ಸ್ಥಳೀಯ ಜನಪ್ರತಿನಿಧಿಗಳ ಜಾಣ ಕುರುಡು
ದಾವಣಗೆರೆ, ಜು.1- ಕೊರೊನಾ ತಾಂಡವವಾಡುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ವೈದ್ಯಕೀಯ ಕ್ಷೇತ್ರದ ಪಾತ್ರ ಮಹತ್ವದ್ದು. ಆ ಕಾರಣಕ್ಕಾಗಿಯೇ ವೈದ್ಯರನ್ನು ಕೊರೊನಾ ವಾರಿಯರ್ಸ್ ಎಂದು ಹೂ ಮಳೆ ಸುರಿಸಲಾಗಿತ್ತು.
ಆದರೆ ಕಳೆದ 16 ತಿಂಗಳಿನಿಂದ ವೈದ್ಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡದೆ ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಪರಸ್ಪರ ಬೆರಳು ಮಾಡುತ್ತಿರುವುದು ವಾರಿಯರ್ಸ್ ಹೂ ಮಳೆ ಕೇವಲ ಬೂಟಾಟಿಕೆ ಮಾತ್ರ ಎಂಬುದನ್ನು ಸಾಬೀತು ಪಡಿಸುವಂತಿದೆ.
ಜೆಜೆಎಂ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಹಲವಾರು ತಿಂಗಳಿನಿಂದ ಶಿಷ್ಯ ವೇತನ ಕೇಳುತ್ತಾ ಬಂದ ವಿದ್ಯಾರ್ಥಿ ಪಡೆ ಕಳೆದ 8 ತಿಂಗಳ ಹಿಂದೆಯೂ ಜಿಲ್ಲಾಸ್ಪತ್ರೆ ಮುಂಭಾಗ ಪೆಂಡಾಲ್ ಹಾಕಿ ಪ್ರತಿಭಟನೆ ನಡೆಸಿದ್ದರು. ಕ್ಯಾಂಡಲ್ ಹಿಡಿದು ಅಸಮಾಧಾನ ಹೊರ ಹಾಕಿದ್ದರು. ಆದಾಗ್ಯೂ ಸರ್ಕಾರ ಗಮನಿಸಲಿಲ್ಲ ಅಥವಾ ಗಮನಿಸಿದ್ದರೂ ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ. ಆದರೆ ಇದೀಗ ಮತ್ತೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಈ ಬಾರಿ ಲಿಖಿತ ಭರವಸೆಗಾಗಿ ಪಟ್ಟು ಹಿಡಿದು ಕುಳಿತಿದ್ದಾರೆ. ದಾವಣಗೆರೆ ರಾಜ್ಯಾದ್ಯಂತ ಸುದ್ದಿಯಾಗಿದೆ. ಅದೂ ಕೊರೊನಾ ಕಾಲದಲ್ಲಿ. ಎಲ್ಲೆಡೆ ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯತೆ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ.
ಶಿಷ್ಯ ವೇತನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜೂನ್ 17, 2020ರಂದು ಸುಪ್ರೀಂ ಕೋರ್ಟ್ ಕೂಡ ಕೊರೊನಾ ವೈದ್ಯರಿಗೆ ಸಂಬಳ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಇದರ ಅನ್ವಯವಾದರೂ ಸರ್ಕಾರ ಶಿಷ್ಯ ವೇತನ ನೀಡಬೇಕು ಎಂದು ಒತ್ತಾಯಿಸಿರುವ ಪ್ರತಿಭಟನಾಕಾರರು, ಶಿಷ್ಯ ವೇತನ ಸಿಗುವವರೆಗೂ ನಮ್ಮ ಮುಷ್ಕರ ಮುಂದುವರೆಯಲಿದೆ ಎಂಬುದು ವಿದ್ಯಾರ್ಥಿಗಳ ಮಾತು.
ಒಂದೆಡೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ ಹೀಗೆಯೇ ಮುಂದುವರೆದರೆ, ಬಡ ರೋಗಿಗಳ ಮೇಲೂ ಪ್ರಭಾವ ಬೀರುವುದು ಸುಳ್ಳಲ್ಲ. ವಿದ್ಯಾರ್ಥಿಗಳು ಸೇವೆಗೆ ಅಡ್ಡಿಯಾಗದೆ ಪ್ರತಿಭಟಿಸುತ್ತಿದ್ದೇವೆ ಎನ್ನುತ್ತಿದ್ದರಾದರೂ, ಕೊರೊನಾ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಪ್ರತಿಭಟನೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಏತನ್ಮಧ್ಯೆ ಪ್ರತಿಭಟನೆ ಕೈ ಬಿಡದಿದ್ರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳ ಎಚ್ಚರಿಕೆಗೆ ವಿದ್ಯಾರ್ಥಿಗಳು ಕ್ಯಾರೇ ಎಂದಿಲ್ಲ. ಮೂರನೇ ದಿನ ರಕ್ತದಾನ ಮಾಡುವ ಮೂಲಕ ಪ್ರತಿಭಟನೆ ಸ್ವರೂಪವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ದಾವಣಗೆರೆ ದಾನಿಗಳ ಊರು ಎಂದೇ ಹೆಸರು ಪಡೆದಿದೆ. ಆದರೆ ವೈದ್ಯರ ಸೇವೆ ಎಷ್ಟು ಮಹತ್ವದ್ದು ಎಂದು ತಿಳಿಯುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತಿಲ್ಲ ಎಂಬುದು ಕಪ್ಪು ಚುಕ್ಕೆಯಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ, ಶೀಷ್ಯ ವೇತನ ಪಾವತಿ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ವಿಚಾರ ಕುರಿತಂತೆ ಮ್ಯಾನೇಜ್ಮೆಂಟ್ನವರು ಹಾಗೂ ಮುಖ್ಯಮಂತ್ರಿಗಳು ಮಾತನಾಡಲಿದ್ದಾರೆಂದು ಭರವಸೆ ನೀಡಿದ್ದರಾದರೂ, ಭರವಸೆ ಲಿಖಿತ ರೂಪದಲ್ಲಿರಲಿ ಎಂಬ ಪಟ್ಟು ವಿದ್ಯಾರ್ಥಿಗಳದ್ದು.
ವೈದ್ಯ ವಿದ್ಯಾರ್ಥಿಗಳ ಮುಷ್ಕರ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದರೂ, ಇಲ್ಲಿನ ಸ್ಥಳೀಯ ಶಾಸಕರು, ಸಂಸದರು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಆಡಳಿತ ಮಂಡಳಿ ಹಾಗೂ ಸರ್ಕಾರ ಪರಸ್ಪರ ಚರ್ಚಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲೆಯ ಶಾಸಕರುಗಳು, ಸಂಸದರು ಕಾರ್ಯೋನ್ಮುಖರಾಗಬೇಕಿದೆ. ಕಡೇ ಪಕ್ಷ ಮಾನವೀಯತೆ ದೃಷ್ಟಿಯಿಂದಲಾದರೂ….