ದಾವಣಗೆರೆ, ಅ.3- ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ ಬಣ) ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದ ಸಮಿತಿ ಪದಾಧಿಕಾರಿಗಳು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ನೈತಿಕ ಹೊಣೆ ಹೊತ್ತು ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು. ಸಂತ್ರಸ್ತೆಯ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ ನೀಡಬೇಕು ಹಾಗೂ ಕುಟುಂಬದ ಇಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಅತ್ಯಾಚಾರ ಮಾಡಿ ಕೊಲೆ ಮಾಡಿದವರನ್ನು ಗಲ್ಲಿಗೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾ ಲಕ ಕುಂದವಾಡ ಮಂಜುನಾಥ್, ಮುಖಂಡರಾದ ಸಿದ್ದರಾಮಪ್ಪ, ಸತ್ಯಪ್ಪ, ವಿಜಯಲಕ್ಷ್ಮಿ, ಹನುಮಂತಪ್ಪ, ದೊಡ್ಡಬಾತಿ ಸಿದ್ದೇಶ್, ಪ್ರದೀಪ್ ಕೆ.ಟಿ.ಜೆ ನಗರ, ಹನುಮಂತಪ್ಪ ಜಾಲಿಹಾಳ್ ಸೇರಿದಂತೆ ಇತರರು ಭಾಗವಹಿಸಿದ್ದರು.