ಹರಪನಹಳ್ಳಿಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಹರಪನಹಳ್ಳಿ, ಅ. 3- ಉತ್ತರ ಪ್ರದೇಶದ ಹತ್ರಸ್ ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ ಗೈದು, ಆಕೆಯನ್ನು ಕೊಲೆ ಮಾಡಿರುವ ಕಾಮುಕರ ಮೇಲೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇ ಕೆಂದು ಒತ್ತಾಯಿಸಿ, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ, ಏಕಲವ್ಯ ಸಂಘರ್ಷ ಸಮಿತಿ, ತಾಲ್ಲೂಕು ವಾಲ್ಮೀಕಿ ನಾಯಕರ ಮಹಿಳಾ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚಂಗೆಪ್ಪ ಮಾತನಾಡಿ, ರಾಮ, ರಾಮ ಎಂದು ಜಪಿಸುತ್ತಾ ರಾಮ ಮಂದಿರ ನಿರ್ಮಾಣ ಮಾಡುತ್ತಿರುವ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ, ಉತ್ತರ ಪ್ರದೇಶದ ಸರ್ಕಾರ ಮೌನವಾಗಿರುವುದು ನಾಚಿಕೆ ಪಡುವಂತಹದ್ದು. ಇಂತಹ ಕೃತ್ಯವನ್ನು ಯಾರೇ ಮಾಡಿದರೂ, ಜಾತಿ, ಮತ, ಪಂಥ ಎಂದು ಎಣಿಸದೆ ಅವರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಿ, ಕಾನೂನು ರೀತಿ ಶಿಕ್ಷಗೆ ಗುರಿಪಡಿಸುವ ಮೂಲಕ ಇನ್ನೊಮ್ಮೆ ಈ ರೀತಿ ನಡೆಯದಂತೆ ಬಿಗಿ ಕಾನೂನು ರೂಪಿಸುವ ಮೂಲಕ ಎಚ್ಚರಿಕೆ ಸಂದೇಶ ನೀಡಬೇಕಿತ್ತು. ಆದರೆ, ಯೋಗಿ ಆದಿತ್ಯನಾಥರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಕಲವ್ಯ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ರಾಯದುರ್ಗದ ಪ್ರಕಾಶ್, ದೇವದಾಸಿ ವಿಮೋಚನ ಸಂಘದ ಟಿ.ವಿ. ರೇಣುಕಮ್ಮ ಮಾತನಾಡಿ, ಈ ಕೂಡಲೇ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದರು.
ಕೋಟೆ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪಿ. ವೆಂಕಟೇಶ್, ಎಐವೈಎಫ್ ನ ಹೆಚ್.ಎಂ. ಸಂತೋಷ, ಸಮಾಜವಾದಿ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ಮಂಜುನಾಥ, ನ್ಯಾಯವಾದಿ ಟಿ. ಮನೋಜ, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ಸರ್ಕಾರಿ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಂ. ಆಂಜನೇಯ, ವಿವಿಧ ಸಂಘಟನೆಗಳ ಗುಡಿಹಳ್ಳಿ ಹಾಲೇಶ್, ಚಂದ್ರನಾಯ್ಕ, ಉಪಾಧ್ಯಕ್ಷ ಶಿವಾನಂದ, ವಾಲ್ಮೀಕಿ ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಗಿರಜ್ಜಿ ನಾಗರಾಜ, ಸಂಘಟನಾ ಕಾರ್ಯದರ್ಶಿಗಳಾದ ಹಲವಾಗಲು ಎಂ. ನಂದಿಕೇಶವ, ನೀಲಗುಂದ ತಿಮ್ಮೇಶ, ಮಹಿಳಾ ಘಟಕದ ಗೌರವ ಅಧ್ಯಕ್ಷೆ ಟಿ. ಪದ್ಮಾವತಿ, ಸದಸ್ಯರಾದ ಮಂಜುಳಾ, ಹನುಮಕ್ಕ, ಏಕಲವ್ಯ ಸಂಘರ್ಷ ಸಮಿತಿಯ ಉಪಾಧ್ಯಕ್ಷ ರುಗಳಾದ ಮೈದೂರಿನ ಪರಶುರಾಮ್, ಅಲಮರಸಿ ಕೆರೆಯ ಟಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಂಗಾಪುರ ಕ್ಯಾಂಪ್ನ ತಳವಾರ ಶಿವರಾಜ, ಖಜಾಂಚಿ ಜಿ. ದಾದಾಪುರದ ಹರೀಶ, ಸಂಘಟನಾ ಕಾರ್ಯದರ್ಶಿಗಳಾದ ನೀಲಗುಂದದ ವೆಂಕಟೇಶ್, ಅರಸಿಕೆರೆ ಪ್ರದೀಪ್, ತಲುವಾಗಲು ಟಿ. ಮಂಜುನಾಥ್, ಹಲುವಾಗಲು ಎಸ್.ಬಿ. ಗಣೇಶ್, ಹರಪನಹಳ್ಳಿಯ ಜಿ. ವಿಜಯಕುಮಾರ್, ಸಹ ಕಾರ್ಯದರ್ಶಿಗಳಾದ ಕಣಿವಿಹಳ್ಳಿ ಎ.ಟಿ. ಶಿವರಾಜ, ನಿಚ್ಚವ್ವನಹಳ್ಳಿ ಕಾಳಜ್ಜ, ಮತ್ತಿಹಳ್ಳಿ ಗಿರೀಶ, ಮೈದೂರು ಮಾರುತಿ, ಹರಿಯಮ್ಮನಹಳ್ಳಿ ಶಿವರಾಜ್, ಮಹಾಂತೇಶ್, ಗುಂಡಗತ್ತಿ ಮಹೇಂದ್ರ, ಬಸಾಪುರದ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.