ಖಾಯಂ ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ
ದಾವಣಗೆರೆ, ಅ.3- ಎಲ್ಲಾ ಸ್ಕೀಮ್ ನೌಕರರನ್ನು ಖಾಯಂ ಸರ್ಕಾರಿ ನೌಕರರೆಂದು ಪರಿಗಣಿಸು ವಂತೆ ಆಗ್ರಹಿಸಿ ಸ್ಕೀಮ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ ಡಬ್ಲ್ಯೂಎಫ್ ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಆನ್ ಲೈನ್ ಪೋಸ್ಟರ್ ಚಳುವಳಿಯನ್ನು ಸ್ಕೀಮ್ ನೌಕರರಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಕಾರ್ಯಕರ್ತೆಯರು ತಮ್ಮ ಮನೆಗಳಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಿದರು.
ಆಶಾ, ಅಂಗನವಾಡಿ, ಬಿಸಿ ಯೂಟ ಸೇರಿದಂತೆ ಎಲ್ಲಾ ಸ್ಕೀಮ್ ನೌಕರರನ್ನು ಖಾಯಂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ಅವರಿಗೆ ವೇತನ, ರಜೆಗಳು, ಆರೋಗ್ಯ ಪರಿಹಾರ, ಮುಂಬಡ್ತಿ ಸೌಲಭ್ಯ ಸೇರಿದಂತೆ ಎಲ್ಲಾ ಶಾಸನ ಬದ್ಧ ಸೌಲಭ್ಯಗಳನ್ನು ಒದಗಿಸಬೇಕು. ನಿವೃತ್ತಿ ಹೊಂದುವ ಸ್ಕೀಮ್ ನೌಕರರಿಗೆ 5 ಲಕ್ಷ ರೂ. ನಿವೃತ್ತಿ ಇಡಿಗಂಟು ನೀಡಬೇಕು. ಕೆಲಸ ಮಾಡುವ ಜಾಗ ದಲ್ಲಿ ವಿರಾಮ ಗೃಹ, ಶೌಚಾಲಯ, ಶುದ್ಧ ಕುಡಿಯುವ ನೀರು, ಸಮರ್ಪಕ ಸುರಕ್ಷತೆ ಮತ್ತು ಭದ್ರತೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಬಿಸಿಯೂಟ ನೌಕರರಿಗೆ ಸದ್ಯ ಹತ್ತು ತಿಂಗಳು ಮಾತ್ರ ಗೌರವ ಧನವನ್ನು ನೀಡುತ್ತಿದ್ದು, ಅವರಿಗೆ ವರ್ಷದ 12 ತಿಂಗಳೂ ಸಹ ಗೌರವ ಧನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಅಣಬೇರು, ಮಂಜುನಾಥ್ ಕುಕ್ಕುವಾಡ, ನಾಗವೇಣಿ ಹಿರೇಮಳಲಿ ಸೇರಿದಂತೆ ಇತರರು ಇದ್ದರು.