳ ಮೂಲಕ ಅಗತ್ಯಕ್ಕಿಂತ ಹೆಚ್ಚು ಮಾಹಿತಿ ಹೊಂದಿದ್ದ ನಮ್ಮ ಮಕ್ಕಳು ಪರೀಕ್ಷಾ ಕೇಂದ್ರದೊಳಗೆ ಬರುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು. ಬೆಳಿಗ್ಗೆ 8 ಗಂಟೆಯಿಂದ ಒಬ್ಬೊಬ್ಬರಾಗಿ ಬರುತ್ತಿದ್ದರು. ಮುಖಕ್ಕೆ ಮಾಸ್ಕ್ ಧರಿಸಿ, ಕೈಗಳನ್ನು ಸ್ಯಾನಿಟೈಜ್‌ ಗೊಳಿಸಿಕೊಂಡು, ಹಣೆಗೆ ಗುರಿ ಇಟ್ಟಂತೆ ಹಿಡಿಯುವ ಥರ್ಮಲ್ ಸ್ಕ್ಯಾನರ್ ಪರೀಕ್ಷೆ, ನಂತರ ಒಳಬಂದರೆ ಎಲ್ಲೂ ಕುಳಿತುಕೊಳ್ಳುವಂತಿಲ್ಲ. ಯಾರೊಡನೆಯೂ ಮಾತನಾಡುವಂತಿಲ್ಲ. ಕೊನೆ ಕ್ಷಣದ ಪುಸ್ತಕ ತಿರುವಿ ಹಾಕುವ ತಯಾರಿ, ಸ್ನೇಹಿತರ ಜೊತೆಗೆ ಸಂದೇಹಗಳನ್ನು ಚರ್ಚಿಸುವ, ಅಂಟಂಟಿ ಕುಳಿತುಕೊಳ್ಳುವ, ನಗುವ, ಕೇಕೆ ಹಾಕುವ ಯಾವ ದೃಶ್ಯಗಳೂ ಕಾಣಲಿಲ್ಲ. ಕೈದಿಗಳು ಜೈಲಿನೊಳಗೆ ಬರುವಂತೆ ಒಂಟೊಂಟಿಯಾಗಿ ಬಂದರು. ತಮ್ಮ ರಿಜಿಸ್ಟರ್ ನಂಬರ್ ಇರುವ ಡೆಸ್ಕಿನ ಮೇಲೆ ಕುಳಿತು ಹತ್ತೂವರೆಯ ತನಕ ಜಾತಕ ಪಕ್ಷಿಯಂತೆ ಪ್ರಶ್ನೆ ಪತ್ರಿಕೆಗೆ ಕಾದು ಕುಳಿತರು. ಮೂಕ ವೇದನೆಯಿಂದ ನರಳಿದರು.

ಪರೀಕ್ಷೆ ಬರೆಯುವ ಸಮಯ ಮುಗಿದ ಮೇಲೂ ಸ್ನೇಹಿತರನ್ನು ಮಾತನಾಡಿಸುವಂತಿಲ್ಲ. ಗೇಟಿನ ಹೊರಗೆ ಕಾದು ನಿಂತಿರುವ ಪಾಲಕರು ಮಕ್ಕಳ ಮುಖ ಕಂಡೊಡನೆ ಕ್ಷಣವೂ ತಡಮಾಡದೇ ತಮ್ಮ ವಾಹನಗಳಲ್ಲಿ ಕೂರಿಸಿಕೊಂಡು ಕ್ಷಣಾರ್ಧದಲ್ಲಿ ಮಾಯವಾಗುತ್ತಿದ್ದರು. ಮಕ್ಕಳ ಕಣ್ಣುಗಳು ಸ್ನೇಹಿತ/ಸ್ನೇಹಿತೆಯರಿಗಾಗಿ ಹಂಬಲಿಸಿದವು. ತುಟಿಗಳು ಅದುರಿದವು. ಆಡಬೇಕಾಗಿದ್ದ ಮಾತುಗಳು ಒಳಗೆ ಹುದುಗಿ ಹೋದವು. ಪರೀಕ್ಷಾ ಕೇಂದ್ರಗಳು ಸಂತಾಪ ಸೂಚಕ ಸಭೆಗಳಂತಿದ್ದವು. ಮಾತಿಲ್ಲ-ಕಥೆಯಿಲ್ಲ ! 

ಹದಿಹರೆಯದ ಮಕ್ಕಳ ಈ ತಲ್ಲಣ ಮನ ಕರಗುವಂತಿತ್ತು. ಹಿಂದೆಲ್ಲಾ ಪರೀಕ್ಷೆಗೆ ಬರುವುದೊಂದು ಸಂಭ್ರಮ… ಪರೀಕ್ಷೆ ಮುಗಿದ ಮೇಲೊಂದು ಹಬ್ಬ! ಈ ಬಾರಿ ನಮ್ಮ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷೆ ಹಬ್ಬವಾಗಲಿಲ್ಲ, ಮುಗಿದ ನಂತರ ಸಂಭ್ರಮಿಸಲಿಲ್ಲ. ಆದರೆ, ಕೊರೊನಾ ಮೆಟ್ಟಿನಿಂತು ಬರೆದದ್ದೊಂದು ಸಾರ್ವಕಾಲಿಕ ದಾಖಲೆ. ಜೀವನದುದ್ದಕ್ಕೂ ಈ ಸ್ಮರಣೆ ಅಳಿಸಲಾಗದ ನೆನಪು! ವ್ಯವಸ್ಥಿತವಾಗಿ ಪರೀಕ್ಷೆ ನಡೆಸಿದ ಸರ್ವರಿಗೂ ಕೃತಜ್ಞತೆಗಳು.


ಜಸ್ಟಿನ್ ಡಿ’ಸೌಜಾ
ಮುಖ್ಯಶಿಕ್ಷಕಿ, ಸಿದ್ಧಗಂಗಾ ಶಾಲೆ, ದಾವಣಗೆರೆ.

error: Content is protected !!