ದಾವಣಗೆರೆ, ಜು.2- ರೈತ ವಿರೋಧಿ ನೀತಿಗಳಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿಗಳನ್ನು ಕೈ ಬಿಡಬೇಕು. ಕೂಡಲೇ ಈ ಕಾಯಿದೆಗಳನ್ನು ಕೈ ಬಿಡದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ನೇತೃತ್ವದ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಆವರಗೆರೆ ಹೆಚ್.ಜಿ. ಉಮೇಶ್ ಎಚ್ಚರಿಕೆ ನೀಡಿದರು.
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೀಡಿರುವ ರಾಷ್ಟ್ರವ್ಯಾಪಿ ಪ್ರತಿಭಟನಾ ಕರೆಯ ಹಿನ್ನೆಲೆಯಲ್ಲಿ ದಾವಣಗೆರೆ ತಾಲ್ಲೂಕಿನ ಆವರಗೊಳ್ಳ, ಕಕ್ಕರಗೊಳ್ಳ, ಕಡಲೇಬಾಳು ಹಾಗೂ ತೋಳಹುಣಸೆ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಗ್ರಾಮ ಪಂಚಾಯತಿಗಳ ಎದುರು ನಿನ್ನೆ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಮತ್ತು ಕಾರ್ಮಿಕರಿಗೆ ಮಾರಕ ಆಗುವಂತಹ ಕಾನೂನುಗಳನ್ನು ಜಾರಿಗೆ ತರುವ ಹುನ್ನಾರ ನಡೆಸಿರುವುದು ಸರಿಯಲ್ಲ. ಹಾಲಿ ಇರುವ ಕೃಷಿ ಮಾರುಕಟ್ಟೆ ಪದ್ದತಿಯನ್ನು ರದ್ದು ಮಾಡಿದರೆ ಮುಂದೊಂದು ದಿನ ಕೃಷಿ ಮಾರುಕಟ್ಟೆ ವ್ಯವಹಾರಸ್ಥನು ಬಹುರಾಷ್ಟ್ರೀಯ ಕಂಪನಿಯ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ಕಾಲ ದೂರವಿಲ್ಲ.
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಆವರಗೊಳ್ಳ, ಕಕ್ಕರಗೊಳ್ಳ, ಕಡಲೇಬಾಳು ಹಾಗೂ ತೋಳಹುಣಸೆ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಗ್ರಾಮ ಪಂಚಾಯತಿಗಳಿಗೆ ಮುತ್ತಿಗೆ
ರೈತರು ಬೆಳೆದಂತಹ ಬೆಳೆಗಳನ್ನು ಅಂತರ ರಾಷ್ಟ್ರೀಯ ಬಂಡವಾಳಗಾರರು ಖರೀದಿ ಮಾಡಲು ಪರವಾನಗಿ ನೀಡುತ್ತಿರುವುದರಿಂದ ಮುಂದೊಂದು ದಿನ ನಮ್ಮ ಭಾಗದ ರೈತರು ಬಹು ರಾಷ್ಟ್ರೀಯ ಕಂಪನಿಗಳ ಕೃಷಿ ಕಂಪನಿಗಳಲ್ಲಿ ಜೀತದಾಳುಗಳಾಗಿ ಕೆಲಸ ಮಾಡುವ ದಿನಗಳು ದೂರವಿಲ್ಲ. ಈ ಕಾನೂನನ್ನು ಜಾರಿಗೆ ತಂದರೆ, ನಮ್ಮ ರೈತರು ಬೀದಿಗೆ ಬೀಳುವುದಲ್ಲದೇ, ಕೃಷಿ ಕಾರ್ಮಿಕರು ಅಭದ್ರತೆಯಲ್ಲಿ ಸಿಲುಕಿ ಪ್ರಾಣ ತ್ಯಾಗ ಮಾಡುವ ಸಂದರ್ಭ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಬೀಜ ಕಾಯಿದೆಯಿಂದ ನಮ್ಮ ರೈತರ ಕೃಷಿ ಭೂಮಿಗಳು ಮುಂದೊಂದು ದಿನ ಬರಡಾಗಿ ಪರಿವರ್ತನೆ ಆಗುವುದನ್ನು ನೋಡಬಹು ದಾಗಿದೆ. ಕೃಷಿ ಭೂಮಿ ಕ್ರಯ ವಿಚಾರದಲ್ಲಿ ಈಗ ಇರುವ ಕಾನೂನನ್ನು ಸಡಿಲಗೊಳಿಸಿದರೆ, ಇವತ್ತು ಉಳುವವನೇ ಭೂಮಿಯ ಒಡೆಯ ಎನ್ನುವ ಜಾಗದಲ್ಲಿ ಉಳ್ಳವನೇ ಹೊಲದೊಡೆಯ ಎನ್ನುವಂತಾಗುವ ಸಂದರ್ಭ ನೋಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐಕೆಎಸ್‍ಬಿಕೆ ಎಂ ಯುನ ಜಿಲ್ಲಾ ಸಂಚಾಲಕರಾದ ಐರಣಿ ಚಂದ್ರು, ಕೆಪಿಆರ್‍ಎಸ್‍ನ ಸಂಚಾಲಕ ಶ್ರೀನಿವಾಸ, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಭಗತ್‍ಸಿಂಹ, ತೋಳಹುಣಸೆಯ ಜಯಪ್ಪ, ಶೇಖರ್, ಮಂಜಪ್ಪ ಗೌಡ್ರು, ಕೆ.ಎಂ.ನಾಗರಾಜ್, ಆವರಗೆರೆ ಬಾನಪ್ಪ ಹಾಗೂ ಇತರೆ ರೈತ ಮತ್ತು ಕಾರ್ಮಿಕ ನಾಯಕರು ಇದ್ದರು.