ಜಿಲ್ಲೆಯಲ್ಲಿ ಲಿಂಪಿ ಸ್ಕಿನ್ ತಡೆಗೆ 50 ಸಾವಿರ ಲಸಿಕೆಗೆ ಬೇಡಿಕೆ

ಜಿಲ್ಲೆಯಲ್ಲಿ ಲಿಂಪಿ ಸ್ಕಿನ್ ತಡೆಗೆ 50 ಸಾವಿರ ಲಸಿಕೆಗೆ ಬೇಡಿಕೆ - Janathavaniಜಿಲ್ಲೆಯಲ್ಲಿ 700 ರಾಸುಗಳಲ್ಲಿ ಕಾಣಿಸಿಕೊಂಡ ವೈರಲ್ ಸೋಂಕು

ಜಿಲ್ಲೆಯಲ್ಲಿ ಯಾವುದೇ ಜಾನುವಾರು ಸಿಡುಬು ಚರ್ಮ ಗಂಟು ರೋಗದಿಂದ ಸಾವನ್ನಪ್ಪಿಲ್ಲ. ರೋಗ ತಡೆಯಲು ಜಿಲ್ಲೆಗೆ 50 ಸಾವಿರ ಲಸಿಕೆ ಕೇಳಿದ್ದೇವೆ. ಬಂದ ತಕ್ಷಣ ರಾಸುಗಳಿಗೆ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು.

– ಡಾ. ಸಿ. ಭಾಸ್ಕರ ನಾಯ್ಕ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ

ದಾವಣಗೆರೆ, ಅ. 6 – ಪಶು ಸಂಗೋಪನಾ ಇಲಾಖೆಯು ಹಸು – ಎತ್ತುಗಳಿಗೆ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕುವ ಸಿದ್ಧತೆಯಲ್ಲಿರು ವಾಗಲೇ, ಜಿಲ್ಲೆಯ ಹಲವೆಡೆ ಲಂಪಿ ಸ್ಕಿನ್ ಡಿಸೀಸ್ (ಸಿಡುಬು ಚರ್ಮ ಗಂಟು ರೋಗ) ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಕಂಡು ಬರುತ್ತಿದ್ದ ಈ ರೋಗ, ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಅದರಲ್ಲೂ ಕಲಬುರಗಿ, ಯಾದಗಿರಿ, ಹಾಸನ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬೀದರ್, ಕೊಪ್ಪಳ, ರಾಯಚೂರು ಮುಂತಾದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿದೆ.

ಜಿಲ್ಲೆಯಲ್ಲೂ ಚನ್ನಗಿರಿ ಮತ್ತು ಹೊನ್ನಾಳಿಗಳಲ್ಲಿ ರೋಗಬಾಧೆ ಕಾಣಿಸಿಕೊಂಡಿದೆ. ಸುಮಾರು 120 ಗ್ರಾಮಗಳ 700ಕ್ಕೂ ಹೆಚ್ಚು ಜಾನುವಾರುಗಳಲ್ಲಿ ರೋಗ ಇರುವುದು ಕಂಡು ಬಂದಿದೆ.

ಕ್ಯಾಪ್ರೈನ್ ಪಾಕ್ಸ್ ಎಂಬ ವೈರಾಣುವಿನಿಂದ ಬರುವ ಈ ರೋಗದಿಂದಾಗಿ ರಾಸುಗಳ ಚರ್ಮ ಮತ್ತು ದೇಹದ ತುಂಬೆಲ್ಲಾ 2ರಿಂದ 5 ಸೆಂ.ಮೀ.ವರೆಗಿನ ವ್ಯಾಸದಲ್ಲಿ ಗಂಟಾಗುತ್ತವೆ. ನೊಣಗಳ ಹಾವಳಿಯಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗುತ್ತವೆ. ಬಾಯಿ, ನಾಲಿಗೆ, ಕರುಳು, ಶ್ವಾಸಕೋಶ, ಗರ್ಭಕೋಶದಲ್ಲಿಯೂ ಗಂಟು ಕಾಣಿಸಿಕೊಳ್ಳಬಹುದು.

ಈ ರೋಗದಿಂದ ರಾಸುಗಳು 2-3 ವಾರಗಳಲ್ಲಿ ಚೇತರಿಸಿಕೊಳ್ಳುತ್ತವಾದರೂ, ಶೇ.1-2ರ ಪ್ರಮಾಣದಲ್ಲಿ ಸಾವು ಸಂಭವಿಸುವ ಅಪಾಯವಿದೆ. ಹೀಗಾಗಿ ರೋಗ ಕಂಡು ಬಂದ ತಕ್ಷಣವೇ ಎಚ್ಚರಿಕೆ ವಹಿಸಬೇಕಿದೆ.

