ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯ ವಿದ್ಯಾರ್ಥಿಗಳಿಂದ ರಕ್ತದಾನ
ದಾವಣಗೆರೆ, ಜು.1- ವೈದ್ಯೋ ನಾರಾಯಣ ಹರಿ, ವೈದ್ಯರ ಜೇಬಿಗೆ ಕತ್ತರಿ, ‘ಮೇಲೆ ಬಿಳಿ ಬಟ್ಟೆ ಒಳಗೆ ಖಾಲಿ ಹೊಟ್ಟೆ’, ಸೇವೆ ಕೇಳುವಿರಿ ನಿರಂತರ ಸಂಬಳ ಕೇಳಿದರೆ ನಿರಾಕಾರ, ಹೆಸರಿಗೆ ಚಪ್ಪಾಳೆ ದುಡ್ಡೆಲ್ಲಿ ಕಾಣದಾದೆ ಎಂಬಿತ್ಯಾದಿ ನೋವಿನ ಘೋಷ ವಾಕ್ಯಗಳು ಶಿಷ್ಯ ವೇತನಕ್ಕಾಗಿ ಕಳೆದ ಮೂರು ದಿನಗಳಿಂದ ಬೀದಿಗಿಳಿದು ಹೋರಾಟ ನಡೆಸುತ್ತಿರುವ ವೈದ್ಯ ವಿದ್ಯಾರ್ಥಿಗಳಿಂದ ಮೊಳಗಿದವು.
ವೈದ್ಯರ ದಿನಾಚರಣೆಯ ದಿನವಾದ ಇಂದೂ ಸಹ ನಗರದ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಜೆಜೆಎಂ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಹೋರಾಟದ ಧ್ವನಿ ಕೇಳಿ ಬಂತು. ಬಿಸಿಲನ್ನೂ ಸಹ ಲೆಕ್ಕಿಸದೇ ಶಿಷ್ಯ ವೇತನಕ್ಕಾಗಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡು, ಧರಣಿ ಹೂಡಿ ಬಿಗಿಪಟ್ಟು ಹಿಡಿದಿದ್ದಾರೆ. ಬಿಸಿಲನ್ನು ತಡೆಯಲು ಕೆಲವರು ಕೊಡೆಗಳನ್ನು ಮತ್ತೆ ಕೆಲವರು ತಾವು ಹಿಡಿದಿರುವ ಘೋಷಣಾ ಫಲಕಗಳ ಆಶ್ರಯ ಪಡೆದಿದ್ದು ಹಾಗೂ ವಿಶೇಷವಾಗಿ ಸ್ಥಳದಲ್ಲೇ ಕುಳಿತು ಪುಸ್ತಕಗಳನ್ನು ಹಿಡಿದು ಓದುವ ಮೂಲಕ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ್ದು ಇಂದು ಕಂಡುಬಂತು.
ಈ ವೇಳೆ ಸ್ಥಳಕ್ಕೆ ನೇತ್ರ ತಜ್ಞ ಡಾ. ವಸುದೇಂದ್ರ ಭೇಟಿ ನೀಡಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರಲ್ಲದೇ, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿ, ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ. ಇಂದು ವೈದ್ಯರ ದಿನಾಚರಣೆಯಂದು ಸೇವೆ ಸಲ್ಲಿಸಬೇಕಾದ ಈ ವೈದ್ಯರು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಶಾಂತಿಯುತವಾಗಿ ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರವು ವೈದ್ಯ ವಿದ್ಯಾರ್ಥಿ ಗಳಿಗೆ ಶಿಷ್ಯ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಾರಿಯರ್ಸ್ ಗಳಿಂದ ಜೀವದಾನ: ವೈದ್ಯರ ದಿನಾಚರಣೆ ಪ್ರಯುಕ್ತ ಮುಷ್ಕರ ನಿರತ ಸುಮಾರು 28 ಮಂದಿ ಕೊರೊನಾ ವಾರಿಯರ್ಸ್ ಗಳಾದ ವೈದ್ಯ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮುಖೇನ ಜೀವದಾನದ ಮಹಾತ್ಕಾರ್ಯಕ್ಕೆ ಮುಂದಾದರು.
ಹೂವಿಗೂ ಕರಗದ ಖಾಕಿ ಪಡೆ : ರಕ್ತದಾನಕ್ಕೂ ಮೊದಲು ನೆರೆದಿದ್ದ ಪೋಲಿಸರು ಹಾಗೂ ಪತ್ರಕರ್ತರಿಗೆ ಧರಣಿ ನಿರತ ವಿದ್ಯಾರ್ಥಿಗಳು ಗುಲಾಬಿ ಹೂ ನೀಡುವ ಮೂಲಕ ವೈದ್ಯರ ದಿನಾಚರಣೆ ಶುಭಾಶಯದೊಂದಿಗೆ ಪ್ರತಿಭಟನೆಗೆ ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಕೆಲ ಪೊಲೀಸರು ಹೂ ಸ್ವೀಕರಿಸಲು ನಿರಾಕರಿಸಿದರು.
ಮುಷ್ಕರ ಕೈಬಿಡಲು ಎರಡನೇ ತಿಳಿವಳಿಕೆ ಪತ್ರ : ಮುಷ್ಕರ ಕೈಬಿಡದಿದ್ದರೆ ಕೋವಿಡ್ ಮಾರ್ಗಸೂಚಿಯಡಿ ಕ್ರಮ ಕೈಗೊಳ್ಳುವುದಾಗಿ ಮುಷ್ಕರ ನಿರತರಿಗೆ ಎಚ್ಚರಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಿನ್ನೆ ರಾತ್ರಿ 8 ಗಂಟೆಯವರೆಗೆ ಡೆಡ್ ಲೈನ್ ನೀಡಿದ್ದರು.
ಆದೇಶದ ನಡುವೆಯೂ ವಿದ್ಯಾರ್ಥಿಗಳು ಮೂರನೇ ದಿನವಾದ ಇಂದೂ ಸಹ ಮುಷ್ಕರ ನಡೆಸಿದರು.
ಪುನಃ ಜಿಲ್ಲಾಧಿಕಾರಿಗಳು ಎರಡನೇ ತಿಳಿವಳಿಕೆ ಪತ್ರ ವನ್ನು ವಿದ್ಯಾರ್ಥಿಗಳಿಗೆ ನೀಡಿದ್ದು, ಮುಷ್ಕರ ಹಿಂಪಡೆದು ಕರ್ತವ್ಯ ನಿರ್ವಹಿಸಲು ತಿಳುವಳಿಕೆ ಪತ್ರ ನೀಡಲಾಗಿತ್ತಾ ದರೂ ಅನುಮತಿ ಪಡೆಯದೇ ಮುಷ್ಕರ ಮುಂದುವರೆ ಸಿದ್ದು, ಇಂದು ಸಂಜೆ 6 ಗಂಟೆಯೊಳಗಾಗಿ ಮುಷ್ಕರ ಹಿಂಪಡೆಯದಿದ್ದರೆ ಕೋವಿಡ್ ಮಾರ್ಗಸೂಚಿಯಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿವಳಿಕೆ ಪತ್ರದಲ್ಲಿ ಸೂಚಿಸಿದ್ದಾರೆ. ನಾಳೆ ಗುರುವಾರವೂ ಮುಷ್ಕರ ನಡೆಸುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.