ಸೊಳ್ಳೆ, ಕಚ್ಚುವ ನೊಣ, ಉಣ್ಣೆಗಳಿಂದ ಪ್ರಮುಖವಾಗಿ ಈ ರೋಗ ಹರಡುತ್ತದೆ. ರಾಸುವಿನ ಕೀವು, ರಕ್ತ, ದೈಹಿಕ ಸ್ರಾವಗಳ ನೇರ ಸಂಪರ್ಕದಿಂದ ರೋಗ ಅಂಟಬಹುದು. ಹೀಗಾಗಿ ರೋಗಕ್ಕೆ ಗುರಿಯಾದ ರಾಸುಗಳನ್ನು ಪ್ರತ್ಯೇಕವಾಗಿಡುವ ಅಗತ್ಯವಿದೆ ಎಂದು ಪಶುಪಾಲನೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕೆಗೆ ಕ್ರಮ : ಸಿಡುಬು ಚರ್ಮ ಗಂಟು ರೋಗಕ್ಕೆ ನೇರ ಲಸಿಕೆ ಇಲ್ಲ. ಆದರೆ, ಮೇಕೆ ಸಿಡುಬು ನಿರೋಧಕ ಲಸಿಕೆ ಉಪಯುಕ್ತ ಎಂಬುದು ಕಂಡು ಬಂದಿದೆ. ಹೀಗಾಗಿ 50 ಸಾವಿರ ಲಸಿಕೆಗೆ ಮನವಿ ಸಲ್ಲಿಸಲಾಗಿದೆ. ಇನ್ನೂ ಲಸಿಕೆ ಬಂದಿಲ್ಲ, ಬಂದ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಸಿ. ಭಾಸ್ಕರ ನಾಯ್ಕ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 3.28 ಲಕ್ಷ ರಾಸುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಲು ಸೋಮವಾರದಿಂದ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಎರಡೂ ಲಸಿಕೆಗಳನ್ನು ಒಟ್ಟಿಗೆ ಹಾಕುವುದು ಸಮಸ್ಯೆಯಾಗಲಿದೆ.

ಸಿಡುಬು ಚರ್ಮ ಗಂಟು ರೋಗ ಇರುವ ಗ್ರಾಮಗಳನ್ನು ಬಿಟ್ಟು ಉಳಿದೆಡೆ ಕಾಲುಬಾಯಿ ಲಸಿಕೆ ಹಾಕಲಾಗುತ್ತಿದೆ. ನಂತರದಲ್ಲಿ ಸಿಡುಬು ಚರ್ಮ ಗಂಟು ರೋಗಕ್ಕೆ ಲಸಿಕೆ ಹಾಕಲಾಗುವುದು ಎಂದವರು ವಿವರಿಸಿದ್ದಾರೆ.

ಆತಂಕ ಬೇಡ : ಜಿಲ್ಲೆಯಲ್ಲಿ ಈ ರೋಗದಿಂದ ಇದುವರೆಗೂ ಯಾವುದೇ ದನ – ಹಸುಗಳ ಸಾವು ಸಂಭವಿಸಿಲ್ಲ. ಸೋಂಕಿನಿಂದ ಜ್ವರ ಬಂದಾಗ ಸುಸ್ತು, ಹಾಲು ಕಡಿಮೆಯಂತಹ ಸಮಸ್ಯೆಗಳು ಮಾತ್ರ ಕಂಡು ಬಂದಿವೆ ಎಂದು ಡಾ. ನಾಯ್ಕ ತಿಳಿಸಿದ್ದಾರೆ.

ರೋಗ ತಡೆಯಲು ರಾಸುಗಳನ್ನು ಪ್ರತ್ಯೇಕವಾಗಿರಿಸಬೇಕು. ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುವ ಜೊತೆಗೆ ನೊಣ – ಸೊಳ್ಳೆ ಬಾಧೆಯಿಂದ ಮುಕ್ತವಾಗಿರಬೇಕು ಎಂದವರು ಹೇಳಿದ್ದಾರೆ.

ಮನುಷ್ಯರಿಗೆ ಸಮಸ್ಯೆಯಿಲ್ಲ : ಈ ವೈರಸ್ ಕಾರಣದಿಂದ ಮನುಷ್ಯರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಹಾಲನ್ನು ಕುದಿಸಿ ಕುಡಿಯುವುದರಿಂದ ಆ ಮೂಲಕವೂ ರೋಗ ಬರುವ ಸಾಧ್ಯತೆ ಇಲ್ಲ ಎಂದವರು ತಿಳಿಸಿದ್ದಾರೆ.

ಕೋವಿಡ್ ಹರಡಿರುವ ನಡುವೆಯೇ ಸಿಡುಬು ಚರ್ಮ ಗಂಟು ರೋಗ ಬಂದಿದೆ. ಕಾಲುಬಾಯಿ ರೋಗಕ್ಕೂ ಲಸಿಕೆ ಹಾಕಬೇಕಿದೆ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಎರಡೂ ಸೋಂಕುಗಳನ್ನು ನಿಭಾಯಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.

error: Content is protected !!